Monday, August 21, 2017

ನೆನಪಿನ ಪಯಣ - ಭಾಗ 7

ನೆನಪಿನ ಪಯಣ - ಭಾಗ 7

 
ರೂಮಿನೊಳಗೆ ಬಂದರೆ ಜ್ಯೋತಿ ಹಾಗೆ ಮಲಗಿದ್ದರು.
ಆನಂದನಿಗೆ ಸಣ್ಣ ದ್ವನಿಯಲ್ಲಿ ಎಲ್ಲವನ್ನು ತಿಳಿಸಿದೆ. ಸಮಯ ಆಗಲೆ ರಾತ್ರಿ ಒಂಬತ್ತರ ಸಮೀಪ. ಆರ್ಯನ ಹೆಂಡತಿ ಉಷಾ, ತಮಗೆ ಬೆಳಗ್ಗೆ ಆಪೀಸಿಗೆ ಹೋಗಬೇಕಾಗಿದೆ ಎಂದು ತಿಳಿಸಿದರು, ಹಾಗಾಗಿ ಆರ್ಯ ಹಾಗು ಉಷಾಗೆ ಹೊರಡಲು ತಿಳಿಸಿದೆವು. ಅವರು ಒಲ್ಲದ ಮನದಿಂದ ಹೊರಟರು. ಮೂರ್ತಿಗಳು ಸಪ್ಪೆಯಾಗಿಯೆ ಹೊರಟರು. ಸಂದ್ಯಾ ತನ್ನ ಮನೆಗೆ ಪೋನ್ ಮಾಡಿ, ಅವರ ಅಮ್ಮನ ಬಳಿ, ತಾನು ರಾತ್ರಿ ಎಲ್ಲ ಜ್ಯೋತಿಯ ಮನೆಯಲ್ಲಿ ಇರಬೇಕಾಗಬಹುದು ಎಂದು ತಿಳಿಸಿದರು.
ಈಗ ಮಲಗಿರುವ ಜ್ಯೋತಿಯ ಸುತ್ತ, ನಾನು ಆನಂದ ಹಾಗು ಸಂದ್ಯಾ ಕುಳಿತಿದ್ದೆವು.
ಜ್ಯೋತಿ ಪುನಃ ಕನಲಿದಳು, ಅದು ಅವಳು ಮಾತನಾಡುವ ಸೂಚನೆ ಎಂದು ಅರಿತೆವು,.
ನಿಜವಾಗಿತ್ತು ಆಕೆಯ ಮಾತು ಪುನಃ ಪ್ರಾರಂಭವಾಯಿತು
ಸೂರ್ಯನ ರಚನೆ ನಮ್ಮ ಭೂಮಿಯ ರಚನೆಗೆ ಮೂಲವಸ್ತುವಾಗಿ ಕಾಣುತ್ತದೆ. ಇದನ್ನ ಆಕಾಶವೆಂದು ಕರೆಯುವುದೊ ಬೇಡವೋ ತಿಳಿಯದು. ಅಗಾದವಾದ ಅವಕಾಶ. ಮೊಡ ದಟೈಸಿದಂತೆ ಬರಿಯ ಬಿಳಿಯ ಧೂಮ. ಆದರೆ ಅದು ಕೇವಲ ಧೂಮವಾಗದೆ ಶಕ್ತಿ ಸಂಚಯಗೊಂಡ ಮೂಲವಸ್ತು. ಒಳಗೆ ಅಗಣಿತ ವೇಗದಿಂದ ಸುತ್ತುತ್ತಿರುವ ಧೂಮ ಸುಳಿ. ನಡುಬಾಗದಲ್ಲಿ , ಎಂತದೋ ಕುಸಿತ. ಸೂರ್ಯನ ಮೂಲ ಸ್ವರೂಪ. ಕೋಟಿ ಕೋಟಿ ಜಲಜನಕ ಬಾಂಬುಗಳನ್ನು ಸಿಡಿಸಿದರು, ನಾವು ಉಹಿಸಲಾಗದ ಅಪಾರ ಶಕ್ತಿಯ ಸಂಚಯ ಸೂರ್ಯ. ಅಂತಹ ಅಂತರ್ ವಿಸ್ಪೋಟಗಳಿದಂಲೆ ತನ್ನ ಜೀವಿತ ಹಾಗು ಆ ಶಕ್ತಿಯ ಮೂಲವೆ ಭೂಮಿ ಹಾಗು ಇತರೆ ಗ್ರಹಗಳಿಗೂ ಅಹಾರವೆನ್ನುವುದು ವಿಚಿತ್ರ. ಸೂರ್ಯನ ಪ್ರಾರಂಭಿಕ ರೂಪವನ್ನು ವರ್ಣಿಸುವುದು ಪದಗಳಿಂದ ಅಶಕ್ಯ. ಆ ಅಪಾರ ಶಕ್ತಿಯಾಗಲಿ, ಬೆಳಕಾಗಲಿ, ಅಲ್ಲಿಂದ ಹುಟ್ಟುತ್ತಿರುವ ಅಪರಿಮಿತ ಶಾಖದ ಶಕ್ತಿಯಾಗಲಿ ಹೋಲಿಕೆಯೆ ಇಲ್ಲದ ಅಸದೃಷ್ಯ ಘಟನೆ ಎನ್ನಿಸುತ್ತಿದೆ.
ಇಂತಹ ಒಂದು ಕ್ರಿಯೆ ಪೂರ್ಣವಾಗುವುದು ಮಾತ್ರ ಕೋಟಿ ಕೋಟಿ ಮನುಷ್ಯ ವರ್ಷಗಳ ಕಾಲಮಾನದಲ್ಲಿ, ಇಲ್ಲಿ ಕಾಲವೆಂಬುದೆ ಇಲ್ಲ. ಕಾಲಕ್ಕೆ ಅರ್ಥವೂ ಇಲ್ಲ. ಕಾಲದಲ್ಲಿ ಹಿಂದೆ ಹೋಗುವುದು ಅನ್ನುವ ಮಾತು ಅಸಂಗತವಾಗಿ ಕಾಣುತ್ತಿದೆ. .... ಜ್ಯೋತಿಯ ನಗು.... ಅಂತಹ ಸೂರ್ಯನ ನಿರ್ಮಾಣದ ಕ್ರಿಯೆಯನ್ನು ವರ್ಣಿಸಲು ಹೇಗೆ ಸಾದ್ಯ. ತಮಸೋಮ ಜ್ಯೋತಿರ್ಗಮಯ ಎನ್ನುವ ಮಾತೊಂದೆ ಸಾಕು ಅನ್ನಿಸುತ್ತಿದೆ ಅವನ ಸೃಷ್ಟಿಯನ್ನು ವರ್ಣಿಸಲು. ಅಂತಹ ಸೂರ್ಯನ ಅಗಾದ ಶಕ್ತಿಯೆ ಭೂಮಿಯಾಗಲಿ ಇತರ ಗ್ರಹಗಳಾಗಲಿ ರೂಪಗೊಳ್ಳಲು, ಇರಲು, ಅಲ್ಲಿ ಜೀವಿ ಎನ್ನುವ ವಸ್ತು ಕಾಣಿಸಿಕೊಳ್ಳಲು ಸಾದ್ಯವಾಗಿಸಿದೆ
 
ಜ್ಯೋತಿ ತನ್ನ ಮಾತನ್ನು ಮುಂದುವರೆಸಿದ್ದಳು. ಸೂರ್ಯನ ರಚನೆಯನ್ನು ಅವನ ಸ್ವರೂಪವನ್ನು , ಅವನ ಮನೋಹರ ಭೀಬಿತ್ಸ, ಉಗ್ರ ರೂಪಗಳನ್ನು ವರ್ಣಿಸುತ್ತಲೇ ಹೋದಳು..
ಆನಂದ
’ನಾನು ಹೊರಗೆ ಹೋಗಿ ಎಲ್ಲರಿಗೂ ತಿನ್ನಲು ಏನಾದರು ತರುತ್ತೇನೆ, ನೀವು ಜ್ಯೋತಿಯ ಬಳಿಯೆ ಇರಿ’ ’ ’
ಅವನು ಹೊರಗೆ ಹೋಗಿ ಸ್ಕೂಟರ್ ಸ್ಟಾರ್ಟ್ ಮಾಡಿ ಹೋದ ಶಬ್ದ ಕೇಳಿಸಿತು. ನಂತರ ನಿಶ್ಯಬ್ದ.
ಅಂತಹ ನಿಶ್ಯಬ್ದದ ರಾತ್ರಿಯಲ್ಲಿ ಜ್ಯೋತಿ ಮಾತ್ರ ಸಣ್ಣ ದ್ವನಿಯಲ್ಲಿ ಸೂರ್ಯನ ಮೇಲ್ಮೈಯನ್ನು ಅದರ ಅಸದೃಷ್ಯ ಹೋಲಿಕೆಯನ್ನು ವಿವರಿಸುತ್ತಿದ್ದಳು. ಕೆಲವು ಕ್ಷಣಗಳಲ್ಲಿ , ಅವಳು ಪುನಃ ಮೌನವಾದಳು.
ಹಿಂದಕ್ಕೆ ಅಂದರೆ ಜ್ಯೋತಿ ತನ್ನ ನೆನಪಿನ ಪಯಣದಲ್ಲಿ ಎಲ್ಲಿಯವರೆಗೂ ಹೋಗಲು ಸಾದ್ಯ? ಅನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ಅಷ್ಟಕ್ಕೂ ಸೂರ್ಯನ ರಚನೆಯ ನಂತರ ಮತ್ತೂ ಹಿಂದೆ ಹೋಗುವುದು ಅಂದರೆ ಅರ್ಥವೇನು. ಇವಳು ಮಾತನಾಡುತ್ತಿರುವದಾದರು ಏನು, ಅದು ಆಕೆಗೆ ಹೇಗೆ ಕಾಣಿಸುತ್ತಿದೆ. ಕಾಣುತ್ತದೆ ಅನ್ನುವದಾದರೆ ಆಗ ಆಕೆಯ ಸ್ವರೂಪವಾದರು ಏನು, ಆಗಿನ್ನು ಜೀವಿಗಳೆ ಈ ಸೃಷ್ಟಿಯಲ್ಲಿರಲಿಲ್ಲ ಅನ್ನುವ ಭಾವ ಬಂದಿತು.
ನನ್ನ ಮನಸೀಗ ಹುಚ್ಚುಚ್ಚಾಗಿ ಚಿಂತಿಸುತ್ತಿತ್ತು. ಒಂದು ವೇಳೆ ಭೂಮಿಯಲ್ಲಿನ ಈ ಜೀವಿಗಳೆಲ್ಲ ಹೊರಗಿನ ಯಾವುದೋನಕ್ಷತ್ರ ಲೋಕದಿಂದ ಬಂದಿದೆಯೆಂದು ಉಹಿಸುವದಾದರೆ, ನಮ್ಮ ಮನುಷಯನ ಮೆದುಳಿನಲ್ಲಿ , ಸೂರ್ಯ ನಕ್ಷತ್ರಗಳ ರಚನೆಯ ವಿವರವೂ ಹುದುಗಿರಲು ಸಾದ್ಯವೇ ಎಂದೆಲ್ಲ ಚಿಂತಿಸುತ್ತಿದ್ದೆ. ನಾವೀಗ ಯಾವುದೋ ಭ್ರಮೆಯ ಲೋಕದಲ್ಲಿ ಇದ್ದಂತೆ ಇದ್ದೆವು. ಯಾವುದೋ ಸಣ್ಣ ಮಾತಿನಿಂದ ಪ್ರಾರಂಭವಾದ ನಮ್ಮ ಪರಿಸ್ಥಿತಿ ಇಂತಹ ವಿಚಿತ್ರ ಸಂದರ್ಭದಲ್ಲಿ ಸಿಲುಕುವಂತೆ ಮಾಡಿತ್ತು. ಬಹುಶಃ ನಾಳೆ ಬೆಳಗಾದರೆ ಈಕೆಯ ಮಗನೂ ಬರುವ , ಅವನು ಹೀಗೆ ಮಲಗಿರುವ ತನ್ನ ತಾಯಿಯನ್ನು ಕಂಡರೆ ಏನೆಂದು ಭಾವಿಸುವನೋ, ವಯಸ್ಸಿನಲ್ಲಿ ಹಿರಿಯರಾದ ನಾವೆಲ್ಲ ಸೇರಿ, ಯಾವುದೋ ಉದ್ದಟತನ, ಬಾಲಿಷವಾಗಿ ಚಿಂತಿಸಿ ಅವರ ಅಮ್ಮನನ್ನು ಇಂತಹ ಪರಿಸ್ಥಿತಿಗೆ ದೂಡಿದ್ದಾರೆ ಎಂದು ನೊಂದುಕೊಳ್ಳುವದಿಲ್ಲವೆ ?
ಆದರೆ ಸ್ವಸ್ಥವಾಗಿ ಮಲಗಿದ್ದ ಜ್ಯೋತಿ ಮಾತ್ರ ಎಲ್ಲ ಯೋಚನೆಗಳಿಂದ ಹೊರತಾದವರಂತೆ, ಸೂರ್ಯನ ರಚನೆಯನ್ನು ಅದರ ಭೀಕರತೆಯನ್ನು ಸೌಂದರ್ಯವನ್ನು ವರ್ಣಿಸುತ್ತಲೇ ಹೋದರು. ಕಡೆಗೊಮ್ಮೆ ಆಕೆಯ ಮಾತುಗಳು ನಿಂತವು.
ಹೊರಗೆ ಸ್ಕೂಟರ್ ನಿಂತ ಶಬ್ಧ, ಬಹುಶಃ ಆನಂದ ಬಂದ ಅನ್ನಿಸುತ್ತೆ ಅಂದುಕೊಳ್ಳುವಾಗಲೆ, ಆನಂದ ಊಟದ ಪಾರ್ಸಲ್ ಗಳನ್ನು ಹಿಡಿದು ಒಳಬಂದ. ನನಗಂತೂ ಸಂಕೋಚವೆನಿಸುತ್ತ ಇತ್ತು.
 
ನಾನು ಜ್ಯೋತಿಯನ್ನು ಊಟಕ್ಕೆ ಎಬ್ಬಿಸಿನೋಡೋಣಾ ಎಂದುಕೊಂಡೆ. ಡಾಕ್ಟರ್ ಹೇಳಿದ್ದು ನೆನಪಿತ್ತು, ಅವಳನ್ನು ಬಲವಂತ ಮಾಡಬೇಡಿ ಎಂದು.
ನಾನು ಮೆಲುದ್ವನಿಯಲ್ಲಿ
ಜ್ಯೋತಿ, ಆನಂದ ಊಟ ತಂದಿದ್ದಾರೆ, ಏಳಿ ಊಟ ಮಾಡೋಣಾವೆ ? ಏಳುತ್ತೀರಾ ಎಂದೆ
ಜ್ಯೋತಿಯ ಕಡೆಯಿಂದ ದೀರ್ಘಮೌನ, ಮತ್ತೆ ಕೇಳಿದೆ
ಜ್ಯೋತಿ ಏಳಿ ಊಟ ಮಾಡೋಣವೆ ? ನೋಡಿ ಆನಂದ ನಿಮಗಾಗಿ ಊಟ ತಂದಿದ್ದಾರೆ
ಅತಿ ನಿಧಾನ ಅನ್ನುವಂತೆ ಕೇಳಿದರು
ಆನಂದ ....... ಆನಂದ ಯಾರು ?
ನನಗೆ ಗಾಭರಿ ಅನ್ನಿಸಿತು.
ಇದೇನು ಹೀಗನ್ನುವಿರಿ, ಆನಂದ ನಿಮ್ಮ ಪತಿ, ಬೆಳಗ್ಗೆ ನಿಮ್ಮ ಮಗ ಶಶಾಂಕ ಬರುತ್ತಿದ್ದಾನೆ ಎಂದೆ
ಆಕೆ ಮತ್ತೆ,
ಆನಂದ...... ಶಶಾಂಕ...... ಯಾರು ..... ಹಿಂದೆ ಮತ್ತೂ ಹಿಂದೆ ........ ಹೋಗುತ್ತಿರುವೆ
ಎಂದರು
ನನ್ನ ಮುಖದಲ್ಲಿನ ಗಾಭರಿ ನೋಡುತ್ತಿದ್ದ, ಆನಂದ, ನಿಧಾನವಾಗಿ ಬಂದು ನನ್ನ ಹೆಗಲ ಮೇಲೆ ಕೈ ಇಟ್ಟು ಮೃದುವಾಗಿ ಅದುಮಿದ.
ಗಾಭರಿ ಬೇಡ ನೋಡೋಣ ಡಾಕ್ಟರ್ ಬಂದರೆ ಸರಿಹೋಗಬಹುದು ಎಂದ ,
ಸಂಧ್ಯಾರಿಗೆ ಊಟವನ್ನು ಸಿದ್ದಪಡಿಸಲು ತಿಳಿಸಿ, ಸುಮ್ಮನೆ ಕುಳಿತ. ಸಂದ್ಯಾ ನನಗೆ ಆನಂದನಿಗೆ ಇಬ್ಬರಿಗೂ ತಟ್ಟೆಯಲ್ಲಿ ಊಟ ಹಾಕಿ ಕೊಟ್ಟರು. ಅದೇನು ಅಂತಹ ಹಸಿವಿನಲ್ಲೂ ಸಹ ತಿನ್ನಲೂ ಕಷ್ಟವಾಗುತ್ತಿತ್ತು. ಇದೆಂತಹ ಪ್ರಮಾಧ ಮಾಡಿದೆ ಎನ್ನುವ ಆತಂಕ ನನ್ನ ಮನಸನ್ನು ತುಂಬಿತ್ತು. ಸಂದ್ಯಾರಿಗೆ ಸಹ ಊಟ ಮಾಡಲು ಆನಂದ ತಿಳಿಸಿದ. ನಾವು ಸೇರಿದಷ್ಟು ಊಟ ಮಾಡಿ ಮುಗಿಸಿದೆವು, ತಂದಿದ್ದ ಅಹಾರದಲ್ಲಿ ಅರ್ಧವಿನ್ನು ಪಾತ್ರೆಗಳಲ್ಲಿಯೆ ಉಳಿದಿತ್ತು.
ನಾನು ಸ್ವಲ್ಪ ಕಾಲ ಹಾಲಿನಲ್ಲಿ ಕುಳಿತಿದ್ದೆ. ಈಗ ಡಾಕ್ಟರ್ ಬರುವದನ್ನು ಕಾಯುವದರ ವಿನಃ ಬೇರೆನು ಮಾಡಲು ಸಾದ್ಯವಿಲ್ಲ ಎನ್ನುವ ಸ್ಥಿತಿ. ಮತ್ತೆ ರೂಮಿನಲ್ಲಿ ಹೋದೆ. ಸಂದ್ಯಾ ಜ್ಯೋತಿಯ ಪಕ್ಕ ಕುಳಿತಿದ್ದರು. ಸಂದ್ಯಾರ ಮುಖ ಕಳೆಗುಂದಿತ್ತು. ಏನು ಹೀಗಾಯಿತಲ್ಲ ಎನ್ನುವ ಚಿಂತೆ. ಜ್ಯೋತಿ ಮಾತ್ರ ಯಥಾ ಪ್ರಕಾರ ಮಲಗಿದ್ದರು. ಅವರ ಮುಖದಲ್ಲಿ ಯಾವುದೇ ತೊಂದರೆ ಇರದೆ ಸಾಮಾನ್ಯವಾಗಿ ಮಲಗುವ ಹಾಗೆ ಇದ್ದರು.
 
ನನ್ನ ಮೊಬೈಲ್ ರಿಂಗ್ ಆಯಿತು. ಓ ಅದೇ ಡಾಕ್ಟರ್ ನಂಬರಿನಿಂದ ಕಾಲ್ ಬಂದಿತ್ತು. ಅವರೇ ಹೇಳಿದರು,
’ನಾನೀಗ ರಸ್ತೆಯ ತುದಿಯಲ್ಲಿದ್ದೇನೆ, ಟೂ ವೀಲರ್ ನಲ್ಲಿಯೆ ಬರುತ್ತಿದ್ದೇನೆ, ನೀವು ಯಾರಾದರು ಮನೆಯಿಂದ ಹೊರಬಂದರೆ ನನಗೆ ಮನೆ ಗುರುತಿಸಲು ಆಗುತ್ತದೆ’
ನಾನು ಸರಿ ಎಂದೆ, ನಾನು ಹೊರಗೆ ಬರುತ್ತಿದ್ದೇನೆ ಎಂದು ತಿಳಿಸಿ. ಆನಂದನಿಗೆ ಹೇಳಿದೆ. ನಾನು ಆನಂದ ಇಬ್ಬರು ಬಾಗಿಲು ತೆರೆದು,ಹೊರಗೆ ಬಂದು ಗೇಟ್ ತೆಗೆದು ರಸ್ತೆಯಲ್ಲಿ ಬಂದು ನಿಂತೆವು. ಒಂದೆರಡು ನಿಮಿಷವಾಗಿರಬಹುದು, ರಸ್ತೆಯಲ್ಲಿ ಮೋಟಾರ್ ಬೈಕ್ ಬರುತ್ತಿರುವುದು ಕಾಣಿಸಿತು. ಹತ್ತಿರ ಬಂದು ನಿಲ್ಲಿಸಿದ ಅವರು
’ ನೀವೇ ಅಲ್ಲವೆ ಕಾಲ್ ಮಾಡಿದ್ದು, ನಾನು ಡಾಕ್ಟರ ಶ್ರೀಧರ್ ಎಂದು ಅವರನ್ನು ಪರಿಚಯಿಸಿಕೊಂಡರು
ಆನಂದ ಮತ್ತು ನಾನು ಅವರನ್ನು ಬನ್ನಿ ಎಂದು ಒಳಗೆ ಕರೆತಂದೆವು. ನಾನು ಅವರ ಸ್ನೇಹಿತ. ಅಚ್ಚುತ ನನ್ನ ತಮ್ಮನ ಮಗ ಎಂದು ತಿಳಿಸಿದೆ.
ಸರಿ ಈಗ ಸಮಸ್ಯೆ ತಿಳಿಸಿ, ಅಂದ ಹಾಗೆ ಪೇಷೆಂಟ್ ಎಲ್ಲಿದ್ದಾರೆ, ಎಂದರು
ಅವರು ಪೇಷೆಂಟ್ ಎಂದು ಕೇಳಿದ್ದು, ನನಗೆ ಒಂದು ರೀತಿ ಆಯಿತಾದರು ಏನು ಮಾಡುವುದು ಸುಮ್ಮನಾದೆ.
ನಾನು ಈಗ ಮೊದಲಿನಿಂದ ನಡೆದ ಕತೆಯನ್ನೆಲ್ಲ ಪುನಃ ತಿಳಿಸಿದೆ. ನಂತರ ಅವರು ಯೋಚಿಸುತ್ತ ಬನ್ನಿ ರೂಮಿನೊಳಗೆ ಹೋಗೋಣ ಎನ್ನುತ್ತ ಹೊರಟರು. ನಾವು ಹಿಂದೆ. ಒಳಗೆ ಜ್ಯೋತಿಯ ಪಕ್ಕ ಕುಳಿತಿದ್ದ ಸಂದ್ಯಾ ಎದ್ದು ಡಾಕ್ಟರಿಗೆ ಜಾಗಮಾಡಿಕೊಟ್ಟರು. ಅಲ್ಲಿ ಕುಳಿತ, ಡಾಕ್ಟರ್, ಜ್ಯೋತಿಯ, ನಾಡಿಯನ್ನುಪರೀಕ್ಷಿಸಿ, ನಂತರ ಮೃದುವಾಗೆ ರೆಪ್ಪೆಗಳನ್ನು ಬಿಡಿಸಿ ನೋಡಿದರು. ಜ್ಯೋತಿಯ ಕೈ ಬೆರಳುಗಳನ್ನು, ಕಾಲುಗಳ ಬೆರಳನ್ನು ಅಲುಗಿಸಿ, ಮತ್ತೇನೇನೊ ಕೆಲವು ದೈಹಿಕ ಪರೀಕ್ಷ ನಡೆಸಿ, ಅವಳ ಹೆಸರನ್ನು ನಮ್ಮಿಂದ ತಿಳಿದು, ಆಕೆಯ ಕಿವಿಯತ್ತ ಬಗ್ಗಿ
ಜ್ಯೋತಿ.... ಜ್ಯೋತಿ ಎಂದು ಕೂಗಿದರು.
ಆಕೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
ನಮ್ಮತ್ತ ತಿರುಗಿ ಹೇಳಿದರು,
ಆಕೆ ನನ್ನ ಮಾತನ್ನು ಕೇಳಿಸಿಕೊಳ್ಳುತ್ತಲೆ ಇಲ್ಲ ಅನ್ನಿಸುತ್ತಿದೆ, ಅಸಲಿಗೆ ಹೊರಗಿನ ಯಾವುದೇ ಶಬ್ದ ಕೇಳಿಸಿಕೊಳ್ಳುತ್ತಿಲ್ಲ ಎಂದರು.
ನಾನು ಇಲ್ಲ ಡಾಕ್ಟರ್ , ಕೆಲವು ಸಲ ನನ್ನ ಮಾತಿಗೆ ರಿಯಾಕ್ಟ್ ಮಾಡುತ್ತಿದ್ದಾರೆ ಎಂದೆ
ಹಾಗಿದ್ದರೆ ನೀವು ಆಕೆಯನ್ನು ಮಾತನಾಡಿಸಿ ನೋಡೋಣ ಎನ್ನುತ್ತ ಎದ್ದು, ರೂಮಿನಲ್ಲಿಯ ಎಲ್ಲ ದೀಪಗಳನ್ನು ಹಾಕುವಂತೆ ತಿಳಿಸಿದರು
ನಾನು ನಿಧಾನಕ್ಕೆ
ಜ್ಯೋತಿ.... ನೋಡಿ ಎದ್ದೇಳಿ, ಡಾಕ್ಟರ್ ಬಂದಿದ್ದಾರೆ, ನಿಮ್ಮನ್ನು ಪರೀಕ್ಷಿಸಬೇಕಂತೆ. ಎಚ್ಚರ ಮಾಡಿಕೊಳ್ಳಿ. ಎಂದೆ
 
ಜ್ಯೋತಿಯ ಮುಖದಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲ , ಒಂದು ನಿಮಿಶವಾಯಿತೇನೊ , ಏನು ಮಾಡುವುದು ಎಂದು ಚಿಂತಿಸುವಾಗ
ಕತ್ತಲು..... ಕತ್ತಲಿನತ್ತ ಪಯಣ ಎಂದು ಕನಲಿದರು ಜ್ಯೋತಿ
ಈಗ ಡಾಕ್ಟರ್ ಆಸಕ್ತಿಯಿಂದ ನೋಡುತ್ತಿದ್ದರು.
ಏನು ಕತ್ತಲು ಜ್ಯೋತಿ ಎಂದೆ
 
ಏನಿಲ್ಲ. ಸೃಷ್ಟಿಯ ಮೊಟ್ಟ ಮೊದಲ ಹಂತ. ಎಲ್ಲದಕ್ಕಿಂತ ಮೊದಲು. ಏನು ಇಲ್ಲದ ಸ್ಥಿತಿಯತ್ತ ಪಯಣ ಎಂದರು. ಈಕೆ ಏನು ಹೇಳುತ್ತಿದ್ದಾರೆ ಎಂದು ಚಿಂತಿಸುತ್ತಿದ್ದೆ. ಆಕೆ ಮುಂದುವರೆದರು
 
ಕತ್ತಲು, ಕತ್ತಲು ಹೊರತು ಏನಿಲ್ಲ. ಏನಿಲ್ಲ ಅಂದರೆ ಏನು ಇಲ್ಲ, ಖಾಲಿ ಜಾಗವು ಇಲ್ಲ, ಶೂನ್ಯವೂ ಇಲ್ಲ. ಆದರು ಸೃಷ್ಟಿಗೆ ಬೇಕಾದ ಎಲ್ಲ ಸಿದ್ದತೆಯೂ ನಡೆದಿದೆ. ನಾನು ಅದಕ್ಕೆ ಸಾಕ್ಷಿ ಆಗಲಿದ್ದೇನೆ
ಜ್ಯೋತಿಯ ಮುಖದಲ್ಲಿ ಅಪಾರ ಸಂತಸ.
ಇದೊಂದು ಸ್ಥಿತಿ, ಏನು ಇಲ್ಲ ಅಂದರೆ ಏನು ಇಲ್ಲ, ಬೆಳಕೂ ಇಲ್ಲ , ಕತ್ತಲೆಯೂ ಅಲ್ಲ. ಶಬ್ದವೂ ಇಲ್ಲ. ಇಲ್ಲಿ ಎಲ್ಲವೂ ನಿಶ್ಯಬ್ದವೇ. ಸಮಯವೆನ್ನುವುದು ಇಲ್ಲಿ ಸಮಾದಿಯಾಗಿದೆ. ಇಲ್ಲಿಂದ ಹಿಂದಕ್ಕೆ ಸಮಯವೂ ಇಲ್ಲ. ಬೆಳಕು ಸಮಯ ಶಬ್ದ ಎಲ್ಲವೂ ಬೀಜರೂಪದಲ್ಲಿ ಹುದುಗಿಹೋಗಿದೆ. ಅಸಲಿಗೆ ಆಕಾಶವೇ ಇಲ್ಲ , ಆಕೆಯ ಹೊರತಾಗಿಏನು ಇಲ್ಲ.
 
ನನಗೆ ಕೊಂಚ ಕುತೂಹಲವೆನಿಸಿತ್ತು
ಆಕೆಯೆ ಆಕೆ ಎಂದರೆ ಯಾರು?
ಶಕ್ತಿ .... ಶಕ್ತಿ ಯನ್ನು ಆಕೆ ಎಂದೆ. ಪೂರ್ಣ ಪ್ರಖಂಡ ಶೂನ್ಯದಲ್ಲಿ ಶಕ್ತಿಯೊಂದು ನಿಗೂಡವಾಗಿ ಹುದುಗಿದೆ. ಬೀಜರೂಪದಲ್ಲಿ ಶಕ್ತಿಅಡಗಿದೆ. ಅಂತಹ ಶಕ್ತಿಯ ಅವಿರ್ಭವಕ್ಕಾಗಿ ಕ್ಷಣ ಸಜ್ಜಾಗಿದೆ. ತನ್ನೊಳಗೆ ತಾನು ಅಸ್ತಂಗತವಾಗಿರುವ ಆ ಪ್ರಚಂಡ ಶಕ್ತಿ ಪ್ರಕಟಗೊಳ್ಳಲಿದೆ, ಮತ್ತು ಪರಿಪೂರ್ಣ ಭ್ರಹ್ಮಾಂಡದ ಉದಯಕ್ಕೆ ಕಾರಣವಾಗಲಿದೆ.
 
ಅಂದರೆ ನೀವು ಈಗ ಬಿಗ್ ಬಾಂಗ್ ಸ್ಪೋಟದ ಬಗ್ಗೆ ಹೇಳುತ್ತಿದ್ದೀರಾ ?
ಹೌದು. ಅಂತಹ ಪ್ರಚಂಡ ಸ್ಪೋಟಕ್ಕೆ ನಾನು ಸಹ ಸಾಕ್ಷಿಯಾಗಲಿದ್ದೇನೆ.
ನಾನು ಸಹ ಅಂದರೆ ನಿಮ್ಮ ಜೊತೆ ಮತ್ಯಾರು ಇದ್ದಾರೆ.
ನನಗೆ ಕುತೂಹಲ
ದೀರ್ಘ ಮೌನ
ತಿಳಿಯದು ,... ಹೇಳಲಾರೆ....... ಗೊತ್ತಿಲ್ಲ... ನಾನೀಗ ಸಮಯದ ಆಳದ ಸೆಳೆತದಲ್ಲಿ ಹುದುಗಿಹೋಗಿದ್ದೇನೆ. ಅಲ್ಲಿ ಯಾವ ಅನುಭವವೂ ಇಲ್ಲ ಬೆಳಕಿಲ್ಲ ಶಬ್ದವಿಲ್ಲ ಚಲನೆಯಿಲ್ಲ , ಸ್ಪೇಸ್ ಇಲ್ಲ, ಅಂತಹ ಮಹಾ ಸ್ಪೋಟದ ನಂತರ ನನ್ನ ಸ್ಥಿತಿ ಏನೋ ನನಗೂ ಗೊತ್ತಿಲ್ಲ.
ಮತ್ತೆ ನೀವು ಈ ಕಾಲದ ಪಯಣವನ್ನು ನಿಲ್ಲಿಸಿ ಹಿಂದೆ ಬರುವುದು ಯಾವಾಗ?
ಹಿಂದೆ ನಾನು ಹಿಂದೆ ಹೋಗುತ್ತಿದ್ದೆ ಇಷ್ಟು ಕಾಲ, ಈಗ ಸ್ಥಿರವಾಗಿದ್ದೇನೆ ..... ಮತ್ತೆ ಹಿಂದಕ್ಕೆ ಚಲಿಸಲಾರೆ.
ಹಾಗಲ್ಲ ನೀವು ಎಚ್ಚರಗೊಳ್ಳುವುದು ಯಾವಾಗ, ನಿಮಗಾಗಿ ಎಲ್ಲರೂ ಕಾಯುತ್ತಿದ್ದೇವೆ
ಗೊತ್ತಿಲ್ಲ ನಾನೀಗ ಕಾಲದ ಕೊನೆಯ ತುದಿ ತಲುಪಿರುವೆ. ಇಲ್ಲಿ ಎಲ್ಲವೂ ಸ್ಥಬ್ದ. ಇಲ್ಲಿ ಬೆಳಕಿಲ್ಲ ಶಬ್ದವಿಲ್ಲ ಚಲನೆಯಿಲ್ಲ ಸ್ಪೇಸ್ ಇಲ್ಲ ಮಹಾಸ್ಪೋಟಕ್ಕೆ ಕಾಯುತ್ತಿರುವೆ , ಯಾರಿಗೂ ಸಿಗದ ಅಪೂರ್ವ ಅವಕಾಶಕ್ಕಾಗಿ ಕಾದಿರುವೆ..... ಕತ್ತಲೆ ....... ನಿಗೂಡ ಕತ್ತಲೆ...
 
ಜ್ಯೋತಿಯ ಮಾತು ನಿಂತು ಹೋಯಿತು.
ನಂತರ ನಾನು ಮಾತನಾಡಿಸಲು ಎಷ್ಟೋ ಪ್ರಯತ್ನಪಟ್ಟೆ. ಆಗಲಿಲ್ಲ . ಆಕೆ ನನ್ನ ಮಾತಿಗೂ ಸಹ ಸ್ಪಂದಿಸುವದನ್ನು ನಿಲ್ಲಿಸಿದಳು.
ಡಾಕ್ಟರ್ , ಕುತೂಹಲದಿಂದ ನಮ್ಮ ಮಾತನ್ನು ಕೇಳುತ್ತಿದ್ದವರು ಏನು ಅರ್ಥವಾಗದಂತೆ ಕುಳಿತರು...
ಕಡೆಗೆ ಬಹಳ ಸಮಯದ ನಂತರ ಹೇಳಿದರು.
ಆಕೆಯ ಪರಿಸ್ಥಿತಿ ಅರ್ಥಮಾಡಿಕೊಳ್ಳಲಾಗುತ್ತಿಲ್ಲ . ನೀವು ನಿಮಾನ್ಸ್ ಗೆ ಅಡ್ಮಿಟ್ ಮಾಡಬೇಕಾಗಿದೆ ಅನ್ನಿಸುತ್ತೆ. ನಾನು ನನ್ನ ಸೀನಿಯರ್ ಜೊತೆ ಬೆಳಗ್ಗೆ ಮಾತನಾಡುವೆ. ಈಕೆಯ ದೇಹ ಸ್ಥಿತಿ ಸ್ಥಿರವಾಗಿದೆ. ಇವರ ಹಾರ್ಟ್ ಬೀಟ್ ಆಗಲಿ. ಪಲ್ಸ್ ಆಗಲಿ, ರಕ್ತದೊತ್ತಡವಾಗಲಿ ಅಂತಹ ವ್ಯೆತ್ಯಾಸವೇನಿಲ್ಲ ಅತ್ಯಂತ ಸಹಜವಾಗಿದೆ. ಈಕೆಯ ಮೆದುಳಿನ ಸ್ಥಿತಿ ಹಾಗು ಉಳಿದ ಪರೀಕ್ಷೆಗಳನ್ನು ಇಲ್ಲಿ ಮಾಡಲಾಗುವದಿಲ್ಲ. ನೀವು ಸಾದ್ಯವಾದರೆ ಈಗಲೆ ಅಥವ ನಾಳೆ ಬೆಳಗ್ಗೆ ಈಕೆಯನ್ನು ಇಲ್ಲಿಂದ ಸಾಗಿಸಿ, ಅಂಭ್ಯೂಲೆನ್ಸ್ ಗೆ ಕಾಲ್ ಮಾಡಿ. ನಿಮಾನ್ಸ್ ಗೆ ಅಡ್ಮಿಟ್ ಆದನಂತರ ಮುಂದಿನ ಕ್ರಮದ ಬಗ್ಗೆ ಚಿಂತಿಸೋಣ. ಸದ್ಯಕ್ಕೆ ಈಕೆಗೆ ಯಾವುದೇ ಮೆಡಿಸನ್ ಕೊಡುವ ಅವಶ್ಯಕತೆ ಕಾಣುತ್ತಿಲ್ಲ
ಮುಂದುವರೆಯುವುದು...

Friday, August 18, 2017

ನೆನಪಿನ ಪಯಣ - ಭಾಗ 6

ನೆನಪಿನ ಪಯಣ - ಭಾಗ 6


ಈಗ ನನಗೆ ಅನ್ನಿಸುತ್ತಿದೆ. ನಮ್ಮಿಂದ ದೊಡ್ಡದೊಂದು ತಪ್ಪು ಆದ ಹಾಗಿದೆ. ಇದನ್ನು ಸರಿಪಡಿಸಲು ಹೊರಗಿನವರ ಸಹಾಯ ಇಲ್ಲದೆ ಆಗಲ್ಲ. ನೆನಪಿಸಿಕೊಂಡೆ. ಪುಣೆಯಲ್ಲಿ ನನ್ನ ತಮ್ಮನ ಮಗ ಒಬ್ಬನಿದ್ದಾನೆ ಅಚ್ಯುತ. ಅವನು ಡಾಕ್ಟರ್ , ಮನೋವೈದ್ಯಕೀಯದಲ್ಲಿ ಪರಿಣಿತ. ರೂಮಿನಿಂದ ಹೊರಗೆ ಬಂದು, ಹಾಲಿನಲ್ಲಿ ಕುಳಿತು. ನನ್ನ ಮೊಬೈಲ್ ತೆಗೆದು ಅವನ ನಂಬರ್ ಹುಡುಕಿ ಕಾಲ್ ಮಾಡಿದೆ

ಹಲೋ ,ನಾನಪ್ಪ ನಿಮ್ಮ ದೊಡ್ಡಪ್ಪ
ಹೇಳಿ ದೊಡ್ಡಪ್ಪ, ಅಪರೂಪಕ್ಕೆ ಕರೆ ಮಾಡಿದ್ದೀರಿ. ದೊಡ್ಡಮ್ಮ ಹೇಗಿದ್ದಾರೆ ? ಎಂದೆಲ್ಲ ವಿಚಾರಿಸಿದ.
ಎಲ್ಲ ಚೆನ್ನಾಗಿದ್ದಾರೆ ಎಂದು ತಿಳಿಸಿ ಅವನ ಮಾತುಗಳನ್ನು ಕತ್ತರಿಸುತ್ತಾ ಹೇಳಿದೆ, ಅಚ್ಯುತ ನಾನೀಗ ಒಂದು ತೊಂದರೆಯಲ್ಲಿದ್ದೇನೆ ಅಂತ ತಿಳಿಸಿ. ನಡೆದ ಘಟನೆಯನ್ನೆಲ್ಲ ವಿವರಿಸಿದೆ.
ನನಗೆ ನಾಚಿಕೆ ಅನ್ನಿಸಿತು. ಆದರೂ ನಾವು ಮಾಡಿರುವ ಕೆಲಸ ಆದರೂ ಹೇಳಲೇ ಬೇಕಿತ್ತು. ಅವನು ನನ್ನ ಮಾತುಗಳನ್ನೆಲ್ಲ ಕೆಲಕಾಲ ಕೇಳಿಕೊಂಡ, ನಂತರ ಕ್ಷಣದ ಮೌನ
ದೊಡ್ಡಪ್ಪ , ನೀವು ಹೇಳುವದನ್ನು ಕೇಳುವಾಗ ಸ್ವಲ್ಪ ಸಮಸ್ಯೆಯಲ್ಲಿ ಇದ್ದೀರೆಂದು ಅನ್ನಿಸುತ್ತಿದೆ. ಚಿಂತೆ ಮಾಡಬೇಡಿ. ನಿಮ್ಮ ಬೆಂಗಳೂರಿನಲ್ಲಿಯೆ ನನ್ನ ಸ್ನೇಹಿತ ಒಬ್ಬನಿದ್ದಾನೆ , ಶ್ರೀದರ್ ಎಂದು ಅವನು ಅಲ್ಲಿಯೆ ಪ್ರಾಕ್ಟೀಸ್ ಮಾಡುತ್ತಿದ್ದಾನೆ. ಅವನ ನಂಬರ್ ಕೊಡುತ್ತೇನೆ ಬರೆದುಕೊಳ್ಳಿ. ನಾನು ಸಹ ಅವನಿಗೆ ಪೋನ್ ಮಾಡುತ್ತೇನೆ. ಎಂದು ಅವನ ಸ್ನೇಹಿತನ ನಂಬರ್ ಹೇಳಿದ . ಬರೆದುಕೊಂಡು, ಮೊದಲು ಅಚ್ಚುತ ಅವನಿಗೆ ಪೋನ್ ಮಾಡಲಿ ಎಂದುಕೊಂಡೆ. ಅಷ್ಟರಲ್ಲಿ ರೂಮಿನಿಂದ ಹೊರಬಂದ ಸಂದ್ಯಾ, ನನ್ನನ್ನು ಒಳಬನ್ನಿ ಅನ್ನುವಂತೆ ಸನ್ನೆಮಾಡಿದರು

ಒಳಹೋದರೆ, ಜ್ಯೋತಿ ಮತ್ತೆ ಮಾತನಾಡುತ್ತಿದ್ದರು,
ಆದರೆ ಬಹಳ ನಿಧಾನ , ಒಂದು ಪದಕ್ಕು ಮತ್ತೊಂದು ಪದಕ್ಕೂ ಸಾಕಷ್ಟು ಅಂತರವಿಟ್ಟು ಮಾತನಾಡುವಾಗ, ಅವರು ಎಲ್ಲಿಂದಲೋ ಮಾತನಾಡುತ್ತಿರುವಂತೆ ಕೇಳಿಸುತ್ತಿತ್ತು
ಹೌದು ...... ನೀರು.... ಎಲ್ಲಡೆಯೂ ನೀರು... ಭೂಮಿಯ ಮೇಲೆ ನೀರಿನ ಹೊರತಾಗಿ ಏನು ಇಲ್ಲವೆ ?
ಅಂದರೆ ಜ್ಯೋತಿ ನೀವೀಗ ಮತ್ತೆ ಹಿಂದೆ ಹೋಗಿದ್ದೀರಾ ನೆನಪಿನಲ್ಲಿ

ಹಿಂದೆ ಹೌದು ಹಿಂದೆ ಆಂದರೆ ಹಿಂದೆ ಮೊದಲಿಗೆ.... ಅಲ್ಲಿ ನಾನು ನೀನು ಯಾರು ಇಲ್ಲ. ಪ್ರಾಣಿ ಜನ ಏನು ಇಲ್ಲ . ಮನೆ ಮರ ಏನು ಇಲ್ಲ.... ನೀರು ಹೊರತು ಏನು ಇಲ್ಲ. ಆಕಾಶವು ನೀರಿನಿಂದ ತುಂಬಿದೆಯೋನೊ......
ಸೃಷ್ಟಿಯ ಮೊದಲ ದಿನಗಳ ಬಗ್ಗೆ ಹೇಳುತ್ತಿದ್ದೀರಾ ? ಎಂದೆ
ಇಲ್ಲ, ನೀರು ಬಿಟ್ಟು ಏನು ಇಲ್ಲ. ನೀರಿನ ಹೊರತಾಗಿ ಏನು ಇಲ್ಲ. ಭೂಮಿಯಲ್ಲಿ ನೀರಿನ ಹೊರತು ಮತ್ತೇನುಇಲ್ಲ ಅನ್ನಿಸುತ್ತಿದೆ. ಆಕಾಶವು ಮೋಡದಿಂದ ಮುಚ್ಚಿ ಎಷ್ಟೋ ಸಾವಿರ ವರ್ಷ ಲಕ್ಷ ವರ್ಷಗಳಾಯಿತೇನೊ ಮತ್ತೂ ಹಿಂದೆ ಹೋಗಬೇಕೇನೋ ... ಇನ್ನೂ ಹಿಂದೆ
ನನಗೆ ಗಾಭರಿ ಆಯಿತು. ಬೇಡ ಜ್ಯೋತಿ ಸಾಕು ಬಿಡಿ ಎಷ್ಟು ಹಿಂದೆ ಹೋಗುವಿರಿ, ಸಾಕು ಬಿಡಿ. ಎಚ್ಚರಗೊಳ್ಳಿ
ಇಲ್ಲ ಹೋಗಬೇಕು. ಹಿಂದೆ ಹೋಗಬೇಕು. ಜ್ಯೋತಿ........ ಜ್ಯೋತಿ ವರ್ಷ..... ಎಂದೆಲ್ಲ ಆಕೆ ಆನ್ನುತ್ತಿದ್ದಳು
ಇವರು ಏನು ಹೇಳುತ್ತಿದ್ದಾರೆ. ಈಗ ನಾನು ದೇವರನ್ನು ನೆನೆಯುವಂತಾಯಿತು. ದೇವರೆ ಇದೆಂತಹ ಸಂದರ್ಭ ತಂದಿಟ್ಟೆ. ಏನೋ ಸಾಮಾನ್ಯ ಚರ್ಚೆಯಿಂದ ಪ್ರಾರಂಭವಾದ , ಈ ಘಟನೆ , ನನ್ನನ್ನು ಹೀಗೆ ಸಿಲುಕಿಸಿದೆಯಲ್ಲ . ಕಾಲವನ್ನು ಹೆಬ್ಬಾವಿಗೆ ಹೋಲಿಸುವರು. ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ ಅನ್ನುವರು. ಅಂತಹ ಕಾಲದ ರಹಸ್ಯಕ್ಕೆ ನಾವು ಕೈ ಹಾಕಲು ಹೋಗಿ ಏನಾದರು ಪ್ರಮಾದವಾಗಿದೆಯ. ಕಾಲವೆಂಬ ಹೆಬ್ಬಾವಿನ ಬಾಯಿಗೆ ನಾವೆಲ್ಲ ಸಿಲುಕಿದ್ದೆವು. ಹೊರಬರುವ ದಾರಿ ತಿಳಿಯುತ್ತಿಲ್ಲ . ಬಲವಂತವಾಗಿ ಜ್ಯೋತಿಯನ್ನು ಎಬ್ಬಿಸಹೋಗಿ ಏನಾದರು ಅನಾಹುತವಾದರೆ ಎನ್ನುವ ಭಯ ನಮ್ಮನ್ನು ಕಾಡುತ್ತಿತ್ತು.
ಆದರೆ ಜ್ಯೋತಿ ನನ್ನ ಯಾವ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಕೆ ತನ್ನ ತನ್ನ ಪಾಡಿಗೆ ತಾನು ಕಾಲದಲ್ಲಿ ಹಿಂದಕ್ಕೆ ಸರಿಯುತ್ತಿದ್ದಳು. ನನಗೆ ಎರಡು ರೀತಿಯ ಯೋಚನೆಗಳು ಈಗ ಕಾಡುತ್ತಿದ್ದವು. ಮೊದಲೆಯದಾಗಿ, ಈಕೆ ಹೇಳುತ್ತಿರುವ ಘಟನೆ ಹಾಗು ನೆನಪುಗಳೆಲ್ಲ ನಿಜವಾ ಒಂದು ವೇಳೆ ನಿಜವಾದಲ್ಲಿ, ತನ್ನ ಹುಟ್ಟಿನಿಂದಲೂ ಹಿಂದಕ್ಕೆ ಆಕೆಗೆ ನೆನಪುಗಳಿರುವುದು ಹೇಗೆ ಸಾದ್ಯ, ಎರಡನೆಯದು ಈಕೆಯನ್ನು ಎಬ್ಬಿಸುವುದು ಹೇಗೆ, ಒಂದು ವೇಳೆ ಏನಾದರು ಸಮಸ್ಯೆಯಾದಲ್ಲಿ ಆನಂದ ನನ್ನಬಗ್ಗೆ ಏನು ಭಾವಿಸುವದಿಲ್ಲ ? ಎನ್ನುವ ಸಂಕಟ.

ಅಂತಹ ಚಿಂತೆಯಲ್ಲಿರಬೇಕಾದರೆ , ಮತ್ತೆ ಜ್ಯೋತಿಯ ಮುಖಭಾವದಲ್ಲಿ ವ್ಯತ್ಯಾಸವಾಯಿತು. ಆಕೆ ನುಡಿಯುತ್ತಿದಳು.
ಅಪೂರ್ವ ದೃಷ್ಯ, ನೀರಿಗಿಂತ ಹಿಂದೆ ಹೋದರೆ, ಭೂಮಿ ಕೇವಲ ಉರಿಯುವ ಗೋಲ. ದೂರದ ಅಗಸದಲ್ಲಿ ಸೂರ್ಯನ ಬೆಳಕಿನ ವಿನಃ ಯಾವುದೇ ಜೀವವಿಲ್ಲ. ಇನ್ನೂ ನೀರು ಸಹ ರೂಪಗೊಂಡಿಲ್ಲ. ಆಗೊಮ್ಮೆ ಈಗೊಮ್ಮೆ ಆಗಸದಿಂದ, ಉಲ್ಕಾಪಾತವಾದಂತೆ ದೊಡ್ಡ ದೊಡ್ದ ಉಲ್ಕೆಗಳು ಭೂಮಿಗೆ ಬಂದು ಅಪ್ಪಳಿಸುತ್ತಿವೆ. ಅದು ಅಪ್ಪಳಿಸುವ ರಬಸಕ್ಕೆ ಉರಿಯುತ್ತಿರುವ ಭೂಮಿಯ ಮದ್ಯೆ, ನೀರಿನಲ್ಲಿ ಕಲ್ಲು ಹಾಕಿದಾಗ ಏಳುವ ಅಲೆಗಳಂತೆ ಬೆಂಕಿಯಲ್ಲಿ ಅಲೆಗಳು ಏಳುತ್ತಿವೆ. ಅಂತಹ ದಗದಗಿಸುವ ಉರಿಯಿಂದ ಭೂಮಿಯ ಮೇಲೆ ನೂರಾರು ಕಿ.ಮಿ ವರೆಗೂ ಮೋಡಗಳು ದಟೈಸುತ್ತಿವೆ. ಉರಿಯುತ್ತಿವ ಬೆಂಕಿಗೆ ಅದೇನು ಅಹಾರವೊ ತಿಳಿಯದು, ಬೆಂಕಿ ಮಾತ್ರ ಸಪ್ತ ವರ್ಣಗಳಲ್ಲು ನಾಲಿಗೆ ಚಾಚುತ್ತಿದೆ. ಇದೊಂದು ಅಸದೃಷ್ಯ ದೃಷ್ಯ. ವಿವರಣೆಗೆ ನಿಲುಕದು. ಅಂತಹ ಬೆಂಕಿಯ ಒತ್ತಡಕ್ಕೊ, ಭೂಮಿಯ ಒಳಗಿನಿಂದ ಹೊರಗೆ ಚುಮ್ಮುತ್ತಿರುವ ಲಾವ ಚುಲುಮೆಗಳಿಂದಲೋ , ಅವುಗಳ ಒತ್ತಡಕ್ಕೊ ಭೂಮಿ ತನ್ನ ಸುತ್ತ ತಾನೆ ತಿರುವುವ ಅಪೂರ್ವ ನೋಟ ಮನಸೂರೆಗೊಳ್ಳುತ್ತಿದೆ.
ಜ್ಯೋತಿ ಒಂದು ಕ್ಷಣ ನಿಲ್ಲಿಸಿದಳು, ನಾನು ಕೇಳಿದೆ
ಅಂದರೆ ನೀವೀಗ ಭೂಮಿಯ ರೂಪಗೊಳ್ಳುತ್ತಿರುವ ದಿನಗಳನ್ನು ನೋಡುತ್ತಿರುವಿರ.
ಆಕೆಯ ದ್ವನಿ ಬದಲಾಯಿತು
ನಡುವೆ ಮಾತನಾಡಬೇಡ. ಸುಮ್ಮನೆ ಕೇಳು ಎಂದಳು.
ಪ್ರಥಮ ಬಾರಿ ಆಕೆ ನನ್ನಬಗ್ಗೆ ಏಕವಚನ ಪ್ರಯೋಗ ನಡೇಸಿದ್ದಳು. ನಾನು ಆನಂದ, ಸಂದ್ಯಾರ ಮುಖ ನೋಡಿದೆ. ಅವರಿಬ್ಬರು ನಿರ್ಲಿಪ್ತರಾಗಿದ್ದರು. ಬಹುಶಃ ಎಲ್ಲಕ್ಕೂ , ಎಲ್ಲ ಆಶ್ಚರ್ಯಗಳಿಗೂ ಸಿದ್ದರಾದಂತೆ ಇದ್ದರು. ನಾನು ಮೌನವಾಗಿದ್ದೆ. ಜ್ಯೋತಿ ಮುಂದುವರೆಸಿದಳು
ಆಕೆಯ ಮಾತುಗಳು ಮಾತ್ರ ಸರಾಗವಾಗಿ ಬರುತ್ತಿರಲಿಲ್ಲ , ಪ್ರತಿಪದಕ್ಕು ಪದಕು ಸಾಕಷ್ಟು ಅಂತರವಿತ್ತು ಆಕೆಯ ಮಾತಿನಲ್ಲಿ.
ಇಂತಹ ದೃಷ್ಯ ನೋಡಲು ಸಿಗುವುದೇ ಒಂದು ಪುಣ್ಯ. ಭೂಮಿ ಈಗ ರೂಪಗೊಳ್ಳುತಿರುವ ದಿನಗಳು ಇವು. ನೋಡಿದರೆ, ಭೂಮಿ ಸೂರ್ಯ ಚಂದ್ರ ಎಲ್ಲಕ್ಕೂ ಒಂದೆ ಅಹಾರ ದೊರೆತಂತೆ ಕಾಣಿಸುತ್ತೆ. ಈಗ ಪ್ರಾಣಿಗಳು ಉಸಿರಾಡಲು ಬೇಕಾದ ಜೀವವಾಯುವೆ ಇಲ್ಲದ ದಿನ. ಆದರೆ ಯಾವ ಚಿಂತೆಯೂ ಇಲ್ಲ ಏಕೆಂದರೆ ಯಾವುದೇ ಜೀವಿಯು ಭೂಮಿಯ ಮೇಲಿಲ್ಲ. ಜೀವಿ ಅಂದರೆ ಹಸಿರು ಸಹ ಇಲ್ಲ. ಈ ರುದ್ರ ರಮಣೀಯ ಸೃಷ್ಟಿ ನರ್ತನದಲ್ಲಿ ಯಾವ ಜೀವಿಯು ಇರಲು ಸಾದ್ಯವೂ ಇಲ್ಲ. ನಭದಿಂದ ಬಂದು ಯಾವುದಾವುದೋ ಸಣ್ಣ ಗ್ರಹಗಳು ಅಪ್ಪಳಿಸಿದರೆ ಆಗೆಲ್ಲ ಉಂಟಾಗುತ್ತಿರುವ ಪರಿಣಾಮಗಳನ್ನು ನಿನಗೆ ಹೇಗೆ ವರ್ಣಿಸಿ ಹೇಳಲಿ? . ಇಂತಹ ಅಸದೃಷ್ಯ ಪರಿಸರದಲ್ಲಿ, ನೀರು ರೂಪಗೊಂಡಿತು ಎನ್ನುವುದೇ ಆಶ್ಚರ್ಯವಾಗಿ ತೋರುತ್ತಿದೆ .
ನೀರು ರೂಪಗೊಳ್ಳುತ್ತಲೆ, ಅದು ತನಗೆ ತಾನೆ ಹೆಚ್ಚಾಗುತ್ತ, ಭೂಮಿಯ ಮೇಲೆ ಆಕಾಶದಲ್ಲಿ ಆವರಿಸುತ್ತ ಹೋಯಿತು. ನೀರಿನ ಪ್ರಭಾವ ಹೆಚ್ಚಾಗುತ್ತಲೆ. ಉರಿಯುವ ಗೋಳ ತನಗೆ ತಾನೆ ತಣಿಯುತ್ತ ಹೋಯಿತು. ಜೀವರಾಶಿಯ ಹುಟ್ಟುವಿಕೆಗೆ ಕಾರಣವಾಯಿತು.ಜ್ಯೋತಿ ತನ್ನ ಮಾತು ನಿಲ್ಲಿಸಿದಳು. ಆಕೆಯ ಮನಸಿನಲ್ಲಿ ಮತ್ತೆ ಏನು ನಡೆಯುತ್ತಿದೆಯೋ ಅಂದುಕೊಂಡೆ
ಬಹುಶಃ ಭೂಮಿಯ ಹುಟ್ಟಿಗೆ ಮೊದಲು ಸೂರ್ಯನ ಹುಟ್ಟು ಆಯಿತೇನೊಎಂದಳು.
ಅಲ್ಲಿಗೆ ಆಕೆ ಸೂರ್ಯನ ಹುಟ್ಟಿಗೆ ಹೋಗುತ್ತಿದ್ದಾಳ? ದೇವರೆ ನಿಜಕ್ಕೂ ಏನಾಗುತ್ತಿದೆ, ಈಕೆಯನ್ನು ಎಬ್ಬಿಸುವ ಪರಿಯೆಂತು.
ನಾನು ಮೊಬೈಲ್ ಹಿಡಿದು , ಹೊರನಡೆದೆ. ಅಚ್ಚುತ ಹೇಳಿದ್ದ ಡಾಕ್ಟರಿಗೆ ಪೋನ್ ಮಾಡಬೇಕಿತ್ತು.
ಮೊದಲ ಪ್ರಯತ್ನದಲ್ಲಿಯೆ ಡಾಕ್ಟರ್ ಸಿಕ್ಕಿಬಿಟ್ಟರು ಅಚ್ಚುತನ ಸ್ನೇಹಿತ ಶ್ರೀದರ್.
ನನ್ನ ಪರಿಚಯ ಮಾಡಿಕೊಂಡೆ, ಅವರು ಹೇಳಿ ಸರ್ ನಾನೇನು ಸಹಾಯಮಾಡಬಹುದು, ಅಚ್ಚುತ ಏನೊ ಹೇಳಿದ್ದ, ನೀವು ವಿವರಿಸಿದರೆ ನಾನು ಯೋಚಿಸಬಹುದು ಎಂದರು.
ನಾನು ನಡೆದ ಘಟನೆಗಳನ್ನು ಮೊದಲಿನಿಂದ ವಿವರಿಸಿದೆ. ನಂತರ ಸದ್ಯದ ಪರಿಸ್ಥಿತಿ ಹೇಳುತ್ತ್, ಸಮಸ್ಯೆ ತಿಳಿಸಿದೆ. ಆಕೆಗೆ ಏನು ಸಮಸ್ಯೆ ಅಥವ ತೊಂದರೆಗಳಾದರೆ ಹೇಗೆ ಎನ್ನುವ ನನ್ನ ಆತಂಕವನ್ನು ತಿಳಿಸಿದೆ. ಆತ ಎಲ್ಲವನ್ನು ಕೇಳಿಕೊಂಡರು. ಜ್ಯೋತಿಯ ದೈಹಿಕ ಸ್ಥಿತಿಯ ಬಗ್ಗೆ ಕೇಳಿದರು, ನಾನು ಆಕೆ ದೈಹಿಕವಾಗಿ ಸಹಜವಾಗಿ ಇರುವಳೆಂದು, ನಿದ್ದೆಯಲ್ಲಿ ಮಾತನಾಡುತ್ತಿರುವ ರೀತಿ, ಅತ್ಯಂತ ನಿಧಾನಕ್ಕೆ ಮಾತನಾಡುತ್ತಿರುವಳೆಂದು ತಿಳಿಸಿದೆ. ಒಂದು ನಿಮಿಶ ಯೋಚಿಸುತ್ತಿದ್ದ ಡಾಕ್ಟರ್ , ನಿಮ್ಮ ಮನೆ ಎಲ್ಲಿ ಬರುವದೆಂದು ಕೇಳಿದರು. ನಾನು ವಿಳಾಸ ತಿಳಿಸಿದೆ. ಅದಕ್ಕವರು, ನಾನೀಗ ನನ್ನ ನರ್ಸಿಂಗ್ ಹೋಮ್ ನಲ್ಲಿದ್ದೇನೆ. ಇಲ್ಲಿ ಇನ್ನು ಅರ್ಧ ಅಥವ ಒಂದು ಗಂಟೆಯ ಕೆಲಸವಿದೆ. ಇಲ್ಲಿ ಮುಗಿಸಿ ಹೊರಡುತ್ತೇನೆ. ನಿಮ್ಮ ಮನೆಗೆ ಒಮ್ಮೆ ಬರುತ್ತೇನೆ. ನಂತರ ನಿರ್ದಾರ ಮಾಡಬಹುದು. ಎಂದರು. ಅಲ್ಲದೆ ಅವರು ತಾವು ಬರುವ ತನಕ ಜ್ಯೋತಿಯನ್ನು ಬಲವಂತವಾಗಿ ಎಬ್ಬಿಸುವ ಪ್ರಯತ್ನ ಮಾಡಬೇಡಿ ಎನ್ನುವ ಎಚ್ಚರಿಕೆಯನ್ನು ಕೊಟ್ಟರು.ಅವರು ಬರುವುದು ಕನಿಷ್ಠ ಎರಡು ಗಂಟೇಗಳಾಬಹುದು ಎನ್ನಿಸಿತು.
ಅವರಿಗೆ ವಂದನೆ ತಿಳಿಸಿ, ಕಾಲ್ ಕಟ್ ಮಾಡಿದೆ. ನಂತರ ನಮ್ಮ ಮನೆಗೆ ಕಾಲ್ ಮಾಡಿ, ನಾನು ಬರುವುದು ತುಂಬಾನೆ ತಡ ಆಗಬಹುದು., ಅಥವ ರಾತ್ರಿಬರದೆ ಬೆಳಗ್ಗೆ ಬರಬಹುದು, ಎಂದು ತಿಳಿಸಿದೆ. ಮನೆಯವರು, ಗಾಭರಿಯಿಂದ, ಏನು ಎತ್ತ ಎಂದೆಲ್ಲ ಕೇಳಿದಾಗ, ಮನೆಗೆ ಬಂದ ನಂತರ ವಿವರ ತಿಳಿಸುವೆ ಎಂದು ಕಾಲ್ ಕಟ್ ಮಾಡಿದೆ.Thursday, August 17, 2017

ನೆನಪಿನ ಪಯಣ - ಭಾಗ 5

ನೆನಪಿನ ಪಯಣ ಭಾಗ 5


ಜ್ಯೋತಿಯ ದ್ವನಿ ಮೊದಲಿನಂತೆ ಇರದೇ ಸ್ವಲ್ಪ ಬದಲಾವಣೆಗೊಂಡಿದೆ,
ಮಾತು ಮುಂದುವರೆಯಿತು..
.. ಯಾವುದೋ ಚಿಕ್ಕ ದೇವಾಲಯದಂತಿದೆ, ನೋಡಿದರೆ ದೇವಿಯ ವಿಗ್ರಹ ಮಣ್ಣಿನಲ್ಲಿ ಮಾಡಿರುವುದು. ಮುಂಬಾಗದಲ್ಲಿ ಕಳಶವೂ ಇದೆ. ಪೂಜೆ ನಡೆಯುತ್ತಿದೆ. ಊರಜನರೆಲ್ಲ ಸಂಭ್ರಮದಿಂದ ಓಡಾಡುತ್ತಿದ್ದಾರೆ. ಇದೇನು ಈ ವಿಗ್ರಹ ಯಾವುದು, ಇಲ್ಲಿರುವ ಕಳಶವಾದರು ಯಾವುದು. ಊರದೇವಿ ಮಹಿಷಾಸುರಮರ್ಧಿನಿ ದೇವಿಯ ಪ್ರತಿಷ್ಠಾಪನೆಯಂತೆ. ದೇವಿಗೆ ಆರತಿ ಮೈಸೂರಿನಿಂದ ಬಂದಿದೆಯಂತೆ. ಏನೆಲ್ಲ ಮಾತುಗಳು.
ಇನ್ನೂ ಹಿಂದೆ ಹೋಗಬೇಕೇನೊ ದೇವಾಲಯದ ರಹಸ್ಯ ತಿಳಿಯಲು.....
ಯಾರೋ ತಲೆಯ ಮೇಲೆ ಒಂದು ಕುಕ್ಕೆಯನ್ನು ಹೊತ್ತು ಸಾಗುತ್ತಿದ್ದಾರೆ, ಹಾ ಅದು ಬಿದಿರ ಮಂಕರಿಯಂತಿದೆ. ತಲೆಯ ಮೇಲಿನ ಕುಕ್ಕೆಯನ್ನು ಹೊತ್ತು ನಡೆದರು ಚಿಕ್ಕದೊಂದು ಹಳ್ಳಿ. ಅಲ್ಲಿ ಅದ್ಯಾವುದೋ ಜನರು ಯಾರು ಗುರುತಿಲ್ಲ. ಯಾರದೋ ಮನೆಯ ಮುಂದೆ ಕುಕ್ಕೆ ಇಳಿಸಿ ಏನೋ ಮಾತು. ಊರಜನ ಒಂದಿಷ್ಟು ಸೇರಿದ್ದಾರೆ. ಕುಕ್ಕೆಯಿಂದ ಒಂದು ಕಳಶವನ್ನು ತೆಗೆದು ತೋರಿಸಿದ ಆತ. ಆ ಹಳ್ಳಿಯ ಜನರೆಲ್ಲ ಅವನನ್ನು ಅಲ್ಲಿಯೇ ನೆಲಸಲು ಕೋರುತ್ತಿದ್ದಾರೆ. ಅವನಾದರೋ ವಿಜಯನಗರದಿಂದ ಬಂದವನಂತೆ, ಅಲ್ಲಿಯ ಸಾಮ್ರಾಜ್ಯ ಯುದ್ದದಲ್ಲಿ ನಾಶವಾಯಿತು ಎಂದ. ದೇವಾಲಯದ ಮೇಲೆ ಯವಳರ ದಾಳಿ ಆಗುತ್ತೆ ಅಂತ ಭಯ , ಅಲ್ಲಿಯ ಭ್ರಾಹ್ಮಣರೆಲ್ಲ ಸೇರಿ ದೇವಾಲಯದಲ್ಲಿ ಇದ್ದ ಎಂಟು ಕಳಶವನ್ನು ಕುಕ್ಕೆಯಲ್ಲಿ ಹೊತ್ತು , ತಲಾ ಒಂದೊಂದು ದಿಕ್ಕಿಗೆ ಹೊರಟರಂತೆ. ಇವನ ಹೆಸರು ಲಿಂಗಯ್ಯ ಎಂದು . ಊರಹೊರಗಿನ ಮರದ ಕೆಳಗೆ ಮಲಗಿರುವವಾಗ ದೇವಿ ಕನಸಿನಲ್ಲಿ ಬಂದು ಇಲ್ಲೇ ನೆಲೆಸುವೆ ಎಂದು ನುಡಿದಂತಾಯಿತು ಎನ್ನುತ್ತಿದ್ದಾನೆ. ಎಲ್ಲರಿಗೂ ಭಯ ಗೌರವ. ಭಕ್ತಿ ಶ್ರದ್ದೆಯಿಂದ ಕೇಳುತ್ತಿದ್ದಾರೆ .
ಜ್ಯೋತಿ ಇದ್ದಕಿದ್ದಂತೆ ಮೌನವಾದಳು. ಅವಳ ಮುಖದಲ್ಲಿ ಎಂತದೋ ಒಂದು ಭಾವ. ನನಗೆ ಅರ್ಥವಾಗಲಿಲ್ಲ. ಆನಂದನನ್ನು ಕೇಳಿದೆ ಇದೇನು ಎಂದು. ಅವನು ನನಗೆ ಸಹ ಅರ್ಥವಾಗುತ್ತಿಲ್ಲ ಎಂದು ನುಡಿದು ಸುಮ್ಮನಾದ. ಆಗ ಸಂದ್ಯಾ ಹೇಳಿದಳು,
ಈ ಕತೆಯನ್ನು ನಾನು ಒಮ್ಮೆ ಕೇಳಿದ್ದೇನೆ, ಜ್ಯೋತಿಯ ತಂದೆ ಹೇಳುತ್ತಿದ್ದರು. ಹೆಚ್ಚು ಕಡಿಮೆ ಇದೇ ಕತೆ. ಇದು ಅವರ ಊರಿನ ಇತಿಹಾಸಕ್ಕೆ ಸಂಬಂಧಿಸಿದ್ದು, ಆವರ ಹಳ್ಳಿಯ ಗ್ರಾಮದೇವತೆಯ ದೇವಾಲಯದ ಕತೆಯಂತೆ.


ನನಗೀಗ ಯೋಚನೆಯಾಯಿತು, ಜ್ಯೋತಿ ಹೇಳುತ್ತ ಇರುವುದು ಅವಳ ನೆನಪಿನ ಕತೆಯೋ ಅಥವ ಅವಳ ತಂದೆ ಹೇಳಿದ್ದು ಕೇಳಿ ಆ ನೆನಪಿನಿಂದ ಹೇಳುತ್ತಿರುವ ಕತೆಯೋ. ಅಥವ ನಿಜಕ್ಕೂ ಜ್ಯೋತಿ ತನ್ನ ಮೆದುಳಿನಲ್ಲಿ ಅಡಗಿಕುಳಿತಿರುವ ಯಾವುದೋ ನೆನಪನ್ನು ಉತ್ಖನನ ಮಾಡಿತೆಗೆಯಲು ಸಫಲಳಾಗಿರುವಳೊ ಗೊತ್ತಿಲ್ಲ. ಒಂದು ವೇಳೆ ಇದು ನಿಜವಾಗಿದ್ದಲ್ಲಿ, ವಿಜ್ನಾನ ಕ್ಷೇತ್ರದಲ್ಲಿ ಅತಿ ದೊಡ್ಡ ಅವಿಷ್ಕಾರ ಸಾಧನೆ. ಅದು ನನ್ನಿಂದ . ಯಾವುದೇ ಪರಿಣಿತಿ ಇಲ್ಲದ ನಾವು ಪ್ರಕೃತಿಗೆ ಸವಾಲು ಹಾಕಿ ಗೆದ್ದಂತೆ.


ಆದರೆ ಇದು ನಾವು ಮೊದಲೇ ಕೇಳಿರುವ ಘಟನೆ ನೋಡೋಣ ಏನಾಗುವುದೋ ಎಂದು ಕಾಯುತ್ತಿದ್ದೆ. ಆನಂದನಂತೂ ಯಾವುದೇ ಪ್ರತಿಕ್ರಿಯೆ ಇಲ್ಲದೇ ಕುಳಿತಿದ್ದ. ಆರ್ಯ ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳುತ್ತಿದ್ದ ಅನ್ನಿಸುತ್ತಿದೆ. ಶ್ರೀನಿವಾಸಮೂರ್ತಿಗಳು ಮಾತ್ರ ಹೆದರಿದಂತೆ ಇದ್ದರು
ಮುಂದೆ ಜ್ಯೋತಿ ಏನು ಹೇಳುವಳೆಂಬ ಕುತೂಹಲ.
ಜ್ಯೋತಿ ಶಾಂತಳಾಗಿ ಮಲಗಿದ್ದವಳು ಮತ್ತೆ ಪ್ರಾರಂಭಿಸಿದಳು.
' ಇದೇನೊ ನಾನು ಕೃಷ್ಣದೇವರಾಯ ಎಂದರೆ ಏನೋ ಎಂದಿದ್ದೆ, ಆದರೆ ಸಾಮಾನ್ಯ ವ್ಯಕ್ತಿತ್ವ. ಅವನ ಪಕ್ಕದಲ್ಲಿ ನಿಂತಿರುವ ಗಂಡಾಳು ತನ್ನ ರಾಜನಿಗಿಂತಲೂ ದೊಡ್ಡಯೋದನಂತೆ ಕಾಣುತ್ತಿರುವನಲ್ಲ. ಮಹಾರಾಜನ ದ್ವನಿಯಾದರು ಅಷ್ಟೆ , ತೀರ ಗಮನಸೆಳೆಯುವಂತಿಲ್ಲ. ಅಲ್ಲದೇ ಮುಖನೋಡಿದರೆ ಆರೋಗ್ಯವಂತನೆಂದೇನು ತೋರಲ್ಲ. ವಯಸ್ಸು ಎದ್ದು ಕಾಣುತ್ತಿದೆ. ಮತ್ಯಾರ ಬಳಿಯೋ ನುಡಿಯುತ್ತಿದ್ದಾನೆ.
ರಾಮಕೃಷ್ಣ, ನಿನ್ನ ನುಡಿ ಚಮತ್ಕಾರದಿಂದ ಕೂಡಿರಬಹುದು, ಕೆಲವೊಮ್ಮೆ ರಂಜಿಸಬಹುದು. ಆದರೆ ಅದರಿಂದ ಸಮಸ್ಯೆಗಳನ್ನು ಪರಿಹರಿಸಲು ಆಗಲ್ಲ ಅಲ್ಲವೇ ? ಇದು ರಾಜಕೀಯ ಸಮಸ್ಯೆ , ನೀನು ಸುಮ್ಮನಿದ್ದುಬಿಡು.
ಸಪ್ಪಗೆ ನಿಂತಿದ್ದ ವ್ಯಕ್ತಿ ತೆನಾಲಿ ರಾಮಕೃಷ್ಣನಿರಬಹುದೆ? . ಇವರ ಬಟ್ಟೆ ಬರೆ ಧಿರುಸು, ಮುಖ ಲಕ್ಷಣ ಇವೆಲ್ಲ ಬೇರೆಯೆ ಇದೆ. ಮಹಾರಾಜ ಎಂದು ನಾನು ಭಾವಿಸಿರುವ ಕೃಷ್ಣದೇವರಾಯನ ಭಾಷೆಯೂ ಸ್ವಲ್ಪ ನನಗೆ ಗಲಿಬಿಲಿಯೆ. ಅದನ್ನು ಕನ್ನಡ ಅನ್ನುವದಕ್ಕಿಂತೆ ತೆಲುಗು ಅನ್ನುವುದು ಸೂಕ್ತವೇನೊ. ಮಹಾರಾಜ ಹಾಗು ಅವನ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು , ಅದೇಕೊ ಒಳಗೆ ಹೊರಟುಹೋದರು. ಏನೋ ಗುಪ್ತವಾಗಿ ಚರ್ಚಿಸಲು ಇರಬಹುದು. ರಾಮಕೃಷ್ಣನೆಂಬ ವ್ಯಕ್ತಿಯೂ ಅಲ್ಲಿಂದ ಕದಲಿದ. ........ '
ಜ್ಯೋತಿ ನಿಲ್ಲಿಸಿದಳು.


ನನಗೆ ಈಗ ಆಶ್ಚರವೆನಿಸುತ್ತ ಇತ್ತು. ಅಂದರೆ ಜ್ಯೋತಿ ತನ್ನ ನೆನಪು ಕೆದುಕುತ್ತ ಹಿಂದಕ್ಕೆ ಹೋಗುತ್ತಿರುವಳೇನು. ಆಕೆ ಇಲ್ಲಿಯವರೆಗೂ ಹೇಳಿದ್ದು ಕೃಷ್ಣದೇವರಾಯನ ಕಾಲದ ಘಟನೆಯ. ಅಂದರೆ ಅದರಲ್ಲಿ ಅವಳ ಪಾತ್ರವೇನು? ಆಕೆ ನೋಡುತ್ತ ಇರುವದರಿಂದ ಕೃಷ್ಣದೇವರಾಯನಾಗಲಿ, ರಾಮಕೃಷ್ಣನಾಗಲಿ ಆಗುವುದು ಸಾದ್ಯವಿಲ್ಲ.
ನಾನು ಕುತೂಹಲದಿಂದ ಕೇಳಿದೆ


'ಸರಿ ಜ್ಯೋತಿ, ಕೃಷ್ಣದೇವರಾಯ, ರಾಮಕೃಷ್ಣರ ಮಾತುಗಳು ನಿನಗೆ ಕೇಳಿಸಿತು. ಹಾಗಿದ್ದರೆ ಆಗ ನೀನು ಏನಾಗಿದ್ದೆ. ನಿನ್ನ ಪಾತ್ರವೇನು?'
ಜ್ಯೋತಿಯ ಮುಖದಲ್ಲಿ ಕನಲಿಕೆ, ನೋವಿನ ಭಾವ


'ತಿಳಿಯದು’
ಅವಳ ದ್ವನಿಯಲ್ಲಿ , ಅಸ್ವಷ್ಟತೆ ಕಾಡುತ್ತಿತ್ತು.
'ಸರಿ ಹಾಗಿದ್ದರೆ, ಮತ್ತೂ ಹಿಂದೆ ಹೋಗಲು ಸಾದ್ಯವೆ ? ಎಷ್ಟು ಹಿಂದೆ ಹೋಗಲು ನಿನಗೆ ಸಾದ್ಯ ? '
ಕುತೂಹಲದಿಂದ ಕೇಳಿದೆ.
'ಹ್ಮ್ ...... trying...... ' ಎಂದಳು...
ಎಲ್ಲರೂ ಅವಳ ಮುಖವನ್ನೆ ನೋಡುತ್ತ ಕುಳಿತಿದ್ದೆವು. ಇದ್ದಕ್ಕಿದಂತೆ ಎನ್ನುವಂತೆ ಪ್ರಾರಂಬಿಸಿದಳು,


ಅದೊಂದು ಹಾಡಿ, ಅಲ್ಲ ಕಲ್ಲಿನ ಗುಹೆಯಂತೆ ಕಾಣುತ್ತಿದೆ. ಹೌದು ಕಲ್ಲಿನ ಗುಹೆ. ಗೋಡೆಯ ಮೇಲೆ ಅಸ್ವಷ್ಟವಾಗಿ ಕೆತ್ತನೆಗಳು ಕಾಣುತ್ತಿವೆ ಕತ್ತಲಿನಲ್ಲಿ. ಅವಳು ಮಲಗಿದ್ದಾಳೆ, ನಿದ್ದೆಯಲ್ಲಿ ಏಕೊ ಹೊರಳುತ್ತಿದ್ದಾಳೆ, ನಿದ್ದೆ ಬಾರದೇನೊ. ಎದ್ದು ಕುಳಿತಳು.ಅವಳಿಂದ ಸ್ವಲ್ಪದೂರದಲ್ಲಿ ಸಣ್ಣಗೆ ಬೆಂಕಿ ಉರಿಯುತ್ತಿದೆ, ಬಹುಶಃ ರಾತ್ರಿಯಲ್ಲಿ ಚಳಿ ತಡೆಯಲು ಹಾಕಿರುವಂತೆ ತೂರುತ್ತಿದೆ. ಅವಳ ಬಟ್ಟೆಯೂ ವಿಚಿತ್ರ. ನಾರಿನಿಂದಲೋ ಸೆಣಿಬಿನಿಂದಲೋ ನೈದಿರುವಂತಿದೆ. ಅವಳಿಂದ ಸ್ವಲ್ಪ ದೂರದಲ್ಲಿ ಮತ್ತೂ ಒಬ್ಬಳು ಮಲಗಿದ್ದಾಳೆ ಇವಳಿಗು ಅವಳಿಗೂ ಸ್ವಲ್ಪ ವ್ಯತ್ಯಾಸವಿದೆ ಆಕಾರದಲ್ಲಿ ಬಣ್ಣದಲ್ಲಿ ಮುಖಲಕ್ಷಣದಲ್ಲಿ.


ಕುಳಿತವಳು ಎದ್ದಳು, ಎದ್ದು ಎಲ್ಲಿಗೋ ಹೊರ ಹೊರಟಳು. ಬಾಗಿಲ ಹೊರಗೆ ಜಗಲಿಯಲ್ಲಿ ಕುಳಿತಿದ್ದ, ಜನ ಎಚ್ಚೆತ್ತರು, ಅವಳನ್ನು ತಡೆಯುತ್ತಿದ್ದಾರೆ ಎಲ್ಲಿಗೆ ಎಂದು ಕೇಳುತ್ತಿರುವರು. ಅವಳು ಹೊರಗೆ ಕೈ ತೋರಿಸಿ ಹೋಗಬೇಕೆನ್ನುತ್ತಿದ್ದಾಳೆ. ಹೊರಗೆ ಮಲಗಿದ್ದ ಅವರೆಲ್ಲ ಒಂದೇ ರೀತಿ ಬಟ್ಟೆ, ಮಣಿಯ ಸರ, ಕೈಲಿ ಈಟಿಯಂತ ಆಯುಧ ಕಾಣುವಾಗ. ಈಕೆಯನ್ನು ಬೇರೆ ಎಲ್ಲಿಂದಲೋ ಕರೆದುತಂದಂತೆ ಇದೆ. ಆಕೆ ಓಡಿಹೋಗದಂತೆ ಅಥವ ಅವಳಿಗೆ ಏನು ಅಪಾಯವಾಗದಂತೆ ಕಾವಲು ಕಾಯುತ್ತಿದ್ದಾರೆ ಅನ್ನಿಸುತ್ತೆ. ಅವರೆಲ್ಲ ಬೇಗಬರುವಂತೆ ಹೇಳಿ ಅವಳನ್ನು ಕಳುಹಿಸಿದರು.


ಗುಹೆಯಿಂದ ಹೊರಬಂದಳು , ಆಕೆ, ಸಮಯ ಅರ್ಧರಾತ್ರಿಯನ್ನು ಮೀರಿತ್ತು. ಗುಹೆ ಗುಡ್ಡದ ಮೇಲೆ ಇದೆ ಅನ್ನಿಸುತ್ತೆ, ಕಾಲು ದಾರಿ ಹಿಡಿದು ಗುಡ್ಡದಿಂದ ಕೆಳಗಿಳಿದಳು. ಜುಳು ಜುಳು ಎಂದು ಹರಿಯುತ್ತಿರುವ ನದಿ. ನದಿಯ ದಡದಲ್ಲಿ ನಿಂತು ನೀರು ಕುಡಿದಳು. ನಂತರ ಅಲ್ಲಿರುವ ಬಂಡೆಯನ್ನು ಹತ್ತಿ ನಿಂತು ಸುತ್ತಲೂ ನೊಡುತ್ತಿದ್ದಳು. ನಯನ ಮನೋಹರ ದೃಷ್ಯ. ಬಂಡೆಯ ಮುಂದೆ ಆಳವಾದ ಕಮರಿ, ಅಲ್ಲಿಗೆ ದುಮುಕುತ್ತಿರುವ ನದಿಯ ನೀರು. ಭೋರ್ಗರೆಯುತ್ತಿರುವ ಆ ನೀರಿನ ಶಬ್ದ . ಕಣಿವೆಯಲ್ಲಿ ವಿಶಾಲವಾಗಿ ಹರಡಿನಿಂತ ಅರಣ್ಯ. ಎಲ್ಲವನ್ನು ಕಣ್ಣಿಗೆ ತುಂಬಿಕೊಳ್ಳಲು ಎನ್ನುವಂತೆ, ಅಗಸದಲ್ಲಿ ಬೆಳಗುತ್ತಿರುವ ಪೂರ್ಣಚಂದ್ರ. ಸ್ವಚ್ಚವಾದ ಆಕಾಶ. ತಂಪಾದ ಗಾಳಿ. ಎಲ್ಲವೂ ಆಕೆ ಮೈಮರೆತು ನಿಲ್ಲುವಂತೆ ಮಾಡಿದ್ದವು ಅನ್ನಿಸುತ್ತೆ.


ಪೂರ್ಣಚಂದ್ರನ ಬೆಳಕಿನಲ್ಲಿ ಎದುರಿನ ವಿಶಾಲ ಕಣಿವೆ ದಿಟ್ಟಿಸುತ್ತಿದ್ದಳು. ಬಹುಶಃ ಅಲ್ಲಿಂದಲೇ ಆಕೆಯನ್ನು ಕರೆದುತರಲಾಗಿತ್ತೋ ಏನೊ. ಆಳವಾದ ಕಣಿವೆಯಲ್ಲಿ ದುಮುಕುತ್ತಿರುವ ನೀರಿನ ಶಬ್ದ ಎಂತಹದೋ ಒಂದು ವಾತವರಣ ಸೃಷ್ಟಿಸಿತ್ತು. ಮನಸ್ಸು ಯಾವುದೋ ದ್ಯಾನದಲ್ಲಿ ಮುಳುಗುವಂತೆ. ಹಾಗಿರಲು ಆಕೆಯ ಹಿಂದೆ ಸಣ್ಣದೊಂದು ಶಬ್ದ ಕೇಳಿಸಿತು, ಯಾವುದೋ ಹೆಜ್ಜೆಯ ಶಭ್ದ. ಯಾರಿರಬಹುದು ಎನ್ನುವ ಗಾಭರಿಯೊಂದಿಗೆ ತಿರುಗಿನೋಡಿದಳು.
ಆದರೆ ಕಾಲ ಮಿಂಚಿತ್ತು
ಯಾರು ಎಂದು ತಿಳಿಯುವದರಲ್ಲಿ, ಹಿಂದಿದ್ದ ಹೆಣ್ಣು ಅವಳನ್ನು ಬಲವಾಗಿ ತಳ್ಳಿದಳು. ಆಸರೆ ತಪ್ಪಿದ ಅವಳು, ಸುಲುಭವಾಗಿ ಬಂಡೆಯ ಮೇಲಿನಿಂದ ಕಮರಿಗೆ ಬಿದ್ದಳು, ಅವಳ ವಿಕಾರವಾದ ಕೂಗು ಕಣಿವೆಯನ್ನೆಲ್ಲ ತುಂಬಿತು. ಒಂದೇ ಕ್ಷಣ ಆಕೆಯ ದೇಹ ಕಣಿವೆಯ ನೆರಳಿನೊಳಗೆ ಬಿದ್ದು ಹೋದಂತೆ. ಮತ್ತೆ ಅದೇ ನಿಶ್ಯಬ್ದ ನೆಲೆಸಿತು. ಕಣಿವೆಗೆ ನದಿಯ ನೀರು ದುಮುಕುವ ಭೋರ್ಗೆರತ ಹೊರತು ಮತ್ತಾವ ಶಭ್ದವೂಇಲ್ಲ. ಆಕೆಯನ್ನು ತಳ್ಳಿ ಕೊಲೆ ಮಾಡಿದ ಹೆಣ್ಣು , ಹಾಗೆ ಗಿಡಗಳ ನಡುವೆ ಮರೆಯಾದಳು.
ಜ್ಯೋತಿ ಕತೆ ನಿಲ್ಲಿಸಿದಾಗ ನಾನು ಬೆರಗಾಗಿದ್ದೆ. ಇದೇನು ಕೊಲೆಯ ವಿಷಯ. ಯಾವ ಕಾಲದಲ್ಲಿ ನಡೆಯಿತು ಯಾರಿಗೂ ತಿಳಿಯದು. ಇತಿಹಾಸವೋ ಇಲ್ಲ ಇತಿಹಾಸಕ್ಕಿಂತ ಮೊದಲಿನದೋ ಯಾವುದೋ ಕಾಡುಜನರ ವ್ಯವಹಾರವೋ ಯಾರು ಬಲ್ಲರು, ಈ ಕತೆಯ ಮೂಲವನ್ನು ಅಷ್ಟಕ್ಕೂ ಇದು ನಡೆದ ಘಟನೆಯೋ ಇಲ್ಲ ಜ್ಯೋತಿಯ ಮನದ ಕಲ್ಪನೆಯೋ ತಿಳಿಯದು.
ನಾನು ಕೇಳಿದೆ
ಸರಿ ಆದರೆ ಆ ರೀತಿ ತಳ್ಳಿದ ವ್ಯಕ್ತಿ ಯಾರು? ಗುರುತಾಗಲಿಲ್ಲವೆ ?
ಇಲ್ಲ
ಹೌದಾ ? ಸರಿ ಹಾಗೆಂದು ಭಾವಿಸೋಣ. ಆದರೆ ಈ ಘಟನೆ ನಿನಗೆ ಹೇಗೆ ನೆನಪಿದೆ. ಆ ಎರಡು ವ್ಯಕ್ತಿಗಳಲ್ಲಿ ನೀನು ಯಾರು . ತಳ್ಳಿದವಳೊ ಅಥವ ಕಣಿವೆಗೆ ಬಿದ್ದು ಕೊಲೆಯಾದವಳೊ
ಜ್ಯೋತಿ ಮೌನವಾಗಿದ್ದಳು.
ನಿಧಾನಕ್ಕೆ ಅಂದರೆ ಅತಿ ನಿಧಾನಕ್ಕೆ ನುಡಿದಳು
ಆ ಎರಡು ವ್ಯಕ್ತಿಗಳಲ್ಲಿ ಯಾರು, ತಳ್ಳಿದವಳೋ ಕಣಿವೆಗೆ ಬಿದ್ದವಳೊ ಯಾರು ನಾನು ? ......... ತಿಳಿಯದು...
ನಂತರ ಸುಮಾರು ಒಂದು ಘಂಟೆ ಕಳೆದರು ಜ್ಯೋತಿ ಮಾತನಾಡುತ್ತಲೇ ಇಲ್ಲ. ಆಕೆ ನಿದ್ದೆ ಮಾಡುತ್ತಿದ್ದಾಳೊ ಎಚ್ಚರದಲ್ಲಿದ್ದಾಳೊ ತಿಳಿಯುತ್ತಿಲ್ಲ. ಬಲವಂತವಾಗಿಎಬ್ಬಿಸಲು ನಮಗೆ ಭಯ ಕಾಡುತ್ತಿದೆಮುಂದುವರೆಯುವುದು.....

ನೆನಪಿನ ಪಯಣ - ಭಾಗ 4


ಜ್ಯೋತಿ ಮತ್ತೆ ನೆನಪಿಸಿಕೊಳ್ಳುತ್ತಿದ್ದಳು.
ನಾನು ಆಗಿನ್ನು ಪಿಯುಸಿ ಮುಗಿಸಿದ್ದೆ, ಯಾವುದು ಸರಿಯೋ ಯಾವುದು ತಪ್ಪೋ ಯಾರು ಒಳ್ಳೆಯವರು ಕೆಡುಕರು ಅನ್ನುವುದು ಸದ್ಯ ತಿಳಿಯದ ಸ್ಥಿತಿ. ನಾನಾಗ ರಜೆಯಲ್ಲಿ ಟೈಪಿಂಗ್ ಕೋರ್ಸ್ ಸೇರಿದ್ದೆ. ಅಲ್ಲಿ ಒಬ್ಬ ಹುಡುಗ ಪರಿಚಯವಾಗಿದ್ದ. ನನಗಿಂತ ಮೂರು ವರ್ಷ ದೊಡ್ಡವನಿರಬಹುದೇನೊ, ನಾಗೇಶ ಎಂದು ಹೆಸರು. ಅಲ್ಲಿ ಹೋದ ಒಂದು ತಿಂಗಳಿಗೆಲ್ಲ ಎಷ್ಟು ಆತ್ಮೀಯನಾಗಿದ್ದ ಎಂದರೆ ಅವನ ಮಾತುಗಳಿಗೆ ನಾನು ಮರುಳಾಗಿದ್ದೆ. ಅವನನ್ನು ಪ್ರಾಣದಂತೆ ಪ್ರೀತಿಸುತ್ತಿದ್ದೆ. ಮನೆಯಲ್ಲಿ ಅಪ್ಪ ಅಮ್ಮನಿಗೂ ಹೇಳುವ ದೈರ್ಯವಿಲ್ಲ. ಹೇಳಿದರೆ, ಇನ್ನೂ ಓದು ಮುಗಿಸದೆ ನಿನಗೆ ಈ ಪ್ರೀತಿ ಪ್ರೇಮದ ಹುಚ್ಚೆ ಎಂದು ಖಂಡಿತ ಅನ್ನಿಸಿಕೊಳ್ಳುವೆ , ಹಾಗಾಗಿ ಎಲ್ಲರಿಂದಲೂ ಈ ಪ್ರೀತಿಯ ವಿಷಯ ಗುಟ್ಟಾಗಿ ಇಟ್ಟಿದ್ದೆ.
ರಜೆಯಲ್ಲಿ ಅಮ್ಮನ ಜೊತೆ ಅಜ್ಜಿಯ ಮನೆಗೆ ಹೋಗಿ ಬಾ ಒಂದು ವಾರ ಇದ್ದು ಬಾ ಎಂದು ಎಲ್ಲರ ಒತ್ತಾಯ, ಆದರೆ ಅಜ್ಜಿಯ ಮನೆ ಎಂದು ಹೋದರೆ, ಒಂದು ವಾರ ನಾಗೇಶನನ್ನು ಬೇಟಿ ಮಾಡದೆ ಇರುವದಾದರು ಹೇಗೆ, ಅನ್ನುವ ಸಂಕಟ. ಹಾಗಾಗಿ ಅಜ್ಜಿಯ ಮನೆಗೆ ಬರಲ್ಲ ಎಂದು ಅಮ್ಮನ ಬಳಿ ಹೇಳಿದರೆ ಅಮ್ಮನದು ಒಂದೇ ಕೂಗಾಟ. ನಿನ್ನದು ಅತಿಯಾಯಿತು ಎಂದು.
ಈ ನಡುವೆ ನನ್ನ ನಾಗೇಶನ ಪ್ರೀತಿ ಯಾವ ಮಟ್ಟಕ್ಕೆ ಎಂದರೆ ಅವನು ಏನು ಹೇಳಿದರು ಕೇಳುವ ಮಟ್ಟಕ್ಕೆ ಅವನನ್ನು ನಂಬುತ್ತಿದ್ದೆ. ಅಂದು ಅವನು ಹೇಳಿದ
"ನಾನು ನಿನ್ನನ್ನು ಬಿಟ್ಟಿರಲಾರೆ, ಒಂದು ಕೆಲಸ ಮಾಡುವ, ನೀನು ನಿನ್ನ ಮನೆಬಿಟ್ಟು ಬಂದುಬಿಡು, ನಾವಿಬ್ಬರು ಎಲ್ಲಿಯಾದರು ದೂರಹೋಗಿ ನಮ್ಮ ಪಾಡಿಗೆ ನಾವೆ ಇದ್ದುಬಿಡುವ"
ಅದಕ್ಕೆ ನಾನು ಒಪ್ಪಿಬಿಟ್ಟೆ , ಅವನು ಹೇಳಿದ
"ಹಾಗಿದ್ದರೆ ಸರಿ, ನಾಳೆ ಬೆಳಗ್ಗೆ ನೀನು ಒಂದಿಷ್ಟು ಬಟ್ಟೆ, ಮನೆಯಲ್ಲಿನ ಒಡವೆ ಹಣ ಎಲ್ಲ ತಂದುಬಿಡು, ನಾನು ಒಂದಿಷ್ಟು ಹಣ ತರುತ್ತೇನೆ, ಸ್ವಲ್ಪ ಕಾಲ ಹೊರಗೆ ಯೋಚನೆ ಇರಲ್ಲ. ಆಮೇಲೆ ನಾನೊಂದು ಕೆಲಸ ಹುಡುಕುತ್ತೇನೆ"
ನಾನು ಹೆಚ್ಚು ಯೋಚಿಸದೆ ಸಿದ್ದಳಾಗಿ ಬಿಟ್ಟೆ.
ಮರುದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿ, ರಾತ್ರಿಯೆ ಸಿದ್ದಪಡಿಸಿದ್ದ ಬಟ್ಟೆಯ ಬ್ಯಾಗ್ ಹಿಡಿದು ಮನೆಯಿಂದ ಹೊರಟೆ, ರಸ್ತೆಯ ತುದಿಯಲ್ಲಿ ನಾಗೇಶ ಕಾಯುತ್ತಿದ್ದ. ಅವನ ಮುಖ ನೋಡುವಾಗಲೆ ನನ್ನ ಮನಸ್ಸು ಹೃದಯ ತುಂಬಿಬಂದವು,
ಅವನು ನನ್ನ ಮುಖ ನೋಡುವಾಗಲೆ ಮೊದಲು ಕೇಳಿದ
"ಒಡವೆ ಹಣ ಎಲ್ಲ ತಂದಿರುವೆಯಾ? !!!! "
ನನಗೆ ಪಿಚ್ಚೆನಿಸಿತು, ನಾನು ಅವನ ಪ್ರೀತಿಗಾಗಿ ಓಡಿಬಂದಿದ್ದರೆ ಅವನ ಮೊದಲ ಗಮನ ಒಡವೆ ಹಣ.
ನಾನು ಹೇಳಿದೆ
'ಇಲ್ಲ ತರಲಿಲ್ಲ, ನನ್ನನ್ನು ನೋಡಿಕೊಳ್ಳಲು ನೀನಿರುವಾಗ, ನಿನ್ನ ಪ್ರೀತಿ ಇರುವಾಗ ಅದೆಲ್ಲ ನನಗೆ ನೆನಪೆ ಬರಲಿಲ್ಲ "
ನಾಗೇಶ ನಗುತ್ತಿದ್ದ,
"ಅಯ್ಯೋ ಪೆದ್ದೆ, ಪ್ರೀತಿ ಮುಖ್ಯ ಅಂತ ಹೊರಗೆ ಅದನ್ನು ನಂಬಿ ಬದುಕಕ್ಕೆ ಆಗುತ್ತ, ಬದುಕಿಗೆ ಮೊದಲು ಹಣ ಮುಖ್ಯ ಅದೇ ಇಲ್ಲದಿದ್ದರೆ ಹೇಗಿರೋದು."
ನನಗೆ ತೀರ ಪಿಚ್ಚೆನಿಸಿತು. ಅವನು ಬಿಡಲಿಲ್ಲ, ನನಗೆ ಹೇಳಿದ
"ಚಿಂತಿಸಬೇಡ, ನಿಮ್ಮ ಮನೆಯಲ್ಲಿ ಇನ್ನೂ ಯಾರು ಎದ್ದಿರಲ್ಲ, ಹಾಗೆ ಹೋಗಿ, ಒಡವೆ ಹಣ ಎಲ್ಲ ಎಗರಿಸಿ ತಂದು ಬಿಡು, ಬೆಳಗಿನ ರೈಲಿಗೆ ಹೊರಟುಹೋಗೋಣ"
ನಾನು ಹಿಂದೆ ಹೊರಟೆ , ಅವನು ಹೇಳಿದ್ದನ್ನು ತರಲು, ನನಗೆ ಅದೇಕೊ ಮೊದಲಿನ ಉತ್ಸಾಹವಿರಲಿಲ್ಲ ಮನಸಿಗೆ.
ಬಾಗಿಲು ತೆರೆದು ಒಳಗೆ ಬಂದರೆ, ಅಮ್ಮ ಹಾಲಿನಲ್ಲಿ ಸಿದ್ದರಾಗಿ ನಿಂತಿದ್ದರು, ನಾನು ಬ್ಯಾಗ್ ಸಮೇತ ಬಂದಾಗ ಅವರಿಗೆ ಆಶ್ಚರ್ಯ.
"ಇದೇನೆ ಇಷ್ಟು ಬೇಗ ಸಿದ್ದಳಾಗಿದ್ದೀಯ, ಹೊರಗೆ ಏಕೆ ಹೋಗಿದ್ದೆ "ಎಂದರು.
ಅಷ್ಟರಲ್ಲಿ ಅಪ್ಪ ರೂಮಿನಿಂದ ಬಂದವರು,ನನ್ನನ್ನು ಕಂಡು
"ನೋಡಿದೆಯಾ ಮಗೂನ, ಸುಮ್ಮನೆ ಬೈಯುತ್ತೀಯ, ನಿನ್ನ ಜೊತೆಗೆ ಅಜ್ಜಿಮನೆಗೆ ಅಂತ ಸಿದ್ದಳಾಗಿ ನಿಂತಿದ್ದಾಳೆ. ನಿನ್ನ ಬಾಯಿ ಜಾಸ್ತಿ ಸುಮ್ಮನೆ ಅವಳನ್ನು ಅನ್ನುತ್ತೀಯ, "
ಎಂದು ಅಮ್ಮನನ್ನೆ ಬೈದರು.
ನನಗೆ ಏಕೊ ಅಳು ಬಂದಂತಾಗುತ್ತಿತ್ತು ತಡೆದುಕೊಂಡೆ.
ಈಗ ವಿದಿ ಇರಲಿಲ್ಲ, ತಮ್ಮ ಹೊರಗೆ ಹೋಗಿ ಆಟೋ ತಂದ,
ಸುಮ್ಮನೆ ಬಾಯಿಮುಚ್ಚಿ, ಅಮ್ಮನ ಜೊತೆ ಆಟೋ ಹತ್ತಿ ಕುಳಿತೆ, ಆಟೋ ರಸ್ತೆಯ ತುದಿಗೆ ಬಂದಾಗ ನಾಗೇಶ ನನ್ನನ್ನು ಕಾಯುತ್ತ ನಿಂತಿರುವುದು ಕಾಣಿಸಿತು. ಆದರೆ ಅಮ್ಮ ಪಕ್ಕದಲ್ಲಿದ್ದಳು, ನಾನು ಏನು ಮಾಡುವಂತಿರಲಿಲ್ಲ. ನಾಗೇಶ ನನ್ನನ್ನು ನೋಡಿದ ಅನ್ನಿಸುತ್ತೆ. ನಾನು ಅಜ್ಜಿಯ ಊರಿನಿಂದ ಹಿಂದಕ್ಕೆ ಬರುವಾಗ ಹದಿನೈದು ದಿನ ಕಳೆದಿತ್ತು. ಅಲ್ಲಿಂದ ಅವನನ್ನು ಸಂಪರ್ಕಿಸಲು ಅವನ ವಿಳಾಸ ತಿಳಿದಿರಲಿಲ್ಲ . ಮೊಬೈಲ್ ಇರಲಿಲ್ಲ. ಅಲ್ಲಿಂದ ಬಂದ ನಂತರ ನನಗೆ ಶಾಕಿಂಗ್ ಸುದ್ದಿಯೊಂದು ಕಾದಿತ್ತು,
ನಾನು ಪ್ರೀತಿಸಿದ್ದ ನಾಗೇಶ ನಮ್ಮ ರಸ್ತೆಯ ಶಾರದ ಜೊತೆ ಓಡಿ ಹೋಗಿದ್ದ ಅಂತ ಎಲ್ಲಡೆಯು ಸುದ್ದಿ. ಅದು ನಿಜವೂ ಆಗಿತ್ತು, ಅವರಿಬ್ಬರು ಮನೆಬಿಟ್ಟು ಓಡಿ ಹೋಗಿದ್ದರು.
ಜ್ಯೋತಿ ಮತ್ತೆ ಮೌನವಾದಳು.
ನನಗೀಗ ಚಿಂತೆ ಅನ್ನಿಸುತ್ತಿತ್ತು. ಹೆಣ್ಣಿನ ಮನದಲ್ಲಿ ಅದೆಂತ ಗುಟ್ಟುಗಳಿರುತ್ತವೆ. ಎಲ್ಲ ಗುಟ್ಟುಗಳು ಮಾತುಗಳಾದರೆ ಬಹಳಷ್ಟು ಸಂಸಾರಗಳು ಒಡದು ಚೂರುಗಳಾಗುತ್ತವೆ.
ಆನಂದನಂತು ತಲೆ ತಗ್ಗಿಸಿ ಕುಳಿತ್ತಿದ್ದ, ಅವನ ಮನದಲ್ಲಿ ಏನಾಗುತ್ತಿದೆ ನನಗೆ ತಿಳಿಯುತ್ತಿಲ್ಲ. ಸಂದ್ಯಾಳಿಗೂ ಈಗ ಜ್ಯೋತಿ ಹೇಳಿದ ನೆನಪಿನ ಘಟನೆ ಅನಿರೀಕ್ಷಿತ ಅನ್ನಿಸುತ್ತೆ ಮೌನವಾಗಿ ಕುಳಿತಿದ್ದಳು. ಜ್ಯೋತಿ ಮಾತ್ರ ತನ್ನ ನೆನಪಿನ ಪಯಣದಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಹಿಂದೆ ಹೋಗುತ್ತಿದ್ದಳು. ಅವಳನ್ನು ತಡೆಯುವುದು , ಎಬ್ಬಿಸುವುದೋ ಏಕೆ ಸಾದ್ಯವಾಗುತ್ತಿಲ್ಲ ಎನ್ನುವ ಆತಂಕ ನನಗೆ
ಆನಂದ ಎದ್ದು ನಿಂತ, ಸಂದ್ಯಾ ಕಡೆ ನೋಡಿದ, ಅವರಿಬ್ಬರು ನಿಶ್ಯಬ್ದವಾಗಿ ಅಡುಗೆಮನೆ ಕಡೆ ಹೊರಟರು , ಕಾಫಿ ಮಾಡಿ ತರಲು. ಆರ್ಯ ಹಾಗು ಉಷಾ ಮತ್ತು ಶ್ರೀನಿವಾಸ ಮೂರ್ತಿಗಳು ಸುಮ್ಮನೆ ಕುಳಿತಿದ್ದರು ಏನು ತೋಚದೆ.
ನಾನು ಮತ್ತೆ ಕರೆದೆ
ಜ್ಯೋತಿ , ಎಲ್ಲರಿಗೂ ಸಮಯವಾಗುತ್ತಿದೆ, ಏಳುವಿರ ?
ಆಕೆ ನಿಧಾನವಾಗಿ ಎಂಬಂತೆ ಹೇಳಿದಳು
ಯಾರಿಗೆ ಸಮಯವಾಗುತ್ತಿದೆ ? , ನಾನೀಗ ಹಿಂದೆ ಮತ್ತೂ ಹಿಂದೆ ಹೋಗಬೇಕು ಏಳಲಾರೆ ,
ನಾನು ನಿಸ್ಸಹಯಾಕನಾಗಿ ಕುಳಿತೆ. ಸ್ವಲ್ಪ ಸಮಯದಲ್ಲಿ ಕಾಫಿ ಬಂದಿತು, ಎಲ್ಲರಿಗೂ ಒಂದು ಲೋಟ.
ನಾನು ಕಾಫಿ ಹಿಡಿದು ಜ್ಯೋತಿಯನ್ನು ಕೇಳಿದೆ,
ಜ್ಯೋತಿ ಏಳಿ, ನಿಮಗಾಗಿ ಕಾಫಿ ಬಂದಿದೆ, ಒಂದು ಲೋಟ ಕುಡಿಯಿರಿ ನಂತರ ನಿಮ್ಮ ನೆನಪಿನ ಪಯಣ ಸಾಗಲಿ
ನನ್ನ ಮಾತಿಗೆ ಪ್ರತಿಕ್ರಿಯಿಸದೆ ಜ್ಯೋತಿ ಮುಂದುವರೆದರು
" ಚಿಕ್ಕವಯಸ್ಸು ಅಂದರೆ ನನಗೆ ಅದೇಕೊ ತೀರ ಚಿಕ್ಕವಯಸ್ಸಿನದು ನೆನಪಿದೆ, ಎಲ್ಲರಿಗೂ ಹೇಗೋ ಕಾಣೆ,
ಆಗ ನಾವು ಮೂಡಿಗೆರೆ ಹತ್ತಿರದ ಹಳ್ಳಿಯಲ್ಲಿದ್ದೆವು. ನಮ್ಮ ತಂದೆ ಶಾಲೆಯ ಟೀಚರ್ ಹಾಗಾಗಿ ಟ್ರಾನ್ಸ್ ಫರ್ ಆದಾಗಲೆಲ್ಲ ಸುತ್ತಾಟ. ನಮ್ಮ ಪಕ್ಕದ ಮನೆಯಲ್ಲಿ ಟೈಲರ್ ಒಬ್ಬರಿದ್ದರು, ಅವರಿಗೆ ಇಬ್ಬರು ಮಕ್ಕಳು .ನಾನು ಅವರ ಮನೆಗೆ ಹೋದರೆ ನಮ್ಮ ತಂದೆಗೆ ಭಯ , ಅಲ್ಲಿ ಹೊಲಿಗೆಯ ಮಿಶಿನ್, ಕತ್ತರಿ ಎಲ್ಲ ಇರುತ್ತಿದ್ದು, ಮಕ್ಕಳು ಏನು ಮಾಡಿಕೊಳ್ಳುತ್ತಾರೋ ಎಂದು . ಒಮ್ಮೆ ನಡುಮದ್ಯಾಹ್ನ ಅವರ ಮನೆಗೆ ಹೋಗಿದ್ದೆ,
ಎಲ್ಲರೂ ಊಟಕ್ಕೆ ಕುಳಿತ್ತಿದ್ದರು.ನಾನು ನಿರಾಂತಕವಾಗಿ ಮುಂದಿನ ಅಂಗಡಿಯಲ್ಲಿದ್ದ ಹೊಲಿಗೆಯ ಮಿಶಿನ್ ಏರಿ ಕುಳಿತೆ. ಸೂಜಿಗೆ ಸೇರಿಸಿದ್ದ ದಾರ ಕಿತ್ತು ಬಂದಿತ್ತು. ದಾರ ಸರಿಪಡಿಸಲು ಪ್ರಯತ್ನಿಸಿದೆ, ಗೊತ್ತಿಲ್ಲದೆ ಹೊಲಿಗೆಯ ಯಂತ್ರದ ಪೆಡಲ್ಲನ್ನು ಒತ್ತಿಬಿಟ್ಟನೇನೊ, ಸೂಜಿ ಸೀದಾ ನನ್ನ ಹೆಬ್ಬೆರಳ ಉಗುರನ್ನು ದಾಟುತ್ತ ಕೈಬೆರಳನ್ನು ದಾಟಿ ತೂರಿಕೊಂಡು ಒಳಗೆ ಹೊರಟು ಹೋಯಿತು. ನನ್ನ ಬೆರಳ ಒಳಗೆ ಸೂಜಿ ಒಳ ಸೇರಿಹೋಗಿ ಅಪಾರ ನೋವು, ಒಮ್ಮೆಲೆ ಕೂಗಿಕೊಂಡೆ ಅಪ್ಪಾ ಅಪ್ಪಾ ಎಂದು "
ಜ್ಯೋತಿ ನಿಜಕ್ಕೂ ಅಪ್ಪ ಅಪ್ಪ ಎಂದು ಕೂಗುತ್ತಿದ್ದರು, ಈಗಲೂ ಅವರ ಬೆರಳಿನಲ್ಲಿ ಸೂಜಿ ತೂರಿದೆಯೇನೊಎನ್ನುವಂತೆ ಕೈ ಹಿಡಿದಿದ್ದರು, ಆಕೆಯ ಮುಖದಲ್ಲಿ ನೋವು. ಖಂಡಿತ ಈಕೆ ಎಚ್ಚರದಲ್ಲಿಲ್ಲ, ಸಂಮೋಹಿನಿಗೆ ಒಳಗಾಗಿದ್ದಾರೆ, ನಾನು ಏನು ಮಾಡದಿದ್ದರು, ಆಕೆ ಸ್ವಯಂ ಸಂಮೋಹಿನೆಗೆ ಒಳಗಾಗಿದ್ದಾರೆ.
ಜ್ಯೋತಿ ಮುಂದುವರೆಸಿದ್ದರು,
"ನನ್ನ ಕೂಗು ಕೇಳಿ ನನ್ನ ಅಪ್ಪ ಓಡಿ ಬಂದಿದ್ದರು , ಕೈ ಬೆರಳು ಗಾಯ ವಾಸಿ ಆಗಲು ಹದಿನೈದೆ ದಿನ ಹಿಡಿಯಿತೇನೊ"


ಜ್ಯೋತಿಯ ವರ್ಣನೆ ನಿಂತಿತು, ಆಕೆ ತನ್ನ ಬಾಲ್ಯಕ್ಕೆ ಬಂದಾಯಿತು, ಇನ್ನು ಹೆಚ್ಚು ಹಿಂದೆ ಹೋಗಲು ಸಾದ್ಯವಿಲ್ಲ,


ಹತ್ತು ನಿಮಿಶವಾಯಿತೇನೊ ಜ್ಯೋತಿ ಪುನಃ ಮಾತನಾಡಲು ಪ್ರಾರಂಭಿಸಿದರು, ಸಮಯ ನೋಡಿದೆ , ಸಂಜೆ ಆರು ಗಂಟೆ ಆಯಿತು.ಎಲ್ಲರಲ್ಲೂ ಚಡಪಡಿಕೆ
ನಾನಂತು ಬಿಟ್ಟು ಏಳುವಹಾಗಿರಲಿಲ್ಲ , ಆಕೆ ಹೇಳುತ್ತಿದ್ದಳು,


" ಆಗ ನಾನು ತುಂಬಾ ಚಿಕ್ಕವಳು ಅನ್ನಿಸುತ್ತೆ, ಮಾತನಾಡಲು ಬರುತ್ತಿತ್ತೋ ಇಲ್ಲವೋ ತಿಳಿಯದು, ಸಂಜೆಯ ಸಮಯ ನಾನು ಮನೆಯ ಮುಂದೆ ನಿಂತಿದ್ದೆ, ನಮ್ಮ ಅಪ್ಪ ಎದುರಿಗೆ ಇದ್ದರು. ನಾನು ನಿಂತಿದ್ದಿದ್ದು ಹಸಿರುಹುಲ್ಲಿನ ನೆಲದ ಮೇಲೆ. ಎದುರಿಗೆ ಏನೊ ನೋಡುತ್ತಿದ್ದವಳು, ಕಾಲು ತಣ್ಣಗಾಯಿತು ಎಂದು ನನ್ನ ಕಾಲ ಕಡೆ ನೋಡಿದೆ , ಅದೆಂತದೋ ದೊಡ್ಡ ಹಾವು. ಉದ್ದ ಸುಮಾರು ಎಂಟು ಅಡಿಯೇ ಇತ್ತೋ ಏನೊ, ನಿಧಾನವಾಗಿ ಹರಿಯುತ್ತ ಹೋಗುತ್ತ ಇದ್ದಿದ್ದು ನನ್ನ ಪಾದಗಳ ಮೇಲೆ ಹರಿಯುತ್ತಿತ್ತು.
ಹಾವು ನನ್ನ ಪಾದಗಳ ಮೇಲೆ ಹರಿದಾಗ ಅದೇನೆಂದು ಅರಿಯದ ನಾನು ತಣ್ಣಗಾದ ಕಾರಣಕ್ಕೆ ಕುತೂಹಲದಿಂದ ನೋಡುತ್ತಿದ್ದೆ ಎದುರಿಗಿದ್ದ ಅಪ್ಪ ಅಲುಗಾಡದೆ ನಿಂತಿದ್ದರು, ಒಮ್ಮೆ ಕೂಗಿದರೆ, ನಾನು ಕದಲಿದರೆ ಹಾವಿನಿಂದ ಅಪಾಯ ಎಂದು ಅವರು ನಿರ್ಧರಿಸಿದ್ದರೋ ಏನೊ, ಹಾಗಾಗಿ ಹಾವು ನನ್ನ ಕಾಲ ಮೇಲಿನಿಂದ ಹರಿದು ದೂರ ಸಾಗುವವರೆಗೂ ನೋಡುತ್ತಲೇ ಇದ್ದವರು , ನಂತರ ತಕ್ಷಣ ನನ್ನನ್ನು ಎತ್ತಿಕೊಂಡು ಒಳಗೆ ಓಡಿಹೋಗಿದ್ದರು " ಬಾಲ್ಯವನ್ನು ನೆನೆದು ಜ್ಯೋತಿಯ ಮುಖದಲ್ಲಿ ಸಣ್ಣನಗು
ಈಗ ಕುತೂಹಲ ಜ್ಯೋತಿ ಇನ್ನೂ ಮುಂದೆ ಏನು ಹೇಳುವರೋ ನೋಡೋಣ ಎಂದು
ಹಿಂದೆ ಮತ್ತೂ ಹಿಂದೆ ಸಾದ್ಯವಿಲ್ಲವೇ ? ಆಕೆ ಗೊಣಗುತ್ತಿದ್ದರು ,
ನಾನು ಚಿಂತಿಸುತ್ತಿದ್ದೆ ನಾವೆಲ್ಲರೂ ಭೂಮಿಯ ಒಂದು ಅಂಶವೇ ಹಾಗಾಗಿ ಭೂಮಿಯ ಉಗಮದ ಜೊತೆಯೆ ನಮ್ಮ ಉಗಮವೂ ಆಗಿರಬೇಕಲ್ಲವೆ ಆದರೆ ಮನುಷ್ಯನ ಮೆದುಳಿಗೆ ತನ್ನದೆ ಆದ ಲಿಮಿಟೇಶನ್ ಇದೆ, ದೇಹದ ಹಿಡಿತದಲ್ಲಿರುವ ಅದು ದೇಹಕ್ಕಿಂತ ಹಿಂದೆ ಹೋಗಲಾರದೇನೊ,
ನಮ್ಮ ಮೆದುಳಿನ ನ್ಯೂರಾನ್ ಗಳು ಸಹ ನಮ್ಮದೇ ದೇಹದ ಜೀವಾಣುಗಳಿಂದ ಆಗಿರುವುದು, ಹೃದಯವಾಗಲಿ, ಮೆದುಳಾಗಲಿ, ಉಳಿದ ಯಾವುದೇ ಬಾಗವಾಗಲಿ ಎಲ್ಲದಕ್ಕು ಮೂಲ ಕಣಗಳು ಒಂದೇನೆ ಎಂದು ಹೇಳುವರು. ಅಂತಹ ಜೀವಕಣಗಳು ನಮ್ಮಲ್ಲಿ ಹರಿದುಬರುತ್ತಿರುವುವು.
ನಮ್ಮ ದೇಹದ ಜೀನ್ಸ್ಗಳು ಸಹ ನಮ್ಮ ತಂದೆ ತಾಯಿಯ ವಂಶಪಾರಂಪರ್ಯವಾಗಿ ವಂಶದಲ್ಲಿ ಹರಿದು ಬಂದಿರುವುದೆ ಅನ್ನುವರಲ್ಲ, ಹಾಗಾಗಿ ನೆನಪಿನ ಕೋಶಗಳಲ್ಲಿ ಅದೇಕೆ ಹಿಂದಿನ ನೆನಪು ಹರಿದು ಬಂದಿರಲಾರದು?. ಇರುವದೇನೊ ಅದನ್ನು ಪ್ರಚೋದನೆಗೊಳಿಸುವ ಶಕ್ತಿ ನಮ್ಮಲಿಲ್ಲವೇನೊ, ಅಥವ ತೀರ ರಹಸ್ಯವಾಗಿ ನಮ್ಮ ಮೆದುಳಿನ ಯಾವುದೋ ಮೂಲೆಯಲ್ಲಿ ಕುಳಿತಿರುವ ನೆನಪುಗಳನ್ನು ಕೆದಕಲು ಯಾವುದಾದರು ರಹಸ್ಯ ದಾರಿ ಇರಬಹುದು. ಎಂದೆಲ್ಲ ಯೋಚಿಸುತ್ತಿದ್ದೆ. ಅಲ್ಲದೇ ಜ್ಯೋತಿಯ ಸ್ಥಿತಿಯ ಆತಂಕದ ಕಾರಣದಿಂದಾಗಿ, ಈ ವಿಷಯ ಹೆಚ್ಚು ಯೋಚಿಸುವುದು ಕಷ್ಟವೆನಿಸುತ್ತಿತ್ತು. ಜ್ಯೋತಿಯ ಮುಖದಲ್ಲಿ ಎಂತದೋ ವಿಲಕ್ಷಣ ಭಾವವಿತ್ತು. ಅದು ನೋವೋ ಸಂತಸವೋ ತಿಳಿಯಲಾರದ ಭಾವ. ಏನನ್ನೊ ನೆನೆಯಲು ಪ್ರಯತ್ನಪಡುತ್ತಿದ್ದಾಳೆ
" got it got it ..... ಸಾದ್ಯ ಅದು ಸಾದ್ಯ.... " ಜ್ಯೋತಿಯ ಉದ್ಗಾರ ..
ಅಷ್ಟಕ್ಕೂ ಈಕೆ ಏನನ್ನು ನೆನಪಿಸಿಕೊಳ್ಳುತ್ತಿರುವುದು ನನಗೆ ಅರ್ಥವಾಗುತ್ತಿಲ್ಲ.
ಮುಂದುವರೆಯುವುದು...