Thursday, April 26, 2012

ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ


ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ

  ಮೊದಲ ಬಾಗ : ಬೆಟ್ಟದ ಬುಡದಲ್ಲಿ ಮನೆಯ ಮಾಡಿ
'ಒಬ್ಬರೆ ಕುಳಿತಾದರು ಮನೆಯಲ್ಲಿ ಏನುಮಾಡುವಿರಿ? ಹೇಗು ರಜಾ ಅಲ್ಲವೆ ಜೊತೆಗೆ ಬನ್ನಿ' 
ಮಗಳು ಮತ್ತೊಮ್ಮೆ ಹೇಳಿದಳು, ನಾನು ಏನು ಉತ್ತರ ಕೊಡಲಿಲ್ಲ.
ಬಾನುವಾರವು ಸೇರಿ, ಒಟ್ಟೊಟ್ಟಿಗೆ ಮೂರುದಿನಗಳ ರಜಾ ಬಂದಿತ್ತು. ನನ್ನ ತಮ್ಮ ಹಾಗು ಅವನ ಸಂಸಾರ, ಜೊತೆಗೆ ನಮ್ಮ ಮನೆಯವರು ಸೇರಿ, ಬಾನುವಾರ ಶಿವಗಂಗೆಗೆ ಹೋಗಿಬರುವುದು ಅಂತ ಮಾತನಾಡುತ್ತಿದ್ದರು. ನನಗೆ ಕಳೆದ ನಾಲ್ಕೈದು ದಿನ ಎಂತದೊ ವೈರಲ್ ಫೀವರ್ ಅಂತ ಹೇಳಿ ಡಾಕ್ಟರ್ ಆಂಟಿಬಯೋಟಿಕ್ ಕೊಟ್ಟಿದ್ದರು ಅದು ನಿನ್ನೆಗೆ ಮುಗಿದಿತ್ತು. ಜ್ವರ ಇಲ್ಲವಾದರು ಮೈಯಲ್ಲಿ ಎಂತದೊ ಸುಸ್ತು , ಮುಜುಗರ ಎಲ್ಲವು ಸೇರಿ ನನಗೆ ಹೊರಡುವ ಉತ್ಸಾಹವಿರಲಿಲ್ಲ. ಏನು ಉತ್ತರ ಕೊಡುವದೆಂಬ ಸ್ವಷ್ಟತೆ ನನ್ನ ಮನದಲ್ಲಿ ಮೂಡುವ ಮೊದಲೆ ನನ್ನ ಪತ್ನಿ ಮಾತನಾಡಿದಳು.
"ಅವಳನ್ನುವುದು ನಿಜವೆ, ನೀವು ಒಬ್ಬರೆ ಮನೆಯಲ್ಲಿದ್ದು ಮಾಡುವದೇನು, ಊಟ ತಿಂಡಿಯದು ಎಲ್ಲವು ಸಮಸ್ಯೆ. ಬದಲಿಗೆ ನಮ್ಮ ಜೊತೆ ಹೊರಟುಬಿಡಿ. ಶಿವಗಂಗೆಯಲ್ಲಿ ಬೇಕಿದ್ದರೆ ಕೆಳಗೆ ದೇವಸ್ಥಾನ ನೋಡಿ ನೀವು ಅಲ್ಲಿಯೆ ಉಳಿದುಬಿಡಿ. ನಾವೆಲ್ಲ ಬೆಟ್ಟವನ್ನು ಹತ್ತಿ ಶಾಂತಲ ಡ್ರಾಪ್, ಬಸವ ಎಲ್ಲ ನೋಡಿಬರುತ್ತೇವೆ. ಅಲ್ಲಿಯವರೆಗು ನೀವು ಕಾರಿನ ಹತ್ತಿರ ನೆರಳಿನಲ್ಲಿ ಎಲ್ಲಿಯಾದರು ಇದ್ದರೆ ಆಯಿತು" ಎಂದಳು.
 ಪ್ರಪಂಚದಲ್ಲಿ ಇದೊಂದು ಸೋಜಿಗ! ನಮ್ಮ ಬಗ್ಗೆ ಯಾವುದಾದರು ವಿಷಯದಲ್ಲಿ ನಿರ್ದಾರ ಕೈಗೊಳ್ಳುವಾಗ ಎಷ್ಟೊಂದು ದ್ವಂದ್ವಕ್ಕೆ , ಅನುಮಾನಕ್ಕೆ ಒಳಗಾಗುತ್ತೇವೆ ಆದರೆ ಬೇರೆಯವರ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಎಷ್ಟು ಬೇಗ ನಿರ್ಧಾರಕ್ಕೆ ಬರುತ್ತೇವೆ ಅಲ್ಲವೆ.  ನಾನು ಶಿವಗಂಗೆಗೆ ಹೊರಡುವ ಬಗ್ಗೆ ನನ್ನ  ಹೆಂಡತಿ  ಹಾಗು  ಮಗಳು  ನಿರ್ಧಾರ  ತೆಗೆದುಕೊಂಡು ಆಗಿತ್ತು.  ನನಗೆ ಅನ್ನಿಸಿತು  "ವಾದ ಹಾಗು ಯುದ್ದ ಮಾಡಿ ಯಾರ  ಮನಸನ್ನು ಗೆಲ್ಲಲಾಗುವದಿಲ್ಲ"   ಹಾಗಾಗಿ ಸುಮ್ಮನೆ ಹೊರಡುವುದು ಮತ್ತು ಎಲ್ಲರ ಮನಸಿನ ಕಿರಿಕಿರಿ ತಪ್ಪಿಸುವುದು ಒಳ್ಳೆಯದು ಎಂದು. 
 ಬೆಳಗ್ಗೆ ಶಿವಗಂಗೆ ತಲುಪುವಾಗ ಹತ್ತಿರ ಹತ್ತಿರ ಒಂಬತ್ತರ ಸಮಯ. ಮನುಷ್ಯನ ಈ ಮನೋವೃತ್ತಿಯೆ ವಿಚಿತ್ರ, ನಿನ್ನೆ ಎಲ್ಲರು ಕರೆದು ಬಲವಂತ ಮಾಡುವಾಗ ನನಗೆ ಹೊರಡಲು ಮನಸ್ಸು ಇರಲಿಲ್ಲ. ಆದರೆ ಬೆಳಗ್ಗೆ ಹೊರಟ ನಂತರ ಮನಸ್ಸು ಉಲ್ಲಾಸದಿಂದ ತುಂಬಿ, ಪ್ರಯಾಣ ಉತ್ಸಾಹದಿಂದ ಕೂಡಿತ್ತು.  
   ಕಾರು ನಿಲ್ಲಿಸಿ ಎಲ್ಲರು ಸುತ್ತಲು ಹೊರಟೆವು. ಮೊದಲು ಪರಶಿವನ ದರುಶನ ನಂತರ ಬೆಟ್ಟದ ಮೇಲಿನ ಬಸವನ ಹತ್ತಿರಕ್ಕೆ ಹೋಗುವ ಕೆಲಸ ಎಂದು ನಿರ್ದರಿಸಿ. ದೇವಾಲಯಕ್ಕೆ ಹೊರಟೆವು.  ಬೆಂಗಳೂರಿನಲ್ಲಿ ಅಧುನಿಕವಾಗಿ ಕಟ್ಟುವ ದೇವಾಲಯಗಳು ಜನಸಂದಣಿಯಿಂದ ಕೂಡಿರುತ್ತಾವಾಗಲಿ ದೇವಾಲಯದಲ್ಲಿ ಮನಸಿಗೆ ಸಿಗಬೇಕಾದ ಶಾಂತಿ ನೆಮ್ಮದಿಯಿಂದ ಹೊರಗಿರುತ್ತವೆ. ಆ ದೃಷ್ಟಿಯಲ್ಲಿ ಶೃಂಗೇರಿಯ ಶಾರದೆಯ ದೇವಾಲಯ ನನಗೆ ಮೆಚ್ಚು, ಅಲ್ಲಿ ಎಷ್ಟೆ ಜನದಟ್ಟಣೆಯಿರಲಿ, ಅದೇನೊ ಒಳಗೆ ಕುಳಿತರೆ ಮನದಲ್ಲಿ ಒಂದು ಶಾಂತಿ ನೆಲಸುತ್ತದೆ. 
    ಶಿವಗಂಗೆಯ ಶಿವನ ದೇವಾಲಯದ ಒಳಗೆ ಹೋದಂತೆ ಅಲ್ಲಿನ ಶಾಂತ ಹಾಗು ತಣ್ಣನೆಯ ವಾತವರಣ ನನ್ನ ಮನ ತಟ್ಟಿತ್ತು. ಶಿವನ ತಲೆಯ ಮೇಲಿಟ್ಟ ತುಪ್ಪವು ಅವನ ತಂಪಿಗೆ ಬೆಣ್ಣೆಯಾಗುವದಂತೆ. ಅಲ್ಲಿನ ಮುಚ್ಚಿದ ದ್ವಾರದ ಗುಹೆಯು ಬೆಂಗಳೂರಿನ ಗವಿಗಂಗಾದರೇಶ್ವರನ ಗುಡಿಗೆ ತಲುಪಿಸುವುದು ಎಂದು ತಿಳಿಯಿತು. ಒಮ್ಮೆ ಆ ದಾರಿಯಲ್ಲಿ ಬೆಂಗಳೂರಿಗೆ ಹೋದರೆ ಎಷ್ಟು ಚೆನ್ನು ಅನ್ನಿಸಿತು ಆದರೆ ನಮ್ಮದು ಆ ರೀತಿ ಸಾಹಸಿಗರ ಮನವಲ್ಲ.  ನನಗೇಕೊ ಅಲ್ಲಿನ ವಾತವರಣ ತುಂಬ ಮೆಚ್ಚುಗೆಯಾಯಿತು. ಹೊರಬಂದಂತೆ ಎಲ್ಲರು ಉಳಿದ ದೇವಾಲಯಗಳು , ಬೆಟ್ಟದ ತುದಿಯಲ್ಲಿನ ಬಸವ, ಶಾಂತಲ ಡ್ರಾಪ್ , ಒಳಕಲ್ಲು ತೀರ್ಥ ಎಲ್ಲವನ್ನು ನೋಡುವ ಉತ್ಸಾಹದಿಂದ ಹೊರಟರು. 
 ನಾನು 'ನನಗೇಕೊ ಇಲ್ಲಿಯೆ ಕುಳಿತಿರುವ ಮನಸಾಗಿದೆ, ನೀವೆಲ್ಲ ಮೇಲೆ ಹೋಗಿ ಬನ್ನಿ ನಾನು ಸ್ವಲ್ಪ ನೆಮ್ಮದಿಯಿಂದ ಇಲ್ಲಿಯೆ ಕುಳಿತಿರುತ್ತೇನೆ ' ಅಂದೆ. ಮಗಳ ಮುಖ ಚಿಕ್ಕದಾಯಿತು.  ಅವಳು ನಾನೇಕೊ ಬಲವಂತವಾಗಿ ಕರೆತಂದಿದ್ದರಿಂದ ಹಾಗೆ ವರ್ತಿಸುತ್ತಿರುವೆ ಎಂದು ಭಾವಿಸಿದಂತಿತ್ತು. ಆದರೆ ನಿಜ ಹೇಳಬೇಕೆಂದರೆ ನನಗೆ ಅಲ್ಲಿ ತಣ್ಣಗೆ ಕುಳಿತಿರುವ ಮನಸು ಬಲವಾಗಿತ್ತು. ನಾನು ಅದನ್ನೆ ಹೇಳಿದೆ, ಮೇಲೆ ಹತ್ತಲು ನನಗೆ ಉತ್ಸಾಹವು ಇಲ್ಲ, ಅಲ್ಲದೆ ಸ್ವಲ್ಪ  ಶ್ರಮವಾಗುತ್ತಿರುವದರಿಂದ ಇಲ್ಲಿಯೆ ಇರುವೆನು ನೀವೆಲ್ಲ ಹೋಗಿಬನ್ನಿ ನನಗೆ ಬೇರೆ ಯಾವ ಬೇಸರವು ಇಲ್ಲವೆಂದು ತಿಳಿಸಿದೆ. ಸರಿ ಅವರೆಲ್ಲ ಅರ್ಧಮನದಿಂದ ಅಲ್ಲಿಂದ ಹೊರಟರು. 
 ನನ್ನ ಮಗಳು ಹೋಗುವಾಗ  "ಸರಿ ಅಪ್ಪ ನಾವು ಆದಷ್ಟು ಬೇಗ ಹಿಂದೆ ಬರುವೆವು, ನೀವು ವಿರಾಮ ಮಾಡಿ, ಬಿಸಿಲಿನಲ್ಲಿ ಕುಳಿತಿರಬೇಡಿ. ಆಯಾಸವಾಗುತ್ತದೆ, ನೀರು ಬೇಕೆನಿಸಿದರೆ ಕಾರಿನಲ್ಲಿ ಇದೆ, ಕಾರಿನ ಕೀ ನಿಮ್ಮ ಜೇಬಿನಲ್ಲಿ ಇದೆ ನೆನಪಿರಲಿ" ಅಂತ ಏನೆಲ್ಲ ಹೇಳಿ ಅವಳ ಅಮ್ಮ ಮತ್ತು ನನ್ನ ತಮ್ಮ ಮತ್ತು ಅವನ ಸಂಸಾರದೊಡನೆ ಹೊರಟಳು. ನಾನು ಸರಿ ಎಂದು ತಲೆಯಾಡಿಸಿ ದೇವಾಲಯದ ಮುಂದೆ ಕುಳಿತಿದ್ದೆ. 
 ದೇವಾಲಯದಿಂದ ಸ್ವಲ್ಪ ದೂರದಲ್ಲಿಯೆ ಕೆಲವು ಬಿಕ್ಷುಕರು ಕುಳಿತ್ತಿದ್ದರು. ಅವರೆಲ್ಲರ ಕೊನೆಯಲ್ಲಿ , ಒಬ್ಬ ವಯಸ್ಸಾದ ವ್ಯಕ್ತಿಯೊಬ್ಬರು ಕುಳಿತಿದ್ದರು. ನೋಡಲು ಬಿಕ್ಷುಕನಂತೆ ಅನ್ನಿಸಲಿಲ್ಲ. ನನಗೆ ಹಾಗೆನ್ನಿಸಲು ಕಾರಣವಿದೆ,  ಸಾಮನ್ಯ ಬಿಕ್ಷುಕರ ಮುಖ ನೋಡುವಾಗ ಅಲ್ಲಿ ಒಂದು ಧೈನ್ಯತೆಯ ಭಾವ ತುಂಬಿರುತ್ತದೆ, ಕೆಲವೊಮ್ಮೆ ಮುಖದಲ್ಲಿ ಬಲವಂತವಾಗಿ ಅವರೆ ದೈನ್ಯತೆ ತುಂಬಿ, ದೀನಸ್ವರದಲ್ಲಿ ಮಾತನಾಡುತ್ತಾರೆ.   ಆದರೆ ಈತನ ಮುಖದಲ್ಲಿ ಅದೇನೊ ಒಂದು ಶಾಂತಭಾವ.  ಅವರ ಮುಖವನ್ನು ನೋಡುವಾಗಲೆ ನಮ್ಮ ಮನವು ಶಾಂತವಾಯಿತೇನೊ ಎನಿಸುವ ಭಾವ.   
  ನನ್ನ ಮಗಳು ನನ್ನ ಜೊತೆ ಮಾತನಾಡುವಾಗ ನಗುತ್ತ ಅವಳತ್ತಲೆ ನೋಡುತ್ತಿದ್ದ ಆತ. ಅವಳು ನನಗೆ ಉಪಚಾರವನ್ನೆಲ್ಲ ಹೇಳಿ ಮೇಲೆ ಹೊರಟಾಗ ನಗುತ್ತ ತಲೆಯಾಡಿಸುತ್ತಿದ್ದರು. ನನಗೇನು ಒಂದು ರೀತಿ ಅನ್ನಿಸಿತು. ಇವರೇಕೆ ನಮ್ಮನ್ನು ಈರೀತಿ ಗಮನಿಸುತ್ತಿದ್ದಾರೆ, ಎಂಬ ಸಣ್ಣ ಅನುಮಾನ.  ಅವಳು ಅತ್ತ ಹೋದ ನಂತರ ಅವರು ನನ್ನ ಕಡೆ ನೋಡುತ್ತ 
"ನಿಮ್ಮ ಮಗಳೇನು" ಎಂದರು . ನಾನು ಸ್ವಲ್ಪ ಗಂಭೀರವಾಗಿಯೆ 
"ಹೌದು, ನನ್ನ ಮಗಳು" ಎಂದೆ, ಅವರ ಮುಖ ನೋಡಿದೆ. ಸನ್ಯಾಸಿಗಳು ಧರಿಸುವ ಕಾವಿ ವಸ್ತ್ರಗಳನ್ನು ದರಿಸಿದ್ದರು. ದೀರ್ಘವಾದ ಗಡ್ಡ, ಪೊದೆ ಮೀಸೆಯ ಹಿನ್ನಲೆಯಲ್ಲಿ ಕಾಂತಿಯುಕ್ತ ಕಣ್ಣುಗಳು.   ಅವರು ಮುಂದೇನು ಮಾತನಾಡಲಿಲ್ಲ. ನಾನು ಕೆಲವು ನಿಮಿಷ ಕಳೆದು ಅಲ್ಲಿಂದ ಎದ್ದು , ಸುತ್ತಲೆಲ್ಲ ನೋಡೋಣ  ಎಂದು ಹೊರಟೆ.
 ಸುತ್ತಮುತ್ತ ಎಲ್ಲ ಸುತ್ತಾಡಿ ನೋಡಿದೆ.  ದೇವಾಲಯಗಳು , ಮಂಟಪಗಳು , ಶಾರದ ದೇವಾಲಯ ಹೀಗೆ ಏನೇನೊ, ಆದರೆ ಅದೇಕೊ ಮತ್ತೆ ಅ ಗಂಗಾದರನ ಗುಡಿಯ ಮುಂದೆ ಹೋಗಿ ಕುಳಿತುಕೊಳ್ಳಬೇಕೆನಿಸಿತು. ಅಲ್ಲಿ ಹೋದೆ ದೇವಾಲಯದಿಂದ  ಸ್ವಲ್ಪ ದೂರ ನೆರಳಿರುವ ಸ್ಥಳ ಆರಿಸಿ ಕುಳಿತೆ, ನಂತರ ಗಮನಿಸಿದೆ, ದೇವಾಲಯದ ಮುಂದೆ ಬಿಕ್ಷುಕರ ಜೊತೆ ಇದ್ದ ಆ ಸನ್ಯಾಸಿ,  ಅಲ್ಲಿ ಬಂದು ಕುಳಿತಿದ್ದಾರೆ. ಅದೇ ಶಾಂತ ಮುಖಭಾವ. ಯಾರತ್ತಲು ನೋಡದೆ ತನ್ನ ಪಾಡಿಗೆ ತಾನು ಕುಳಿತಿದ್ದರು. ನಾನು ಕುಳಿತಿದ್ದು ಕಂಡು ನನ್ನತ್ತ ತಿರುಗಿ ಒಂದು ಕಿರುನಗೆ ಬೀರಿದರು. ನನಗೂ ನಗುವುದು ಅನಿವಾರ್ಯವಾಯಿತು. 
"ಬೆಂಗಳೂರಿನವರ ಹಾಗೆ ಕಾಣುವಿರಿ" ಎಂದರು.  ಇದೊಂದು ವಿಚಿತ್ರ, ನಾನು ಗಮನಿಸಿರುವೆ, ಭಾರತದ ಯಾವುದೆ ಬಾಗಕ್ಕೆ ಹೋಗಿ, ನೋಡಿ ಅದೇನೊ ಬೆಂಗಳೂರಿನವರ ನಡೆನುಡಿಗಳನ್ನು ಬೇಗ ಗಮನಿಸುತ್ತಾರೆ. ನನಗೆ ಈ ಪ್ರಶ್ನೆ ಎದುರಾಗಿರುವುದು ಇದು ಮೊದಲೇನು ಅಲ್ಲ. 
"ಹೌದು" ಎಂದೆ.  
"ನೀವೇಕೆ ಮೇಲೆ ಹೋಗಲಿಲ್ಲ, ಮನಸಿಲ್ಲವೆ"  ಅವರು ಮತ್ತೆ ಮಾತು ಬೆಳೆಸಿದರು. 
"ಅದೇಕೊ ನನಗೆ ಆಸಕ್ತಿಯಿರಲಿಲ್ಲ ಹಾಗಾಗಿ ಹೋಗಲಿಲ್ಲ" ಎಂದೆ ನಾನು. 
 ಹೀಗೆ ಅನವಶ್ಯಕ ಮಾತುಗಳಲ್ಲಿ ಮುಳುಗಿರುವಂತೆ ಒಂದು ವಿಚಿತ್ರ ಗಮನಿಸಿದೆ, ಅವರು ಯಾವುದೆ ಬಿಕ್ಷೆ ಯಾರಲ್ಲಿ ಬೇಡದಿದ್ದರು, ಅಲ್ಲಿಗೆ ಬರುವು ಕೆಲವು ಪ್ರವಾಸಿಗರು, ಅವರನ್ನು ಕಂಡು ಅದೇನು ಭಾವಿಸುತ್ತಿದ್ದರೊ , ಅವರ ಮುಂದೆ ಹಣವನ್ನು ಹಾಕಿ ಹೋಗುತ್ತಿದ್ದರು. ಅವರಾದರೊ ಆ ಹಣವನ್ನು ಕಣ್ಣೆತ್ತಿಯು ನೋಡುತ್ತಿರಲಿಲ್ಲ. ಸ್ವಲ್ಪ ಕಾಲವಾದ ಕೂಡಲೆ ಅಲ್ಲಿಯೆ ಸ್ವಲ್ಪ ದೂರದಲ್ಲಿದ್ದ ಬಿಕ್ಷುಕರು ಓಡಿಬಂದು ಅವರ ಮುಂದೆ ಬಿದ್ದಿದ್ದ ಹಣವನ್ನು ಎತ್ತಿಕೊಂಡು ಹೋಗಿ   ಅ ಚಿಲ್ಲರೆ ಹಣವನ್ನು ಹಂಚಿಕೊಳ್ಳುತ್ತಿದ್ದರು. ಮತ್ತೆ ಸ್ವಲ್ಪ ಕಾಲ ಅವರ ಮುಂದು ಹಣಬಿದ್ದೊಡನೆ ಅದೇ ಕತೆ ಯಾರೊ ಬಂದು ಪುನಃ ಅದನ್ನು ಕೊಂಡೋಯ್ದು ಅದೆ ರೀತಿ ಹಂಚಿಕೊಳ್ಳುತ್ತಿದ್ದರು. ಅವರಾದರು ಅದನ್ನು ಗಮನಿಸುತ್ತಲೆ ಇರಲಿಲ್ಲ ಅದಕ್ಕು ತನಗು ಯಾವ ಸಂಬಂಧವು ಇಲ್ಲವೆಂಬಂತೆ ಕುಳಿತಿದ್ದರು. 
 ನನಗೆ ಆಶ್ಚರ್ಯ ತಡೆಯಲಾಗಲಿಲ್ಲ, ಕಡೆಗೆ ಕೇಳಿಯೆ ಬಿಟ್ಟೆ
"ಅದೇನು ನಿಮ್ಮಮುಂದೆ ಬಿದ್ದ  ಹಣವನ್ನೆಲ್ಲ ಅವರು ಅಗಾಗ್ಯೆ ಬಂದು ತೆಗೆದುಕೊಂಡು ಹೋಗುತ್ತಿರುವರು, ನೀವಾದರು ಅದನ್ನು ಮುಟ್ಟುತ್ತಿಲ್ಲ, ಅದು ನಿಮಗೆ ಸಲ್ಲಬೇಕಾದ ಹಣವಲ್ಲವೆ" ಎಂದು. 
ಅವರು ಸ್ವಲ್ಪ ನಗುತ್ತ ಹೇಳಿದ 
"ಹಣವೆ ತೆಗೆದುಕೊಳ್ಳಲಿ ಬಿಡಿ ನನಗೇನು ಅದರ ಅವಶ್ಯಕತೆಯಿಲ್ಲ, ಅವರಿಗೆ ಅಗತ್ಯವಿದ್ದೀತು ತೆಗೆದುಕೊಳ್ಳುತ್ತಿದ್ದಾರೆ ಅನ್ನಿಸುತ್ತೆ" 
ನನಗೆ ಆಶ್ಚರ್ಯವೆನಿಸಿತು ಹಣದ ಅಗತ್ಯವಿಲ್ಲದವರು ಇದ್ದಾರೆಯೆ ಈ ಪ್ರಪಂಚದಲ್ಲಿ , ಅಲ್ಲದೆ ನಮ್ಮದು ಅನ್ನುವ ಹಣವನ್ನು ಸಹ ನನಗೆ ಅಗತ್ಯವಿಲ್ಲವೆಂದು ಬಿಡುತ್ತಾರೆಯೆ ಅದು ಎಷ್ಟೆ ಸಣ್ಣ ಮೊತ್ತವಾಗಿರಲಿ, ಇದೇನೊ ವಿಚಿತ್ರದಂತೆ ತೋರಿತು, ಹಾಗಾಗಿ ನಾನು ಹೇಳಿದೆ
"ನಿಮಗೆ ಅಗತ್ಯವಿಲ್ಲದಿದ್ದರೆ, ನೀವು ಕೊಡುವರಿಗೆ ಹೇಳಬಹುದಲ್ಲ, ನನಗೆ ಹಣದ ಅಗತ್ಯವಿಲ್ಲವೆಂದು, ಕೊಡಬೇಡಿ ಎಂದು"
ಅವರು ಅಂದರು
"ಮಗು ನಾನು ಎಷ್ಟು ಜನರಿಗೆ ಆ ರೀತಿ ಹೇಳುತ್ತ ಕೂಡಲು ಸಾದ್ಯ,  ಇಲ್ಲಿ ಹೋಗುವ ಜನ ನನ್ನ ಸನ್ಯಾಸಿಯ ಬಟ್ಟೆ ಕಾಣುತ್ತ ಅವರಾಗಿಯೆ ಹಾಕಿ ಹೋಗುತ್ತಿದ್ದಾರೆ, ಆದರೆ ನನಗೆ ನನ್ನದೆ ಆದ ಒಂದು ವ್ರತವಿದೆ, ನಾನು ಜೀವನದಲ್ಲಿ ಎಂದು ಹಣವನ್ನು ಮುಟ್ಟಲಾರೆನು ಏನು ಮಾಡಲಿ" ಎಂದರು. ನನಗೆ ಮತ್ತು ಆಶ್ಚರ್ಯವಾಯಿತು, ಹಣವನ್ನು ತೆಗೆದುಕೊಳ್ಳದೆ ಈ ಸನ್ಯಾಸಿ ತನ್ನ ಖರ್ಚಿಗೆ ಏನು ಮಾಡುವರು? ಹೋಗಲಿ ಈ ಮಧ್ಯಾನದ ಊಟಕ್ಕಾದರು ಏನು ಮಾಡುವರು ಅನ್ನಿಸಿ , ಬಾಯಿ ತಪ್ಪಿ ಅದನ್ನೆ ಕೇಳಿದೆ 
"ಸರಿ ನಿಮಗೆ ಹಣ ಬೇಡವೆಂದರೆ ಸರಿ , ಮಧ್ಯಾನದ ಊಟಕ್ಕೆ ಏನು ಮಾಡುವಿರಿ " 
ಅವರು ಜೋರಾಗಿ ಗಹಗಹಿಸಿ ನಕ್ಕರು 
"ಈ ದಿನದ ಮಧ್ಯಾನದ ಊಟವನ್ನು ನೀನು ಕೊಡಿಸುವಿಯಲ್ಲ ಮಗು, ನನಗಿನ್ನೇನು ಯೋಚನೆ" 
ನನಗೆ ಕಸಿವಿಸಿಯಾಯಿತು, ನಾನೆಲ್ಲಿ ಊಟ ಕೊಡಿಸುವೆನೆಂದು ಹೇಳಿದೆ, ಈತ ಏನೇನೊ ಹೇಳುವರಲ್ಲ ಎಂದುಕೊಂಡು, ತಡವರಿಸುತ್ತ
"ಏನು,  ಹಾಗೆಂದರೆ ಏನು " ಎಂದು ಕೇಳಿದೆ.
"ಏನಿಲ್ಲ, ಮಗು, ನಾನು ಯಾರೆಂದು ಸಹ ನಿನಗೆ ಗೊತ್ತಿಲ್ಲ, ನನ್ನಂತಹ ಯಾರೊ ಅಪರಿಚಿತ ಮನುಷ್ಯನೊಬ್ಬ ಮಧ್ಯಾಹ್ನದ ಊಟಕ್ಕೆ ಏನು ಮಾಡುವನೆಂಬ ಯೋಚನೆಯನ್ನು ನಿನ್ನ ಮನಸಿನಲ್ಲಿ ಆ ಶಿವ ಹುಟ್ಟುಹಾಕಿದ್ದಾನೆಂದರೆ, ಅದಕ್ಕೆ ಒಂದೇ ಅರ್ಥ ಈದಿನ ನನ್ನ ಅನ್ನದ ಜವಾಬ್ದಾರಿಯನ್ನು ನಿನಗೆ ವಹಿಸಿದ್ದಾನೆ ಆ ಶಿವ   ಎಂದು ನನಗೆ ಅನ್ನಿಸಿತು,  ಅದಕ್ಕೆ ಹಾಗೆಂದೆ ಅಷ್ಟೆ" ಎಂದು ನಿಲ್ಲಿಸಿದರು. 
 ಈಗ ನನ್ನ ಮನ ಇಕ್ಕಟ್ಟಿನಲ್ಲಿ ಸಿಲುಕಿತು, 'ಇಲ್ಲಿಯೆ ಮಠದಲ್ಲಿ ಊಟಹಾಕುತ್ತಾರೆ ' ಎಂಬ ಮಾತು ಮನದಲ್ಲಿ ಮೂಡಿತು, ಆದರೆ ಅದು ಸರಿಹೋಗದು ನಾನು ಊಟಹಾಕಿಸಲು ಹಿಂಜರಿದಂತೆ ಅನ್ನಿಸಿತು. 
 ನಾನು ಹೇಳಿದೆ
"ಇಲ್ಲಿ ನಾನು ನಿಮ್ಮಂತೆ ಪರಸ್ಥಳದವ, ನಿಮಗೆ ಊಟ ಹಾಕುವ ಅನುಕೂಲ ನನಗೆ ಇಲ್ಲ, ನೀವು ಹಣ ಮುಟ್ಟುವದಿಲ್ಲ ಎನ್ನುವ ನಿಯಮವಿದೆ ಎನ್ನುವಿರಿ, ನಿಮಗೆ ಒಪ್ಪಿಗೆಯಿದ್ದಲ್ಲಿ, ಹೋಟೆಲ್ ನಲ್ಲಿ ನಿಮಗೆ ಊಟ ಕೊಡಿಸುವೆ ಅಷ್ಟು ಮಾತ್ರ ನನ್ನಿಂದ ಸಾದ್ಯ "  
ಅವರು  "ಸರಿ ಮಗು ಈದಿನ , ತಾಯಿ ಅನ್ನಪೂರ್ಣೇಶ್ವರಿಯು ಹೋಟೆಲ್ ನಲ್ಲಿರುವೆ ಅಲ್ಲಿಯೆ ಸೇವೆಗೆ ಬಾ ಎಂದರೆ, ನಾನು ಸಹ ಏನು ಮಾಡಲು ಸಾದ್ಯವಿಲ್ಲ, ಅಲ್ಲಿಯೆ   ಬರುತ್ತೇನೆ" ಎಂದ. ನನಗೆ ಈಗ ಅವರಮಧ್ಯಾನದ ಊಟದ ಜವಾಬ್ದಾರಿ ನಿರ್ವಹಿಸುವುದು ಅನಿವಾರ್ಯವಾಯಿತು. 
"ಹಾಗಾದರೆ ಸರಿ ಹೋಗೋಣ ಬನ್ನಿ " ಎನ್ನುತ್ತ ಎದ್ದೆ. 
"ನಡಿ ಮಗು ಆಗಲಿ ಹೋಗೋಣ" ಎನ್ನುತ್ತ ಎದ್ದು ನಿಂತರು. ನನಗೆ ಅದೇನೊ ಕಸಿವಿಸಿ ಇದೆಂತ ಬಲೆಯಲ್ಲಿ ಸಿಕ್ಕಿಬಿದ್ದೆ.  ಪೊದೆಯಂತಹ ಮೀಸೆ, ನೀಳಗಡ್ಡ, ಸನ್ಯಾಸಿಯ ನಿಲುವಂಗಿ ಇಂತಹ ವ್ಯಕ್ತಿಯೊಡನೆ ನನಗೆ ಹೋಟೆಲಿಗೆ ಹೋಗಲು ಅದೇನೊ ಮುಜುಗರ ಎನಿಸುತ್ತಿತ್ತು, ಸುತ್ತಲಿದ್ದವರು ನನ್ನನ್ನೆ ನೋಡುತ್ತಿದ್ದಾರೇನು ಎನ್ನುವ ಭಾವ ತುಂಬಿ, ಸುತ್ತಲ್ಲು ನೋಡಲು ಸಹ ನಾಚಿಕೆ ಎನಿಸಿ, ತಲೆ ತಗ್ಗಿಸಿ ನಡೆಯುತ್ತಿದ್ದೆ, ಈ ವ್ಯಕ್ತಿ ಪದೆ ಪದೆ ನನ್ನನ್ನು "ಮಗು" ಎಂದು ಕರೆಯುತ್ತ ಇರುವುದು ಸಹ ನನಗೆ ಅಸಹಜ, ನನಗಾಗಲೆ ನಡುವಯಸ್ಸನು ಮೀರಿದ ವಯಸ್ಸು, ಈತ ನನ್ನನ್ನು ಮಗು ಎನ್ನಬೇಕಾದಲ್ಲಿ ಇವರ ವಯಸ್ಸು ಎಷ್ಟಿರಬಹುದು ಎಂಬ ಯೋಚನೆ ನನ್ನ ಮನಸನ್ನು ಹೊಕ್ಕಿತ್ತು ತಕ್ಷಣ ಕೇಳಿಯುಬಿಟ್ಟೆ
"ನಿಮ್ಮ ವಯಸ್ಸೇನಾಗಿರಬಹುದು" ಎಂದು
 ಆತ ಮತ್ತೆ ಗಹಗಹಿಸಿ ನಕ್ಕರು , ಸುತ್ತಲಿದ್ದವರು ನಮ್ಮಿಬ್ಬರತ್ತ ನೋಡಿದರು, ನನಗೆ ಎಂತದೊ ಮುಜುಗರ , ಸುಮ್ಮನೆ ಎಲ್ಲರ ಜೊತೆ ಬೆಟ್ಟದ ಮೇಲೆ ಹೋಗಿದ್ದರೆ ಆಗಿತ್ತು, ಇದೆಲ್ಲಿಯ ಗ್ರಹಚಾರ ಅನ್ನಿಸಿತು. 
"ನನಗೆ ಸುಮಾರು ಎಪ್ಪತ್ತು ದಾಟಿರಬಹುದು, ನಾನು ಈಗ ನಿನ್ನನ್ನು ಮಗು ಎಂದು ಕರೆಯಬಹುದಲ್ಲವೆ" ಎಂದು ಪ್ರಶ್ನಿಸಿದರು. ನನಗೆ ಬಾಯಿ ಮುಚ್ಚಿದಂತಾಯ್ತು. ಕೆಳಗೆ ನಡೆಯುತ್ತ , ಚೆನ್ನಾಗಿರಬಹುದಾದ ಹೋಟೆಲ ಹುಡುಕುತ್ತ ಹೊರಟೆ.  ನನಗೆ ಅದು ಅಪರಿಚಿತ ಸ್ಥಳ, ಸರಿಯಾದ ಹೋಟೆಲ ಎಲ್ಲಿದೆಯೊ ತಿಳಿಯದು, ಹಾಗಾಗಿ ಕೆಳಗೆ ಬಸ್ ನಿಲ್ಡಾಣದ ಹತ್ತಿರವಿದ್ದ ಆಟೋ ಒಂದರಲ್ಲಿದ್ದ ಡ್ರೈವರ್ ಒಬ್ಬನನ್ನು ಕೇಳಿದೆ 
"ಇಲ್ಲಿ ಸಮೀಪದಲ್ಲಿ ಸರಿಯಾದ ಊಟ ಸಿಗುವ ಹೋಟೆಲ್ ಸಿಗಬಹುದೆ " ಎಂದು , ಅವನು ನನ್ನನ್ನು ಒಂದು ರೀತಿ ನೋಡಿದ, ನನ್ನ ಪಕ್ಕದಲ್ಲಿ ನಿಂತಿದ್ದ ಸನ್ಯಾಸಿಯನ್ನು ನೋಡಿದ
"ಇಲ್ಲಿ ದಾಬಸ್ ಪೇಟೆಗೆ ಹೋಗುವ ಮಾರ್ಗದಲ್ಲಿ ಒಂದೆ ಸಣ್ಣ ಹೋಟೆಲ್ ಇದೆ, ಹಳ್ಳಿಯಲ್ಲಿ, ಅಂತ ಒಳ್ಳೆಯ ಹೋಟೆಲ್ ಅನ್ನುವಹಾಗಿಲ್ಲ ಆದರೆ ಪರವಾಗಿಲ್ಲ " ಎಂದ
"ನಮ್ಮಿಬ್ಬರನ್ನು ಅಲ್ಲಿಗೆ ಕರೆದೊಯ್ಯುವೆಯ, ಮತ್ತೆ ನೀನೆ ಕಾದಿದ್ದು ನಮ್ಮ ಊಟದ ನಂತರ ಪುನಃ ಹಿಂದೆ ಕರೆತರಬೇಕು, ವೈಟಿಂಗ ಚಾರ್ಜ್ ಕೊಡುವೆ" ಎಂದೆ
"ಅದೇನೊ ಆ ಡ್ರೈವರ್ ಒಪ್ಪಿದ, ನಾನು ಆ ಸನ್ಯಾಸಿಯನ್ನು ಆಟೋ ಹತ್ತಲು ತಿಳಿಸಿದೆ ಅವನು ಹತ್ತಿದ ನಂತರ ನಾನು ಹತ್ತಿ ಆದಷ್ಟು ಅವನಿಗೆ ತಗಲದಂತೆ ದೂರ ಕುಳಿತೆ.  ನಡುದಾರಿಯಲ್ಲಿ ಒಮ್ಮೆ ಆ ಸನ್ಯಾಸಿ ಮಾತನಾಡಿದರು "ಎಷ್ಟೊ ವರ್ಷಗಳ ನಂತರ ವಾಹನ ಹತ್ತಿರುವೆ"  ಎಂದ. ಆಟೋದವನು ತಾನು ಹೇಳಿದ ಹೋಟೆಲಿಗೆ ನಮ್ಮನ್ನು ಕರೆದೋಯ್ದ, 
   ಅವನು ಹೇಳಿದ್ದು ಸರಿಯಿತ್ತು ಅಂತ ದೊಡ್ಡ ಹೋಟೆಲ್ ಏನಲ್ಲ ಹಳ್ಳಿಯಲ್ಲಿ ಇರುವಂತದ್ದು. ನಾವಿಬ್ಬರು ಊಟಕ್ಕೆ ಹೋದಾಗ ಹೋಟೆಲ್ ನವನಿಗೆ ಆಶ್ಚರ್ಯವೆ. ಆದರೆ ಊಟ ಅಂತ ಕೆಟ್ಟದಾಗೇನು ಇರಲಿಲ್ಲ. ಹಸಿದ ಹೊಟ್ಟೆಗೆ ಸಾಕಷ್ಟು ರುಚಿ ಅನ್ನಿಸಿತು. ಸನ್ಯಾಸಿಯು ಯಾವ ಮಾತು ಆಡದೆ ಊಟ ಮುಗಿಸಿ ಎದ್ದರು.  ಹೊರಬಂದು, ಅದೇ ಆಟೋದಲ್ಲಿ ಹಿಂದೆ ಪಯಣಿಸಿ, ಶಿವಗಂಗೆ ಬಂದು ಪುನಃ ನಾವು ಕುಳಿತ್ತಿದ್ದ ಸ್ಥಳದತ್ತಲೆ ನಡೆದೆವು. ಸ್ವಲ್ಪ ನೆರಳಿನ ಸ್ಥಳ ಆರಿಸಿ ಅವನು ಕುಳಿತರು , ನಾನು ಸಹ ಪಕ್ಕದಲ್ಲಿಯೆ ಕುಳಿತೆ, ಈಗ ನನಗೇನು ಮುಜುಗರ ಕಡಿಮೆಯಾಗಿತ್ತು. ಯಾರಾದರು ನೋಡಿದರೆ ನನಗೇನು ಎಂಬ ಭಾವ ತುಂಬಿತ್ತು. 
   ಸ್ವಲ್ಪ ಹೊತ್ತಾಯಿತೇನೊ, ನನಗೆ ಆ ಸನ್ಯಾಸಿಯ ಬಗ್ಗೆ ಕುತೂಹಲ ಅನ್ನಿಸುತ್ತಿತ್ತು. ನನಗೆ ಹೇಗೆ ಮಾತಿನಲ್ಲಿ ಸಿಕ್ಕಿಸಿ ನನ್ನ ಕೈಲಿ ಮಧ್ಯಾನದ ಊಟವನ್ನು ಪಡೆದಿದ್ದರು. ಆದರು ಅವರ ಬಗ್ಗೆ ಅವರ ಅನುಭವದ ಬಗ್ಗೆ ಏನಾದರು ಕೇಳಬೇಕು ಅನ್ನಿಸುತ್ತಿತ್ತು, ಅಲ್ಲದೆ ಹೇಗು ಎಲ್ಲರು ಬೆಟ್ಟದ ಮೇಲೆ ಹೋಗಿದ್ದರು, ಕೆಳಗೆ ಬರಲು ಇನ್ನು ಸಾಕಷ್ಟು ಸಮಯವಿತ್ತು. ನನಗೂ ಸಮಯ ಕಳೆಯಬೇಕಿತ್ತು, ಹಾಗಾಗಿ ಸುಮ್ಮನೆ ಮಾತಿಗೆ ಎಳೆಯೋಣ ಎಂದು ಅನ್ನಿಸಿ
"ನಿಮ್ಮದು ಯಾವ ಊರು, ನಿಮ್ಮ ಹೆಸರೇನು ತಿಳಿಯಬಹುದ?" ಎಂದು ಕೇಳಿದೆ. ಅವರು ಸ್ವಲ್ಪ ಕಾಲ ಸುಮ್ಮನೆ ಗಂಭೀರವಾಗಿ ಕುಳಿತಿದ್ದರು, 
  ನನಗೆ ಏಕೊ ಸ್ವಲ್ಪ ಭಯವಾಯಿತು. ಹಿಂದೆಲ್ಲ   ತ.ರಾ.ಸು ರವರ ಕೆಲ ಕಾದಂಬರಿ ಓದಿದ್ದೆ ಅದರಲ್ಲಿ ಸನ್ಯಾಸಿಯನ್ನು ಕೆಣಕಿ ಕೆಲವರು ಕೆಟ್ಟಪರಿಣಾಮ ಅನುಭವಿಸಿದ್ದು ಎಲ್ಲ ಕತೆಗಳು ನೆನಪಿಗೆ ಬಂದವು. ಈತ ಯಾರೊ ಏನೊ , ಕೆಣಕಲು ಹೋಗಿ ನನ್ನ ಶಪಿಸಿ ಬಿಟ್ಟರೆ ಅಂತ ಒಂದು ಕ್ಷಣ ಅನ್ನಿಸಿ ನಂತರ , ಈಗ ಅದೆಲ್ಲ ಸಾದ್ಯವಿಲ್ಲ, ಈ ಕಾಲಕ್ಕೆ ಅಂತ ಸನ್ಯಾಸಿಗಳೆಲ್ಲ ಇರಲು ಎಲ್ಲಿ ಸಾದ್ಯ ಎಂದು ಸ್ವಲ್ಪ ನನಗೆ ನಾನೆ ಸಮಾಧಾನಪಡಿಸಿಕೊಂಡೆ. 
ಕೆಲ ಕ್ಷಣ ಕಳೆದ ಆತ
"ಮಗು ಸನ್ಯಾಸಿಗೆ ಯಾವ ಊರಾಯಿತು, ಅವನಿಗೆ ಹೆಸರೆಲ್ಲಿ ಅದೆಲ್ಲ ವ್ಯಾಮೋಹವಿರಬಾರದು, ನನಗೆ ಯಾವ ಊರು ಇಲ್ಲ, ಯಾವ ಹೆಸರು ಇಲ್ಲ " ಎಂದರು.  
"ಸರಿಯೆ ಸನ್ಯಾಸಿಗೆ ಊರು ಇಲ್ಲ ಅಂತ ನೆನೆಸೋಣ ಆದರೆ ನೀವು ಸನ್ಯಾಸಿಯಾಗುವ ಮೊದಲು ಯಾವುದೊ ಊರಿಗೆ ಸೇರಿರಬೇಕಲ್ಲವೆ, ಆಗ ನಿಮಗೆ ಒಂದು ಹೆಸರು ಇದ್ದೀತು, ಅಲ್ಲದೆ ಸನ್ಯಾಸಿಯಾದ ಮೇಲು ಕೆಲವರು ಹೊಸ ಹೆಸರನ್ನು ಧರಿಸುತ್ತಾರಲ್ಲವೆ?" ಎಂದೆ.
ಮತ್ತೆ ಅವರ ನಗು
 "ಮಗು ಅದೆ ನೋಡು ಆಶ್ಚರ್ಯ, ಸೃಷ್ಟಿಯಲ್ಲಿ ಎಷ್ಟೊಂದು ಜೀವಿಗಳುಂಟು, ಯಾವುದು ಹೆಸರಿಟ್ಟುಕೊಳ್ಳಲು ಹೋಗಲ್ಲ, ಪ್ರಕೃತಿಯಲ್ಲಿ ಸಾವಿರಾರು ವಿಧದ ಮರ ಗಿಡ ಪ್ರಭೇದಗಳುಂಟು ಯಾವುದು ತನಗೆ ಹೆಸರಿಟ್ಟುಕೊಳ್ಳಲ್ಲ. ಆದರೆ ಈ ಮನುಷ್ಯಜಾತಿ ಮಾತ್ರ ನೋಡು , ಹುಟ್ಟುವಾಗ ಯಾವ ಹೆಸರು ಇರಲ್ಲ, ಆದರೆ ಇವನು ತನಗೆ ಮಾತ್ರ ಪ್ರತ್ಯೇಕವಾಗಿ ಒಂದು ಹೆಸರಿಟ್ಟು ಗುರ್ತಿಸಿಕೊಳ್ಳುತ್ತಾನೆ, ಅಷ್ಟೆ ಅಲ್ಲ ಸುತ್ತ ಮುತ್ತಲ ಪಶು ಪ್ರಾಣಿ, ಗಿಡ ಮರಗಳನ್ನೆಲ್ಲ ಒಂದು ಜಾತಿ ಹೆಸರಿನಿಂದ ಗುರ್ತಿಸಿ ಸಂತೋಷಪಡುತ್ತಾನೆ. ಈಗ ಪ್ರಾಣಿಗಳನ್ನು ನೋಡು , ಯಾವುದೆ ಹೆಸರಿಲ್ಲದೆ ಒಂದನೊಂದು ಗುರ್ತಿಸುತ್ತವೆ, ಮರಗಿಡಗಳಲ್ಲು ಆ ಗುರ್ತಿಸುವಿಕೆ ನಡೆಯುತ್ತದೆ ಯಾವುದೆ ಹೆಸರಿಲ್ಲದೆ, ಈ ಮನುಷ್ಯನಾದರೆ ಮಾತ್ರ ವಿಚಿತ್ರ, ತನಗೊಂದು ಹೆಸರು,  ತನ್ನ ಊರಿಗೊಂದು ಹೆಸರು"  ಅಂತ  ಮತ್ತೆ ಜೋರಾದ ಅವರ ನಗು ನನಗೆ ಕಸಿವಿಸಿ ಮೂಡಿಸಿತು. 
ನಾನು ನಗುತ್ತ " ಆ ವೇದಾಂತವೆಲ್ಲ ನಿಜವೆ, ಆದರೆ ನೀವು ಮಾತ್ರ ನಿಮ್ಮ ಹೆಸರಾಗಲಿ, ನಿಮ್ಮ ಊರಾಗಲಿ ತಿಳಿಸಲಿಲ್ಲ, ಇಷ್ಟವಿಲ್ಲ ಎನ್ನುವದಾದರೆ ನಾನು ಬಲವಂತ ಮಾಡುವದಿಲ್ಲ" ಎಂದೆ.  
ಅವರು ನಗುತ್ತ
"ಆಗಲಿ ಮಗು, ನೀನು ನನ್ನನ್ನು ಅನ್ನದ ಋಣದಲ್ಲಿ ಬೇರೆ ಸಿಕ್ಕಿಸಿರುವೆ, ನಾನು ಈ ರೀತಿಯ ಜೀವನ ಪ್ರಾರಂಬಿಸಿ ಎಷ್ಟೊ ವರ್ಷಗಳಾಯಿತು, ಎಷ್ಟೊ ಜನ ನನಗೆ ಅನ್ನ ಹಾಕಿದ್ದಾರೆ. ಮಾತನಾಡಿದ್ದಾರೆ, ಆದರೆ ಇಲ್ಲಿಯವರೆಗು ಯಾರು ನಿನ್ನ ಹೆಸರೇನು ಯಾವ ಊರಾಯಿತು ಎಂದು ಕೇಳಿರಲಿಲ್ಲ.  ನೀನು ಏತಕ್ಕೊ ಕೇಳುತ್ತಿದ್ದೀಯ ಇರಲಿ.    ಹಲವು ವರ್ಷಗಳ ಹಿಂದೆ ನನ್ನ ಹೆಸರು ವೆಂಕಟೇಶನೆಂದು ಇದ್ದಿತು. ಮತ್ತು ನನ್ನ ಸ್ವಂತ ಊರು ಬೆಂಗಳೂರೆ ಆಗಿತ್ತು." ಎಂದರು  ಆತ.  ನನಗೆ ಆಶ್ಚರ್ಯವಾಯಿತು  ನಾನೆಂದೆ
"ಏನು ನೀವು ಬೆಂಗಳೂರಿನವರೆ, ನಾನೆಲ್ಲೊ ನಿಮ್ಮನ್ನು ನೋಡುತ್ತ, ಉತ್ತರ ಭಾರತೀಯರಿರಬಹುದೆ ಎಂದು ಎಣಿಸಿದ್ದೆ. ಬೆಂಗಳೂರು ಎಂದರೆ ಎಲ್ಲಿದ್ದೀರಿ, ಯಾವ ಭಾಗ, ನಿಮ್ಮ ಕಂಡಿರುವವರು, ಅಥವ ನೆಂಟರು ಯಾರಾದರು ಈಗಲು ಇರಬಹುದು ಅಂತಾಯಿತು, ನೀವು ಅದೇಕೆ ಸನ್ಯಾಸಿಯಾದಿರಿ, ಅಂತಹ ಸನ್ಯಾಸಿ ಆಗುವ ಬಯಕೆ ನಿಮಗಾದರು ಹೇಗೆ ಬಂದಿತು" ಎಂದೆ
ಅದಕ್ಕವರು " ಇದೊಳ್ಳೆ ಸರಿಯಾಯಿತು, ನೀನು ನನ್ನ ಜೀವನದ ಪಂಚಾಂಗವನ್ನೆ ಬಿಚ್ಚುತ್ತಿರುವೆಯಲ್ಲ ಮಗು, ಅದೆಲ್ಲ ಎಂದೊ ನಡೆದುಹೋದ ಘಟನೆಗಳು. ಈಗ ಯಾರ ನೆನಪಲ್ಲಾಗಲಿ ಇಲ್ಲ. ಅದರಿಂದೆಲ್ಲ ಎಂತದು ಉಪಯೋಗವು ಇಲ್ಲ. ಎಲ್ಲ ಮುಗಿದುಹೋಯಿತು" ಎಂದರು. ನಾನು
"ಸ್ವಾಮಿ ಅದೇಕೊ ನನಗೆ ಕುತೂಹಲ ಎನಿಸುತ್ತಿದೆ, ಒಬ್ಬ ಸಾದಾರಣ ಮನುಷ್ಯನಿಗೆ ಸನ್ಯಾಸಿಯಾಗುವ ಬಯಕೆ ಏಕೆ ಬರುತ್ತದೆ, ಅವನ ಅನುಭವಗಳಾದರು ಹೇಗಿರುತ್ತವೆ, ಗೊತ್ತಿಲ್ಲ. ನೀವು ತಪ್ಪು ತಿಳಿಯುವದಿಲ್ಲ, ಕೋಪವಿಲ್ಲ ಅನ್ನುವದಾದರೆ ನನಗೆ ನಿಮ್ಮ ಪರಿಚಯ , ಮತ್ತೆ ಸನ್ಯಾಸಿಯಾಗುವ ಪ್ರಸಂಗವಾದರು ಏಕೆ ಬಂತು ಎಂದು ತಿಳಿಸುತ್ತೀರ" ಎಂದೆ. 
    ಆತ "ನೋಡು ಮಗು , ಜೀವನದಲ್ಲಿ ನಡೆಯುವ ಕೆಲಘಟನೆಗಳು ನಮಗೆ ಘಾತಕ ಅನಿಸಿದರು ಮತ್ತೊಬ್ಬರಿಗೆ ಅದು ಸಾಮಾನ್ಯ ಘಟನೆ ಅನಿಸುತ್ತದೆ. ನಮ್ಮ ಸೂಕ್ಷ್ಮ ಮನಸಿಗೆ ಆದ ನೋವು ಬೇರೊಬ್ಬರಿಗೆ  ಸಹಜ ಮಾತು ಅನಿಸುತ್ತದೆ. ಅಷ್ಟೆ ಏಕೆ ಇಂದು ನಮ್ಮ ಮನಸನ್ನು ಗಾಯಗೊಳಿಸಿ ಕಾಡಿದ ಮಾತು, ನೋವು , ಹಾಗು ನಮ್ಮದೆ ವರ್ತನೆಗಳು  ಕಾಲಕಳೆದು ಎಷ್ಟೊ ವರ್ಷಗಳಾದ ನಂತರ ನಮಗೆ ಬಾಲಿಶವೆನಿಸಬಹುದು. ಹಾಗಿರುವಲ್ಲಿ ನನ್ನನ್ನು ಸಂಸಾರ ಜೀವನದಿಂದ ಸನ್ಯಾಸಕ್ಕೆ ನೂಕಿದ ಸಂದರ್ಭ ಹಾಗು ಕೆಲಮಾತುಗಳು ನಿನಗೆ ಲೋಕರೂಡಿ ಎನಿಸಬಹುದು ಅಲ್ಲವೆ. ಆದರು ನೀನು ಕೇಳುವೆ ಎಂದು ಮಾತ್ರ ಅಲ್ಲ, ಏಕೊ ನನ್ನ ಮನಸ್ಸಿಗು ನನ್ನ ಗತ ಜೀವನದ ಕತೆಯನ್ನು ನಿನಗೆ ಹೇಳಬೇಕಿನಿಸಿದೆ. ಈ ಮೂಲಕ ನಾನು ಸಹ ನನ್ನ ಜೀವನದ ಸರಿತಪ್ಪುಗಳನ್ನು ತೂಗಿ ನಿರ್ದರಿಸಬಹುದೇನು ಅನ್ನಿಸುತ್ತಿದೆ. ಸ್ವಲ್ಪ ವಿವರವಾಗಿಯೆ ಹೇಳುವೆ ಸರಿತಾನೆ, ನಿನಗೂ ಸಹ ನಿನ್ನವರೆಲ್ಲ ಬೆಟ್ಟದಿಂದ ಕೆಳಗೆ ಬರುವ ತನಕ ಹೇಗು ಸಮಯ ಕಳೆಯಬೇಕೆಂಬ ಅನಿವಾರ್ಯವಿದೆ ಅಲ್ಲವೆ ಹಾಗಾಗಿ ನನ್ನ ಕತೆ ಕೇಳಲು ಸಿದ್ದನಾಗಿರುವೆ" ಎಂದು ಜೋರಾಗಿ ನಕ್ಕರು, ನನಗೂ ಅವರ ಮಾತಿನಿಂದ ನಗು ಬಂದಿತು. 
ಸ್ವಲ್ಪ ಕಾಲ ಸುಮ್ಮನೆ ಸೂರ್ಯನ ಬಿಸಿಲು ತುಂಬಿರುವ ಆಕಾಶವನ್ನೆ ದಿಟ್ಟಿಸುತ್ತ , ಬಹುಷಃ ಹಿಂದಿನದನ್ನು ನೆನಪಿಸಿಕೊಳ್ಳುತ್ತ ಕುಳಿತರು.
"ಮಗು ನೀನು ಬೆಂಗಳೂರಿನಲ್ಲಿ ಟಿ.ಟಿ.ಪಿ.ಇಂಡಸ್ಟ್ರೀಸ್ ಹಾಗು ಅದರ ಸ್ಥಾಪಕ ವೆಂಕಟೇಶ ಎಂಬುವರ ಬಗ್ಗೆ ಕೇಳಿದ್ದೀಯ?" ಪ್ರಶ್ನಿಸಿದರು. ನಾನು ನನ್ನ ನೆನಪನ್ನು ಕೆದಕಿದೆ. ನಿಜ ಇದು ತೀರ ಕೇಳಿದಂತೆ ಇದೆಯಲ್ಲ. ಹೌದು ಟಿ.ಟಿ.ಪಿ. ಹೆಸರನ್ನು ಕೇಳಿದ್ದೇನೆ, ತಕ್ಷಣ ನೆನಪು ಬಂದಿತು, ನನಗೆ ನನ್ನ ನೆನಪಿನ ಶಕ್ತಿ ಬಗ್ಗೆ ಗರ್ವ ಎನಿಸಿತು. ಆದರೆ ಈಗ ಆ ಗ್ರೂಪಿನ ಹೆಸರು ಬದಲಾಗಿದೆ ಏನದು ಹೌದು ಸುಧಾ ಗ್ರೂಪ್ಸ್  ಎಂದು ಅನ್ನುವುದು ನೆನಪಿಗೆ ಬಂದಿತು. ಅದರ ಸ್ಥಾಪಕ ವೆಂಕಟೇಶ್ ಎಂಬುವರು ಈಗಿಲ್ಲ , ಈಗ ಅವರ ಮಗಳು ಹಾಗು ಅಳಿಯ ಅದರ ಒಡೆಯರು ಹೌದು ಸುಧಾ ಅವರ ಮಗಳೆ ಎಲ್ಲ ಸುದ್ದಿಪತ್ರಿಕೆಯಲ್ಲಿ ಆಗೊಮ್ಮೆ ಇಗೊಮ್ಮೆ ಓದುತ್ತಿದ್ದ ಸುದ್ದಿ, ಕರ್ನಾಟಕದಲ್ಲಿ ಅತಿ ದೊಡ್ಡ ವ್ಯಾಪಾರ ವ್ಯವಹಾರಗಳನ್ನು ನಡೆಸುವ ಸಂಸ್ಥೆ ಅದು , ಈಚೆಗೆ ಅದರ ಸುಧಾ ಗ್ರೂಪ್ ಆಪ್ ಐ.ಟಿ. ಸಲ್ಯೂಶನ್ ಹೊರದೇಶದಲ್ಲು ಸಾಕಷ್ಟು ಪ್ರಸಿದ್ದಿ ಹೊಂದಿತ್ತು. ಸಾವಿರಾರು ಕೋಟಿಗಳ ವ್ಯವಹಾರ ನಡೆಸುವ ಸಂಸ್ಥೆ,  
   ಹಾಗೆಯೆ ಅದರ ಪೂರ್ವ ಸ್ಥಾಪಕ ವೆಂಕಟೇಶ್ ಹೆಸರು ನೆನಪಿಗೆ ಬಂದಿತು, ಹೌದು ಅದು ಕಳೆದ ತೊಂಬತ್ತರ ದಶಕದ ಪ್ರಾರಂಬದಲ್ಲಿ ಬಹುಷಃ ೧೯೯೦-೯೧ ರಲ್ಲಿ ಇರಬಹುದು, ನನಗಿನ್ನು ನೆನಪಿತ್ತು, ಇದೆ ಟಿ.ಟಿ.ಪಿ ಸಂಸ್ಥೆಯ ಮಾಲಿಕ ವೆಂಕಟೇಶ್ ಅತ್ಯಂತ ನಿಗೂಡರೀತಿಯಲ್ಲಿ ಕಣ್ಮರೆಯಾದರು, ಅವರ ಮನೆಯ ಹತ್ತಿರ ಅವರ ಕಾರು ನಿಂತಿತ್ತು ಆದರೆ ಅವರು ಎಲ್ಲಿ ಹೋದರು ಎಂದು ಯಾರಿಗು ತಿಳಿಯಲಿಲ್ಲ. ಪೋಲಿಸರು ಅವರ ವೃತ್ತಿಕ್ಷೇತ್ರದ ಜನರೆ ಒಂದಾಗಿ ಅಪಹರಿಸಿ ಕೊಲೆಮಾಡಿಸಿರಬಹುದು ಎಂಬ ಅರ್ಥದ ಹೇಳಿಕೆ ನೀಡಿದರು, ಪತ್ರಿಕೆಗಳಲ್ಲಿ ಬಹಳಷ್ಟು ಕಾಲ ಆ ವಿಷಯದ ಬಗ್ಗೆ ರಂಜನೀಯ ವರದಿಗಳು ಬಂದವು. ಕ್ರಮೇಣ ಆ ವಿಷಯಗಳೆಲ್ಲ ಜನರ ಗಮನದಿಂದ ಮರೆಯಾಯಿತು. ಆಗ ನೂರು ಕೊಟಿಗಳ ವ್ಯವಹಾರದ ಸಂಸ್ಥೆಯಾಗಿದ್ದ ಅ ವ್ಯವಹಾರ ಸಂಸ್ಥೆ ಈಗ ವರ್ಷಕ್ಕೆ ಸಾವಿರ ಕೋಟಿಗಳ ಟರ್ನೊವರ್ ನಡೆಸುವ ಮಹಾಸಂಸ್ಥೆ. 
 ಇದೆಲ್ಲ ನೆನಪಿಗೆ ಬರುತ್ತಿರುವಂತೆ ಅವರಲ್ಲಿ ನುಡಿದೆ.
 "ನೆನಪಿಗೆ ಬಂದಿತು, ತುಂಬಾ ಹಳೆಯ ಸಂಸ್ಥೆಯದು, ಈಗ ಹೆಸರು ಬದಲಾಗಿದೆ, ಆದರೆ ನೀವು ಹೇಳುವ ವೆಂಕಟೇಶ್ ಎಂಬುವ ಅದರ ಸ್ಥಾಪಕ ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಅಪಹರಣವಾಗಿ ಕೊಲೆಯಾಗಿ ಹೋದರು ಅನ್ನಿಸುತ್ತೆ, ಅವರಿಗು ನಿಮಗು ಏನು ಸಂಭಂದ? " ಎಂದು ಪ್ರಶ್ನಿಸಿದೆ. 
ಆತ ನಗುತ್ತಿದ್ದರು. 
"ಅಪಹರಣವು ಅಲ್ಲ ಕೊಲೆಯು ಅಲ್ಲ ಮಗು , ನಾನೆ ಆ ವೆಂಕಟೇಶ್  ಎಂಬ ವ್ಯಕ್ತಿ" ಎಂದರು. 
ಈಗ ನಗುವ ಸರದಿ ನನ್ನದು. "ಸ್ವಾಮಿ ನಿಮ್ಮ ಕತೆ ಹೇಳಿ ಎಂದರೆ, ನಾನು ವೆಂಕಟೇಶ್  ಎಂಬ ವ್ಯಕ್ತಿ ಅನ್ನುತ್ತೀರಿ. ಇಂತ ತಮಾಷಿಯೆಲ್ಲ ನಂಬಲು ನಾನೇನು ಕೂಸೆ. ವರ್ಷಕ್ಕೆ ಸಾವಿರಾರು ಕೋಟಿ ರೂಗಳ ವ್ಯವಹಾರ ನಡೆಸುವ ಟಿ.ಟಿ.ಪಿ. ಎಂಬ ಸಂಸ್ಥೆಯ ಸ್ಥಾಪಕ ವೆಂಕಟೇಶ್ ಎಲ್ಲಿ,  ಸನ್ಯಾಸಿಯಾಗಿ ಊರೂರು ತಿರುಗುತ್ತ, ಬಿಸಿಲು ಮಳೆಯಲ್ಲಿ ಇರುತ್ತ, ದಿನಕ್ಕೆ ಯಾರೊ ಕೊಡಿಸುವ ಒಂದು ಹೊತ್ತಿನ ಊಟ ಮಾಡಿ ಅಧ್ಯಾತ್ಮದ ಲೋಕದಲ್ಲಿರುವ ನೀವೆಲ್ಲಿ. ಹೇಳಿದರು ನಂಬುವಂತೆ ಹೇಳಬೇಕಲ್ಲವೆ?" ಎಂದೆ. 
ಅವರು "ಹೌದು ಮಗು ಎಂದಿಗು ಹಾಗೆ, ನಿಜವನ್ನು ನಂಬುವಂತೆ ಮಾಡುವುದು ತುಂಬಾ ಕಷ್ಟ.  ಆದರೆ ಸುಳ್ಳನ್ನು ಹೇಳಿ ಸುಲುಭವಾಗಿ ಯಾರನ್ನು ನಂಬಿಸಬಹುದು. ಅಷ್ಟಕ್ಕು ನಾನೊಂದು ಸುಳ್ಳು ಹೇಳಿದೆ ಅಂತಲೆ ಭಾವಿಸು ಅದರಿಂದ ನಿನಗೇನು ನಷ್ಟವಾಗುತ್ತಿಲ್ಲ ಅಲ್ಲವೆ.  ನನಗೆ ಅದರಿಂದ ಯಾವ ಲಾಭವು ಇಲ್ಲ. ನೀನು ಕೇಳಿದೆ ಎಂದು ನಾನು ನನ್ನ ಕತೆ ಹೇಳುತ್ತೇನೆ ನಂಬುವುದು ಬಿಡುವುದು ನಿನ್ನ ಸ್ವಂತಕ್ಕೆ ಬಿಟ್ಟ ವಿಚಾರ" ಎಂದರು. 
 ನನಗೆ ಈಗ ನಾನು ತಪ್ಪು ಮಾತನಾಡಿದೆ ಅನ್ನಿಸಿತು, ಎಂದಿಗು ಹಣವನ್ನೆ ಕೈಯಲ್ಲಿ ಮುಟ್ಟದ ಈ ಸನ್ಯಾಸಿ ಏನಕ್ಕಾಗಿ ನನ್ನ ಹತ್ತಿರ ಸುಳ್ಳು ಕತೆಯನ್ನು ಹೇಳಬೇಕು, ಅನ್ನಿಸಿ ಅಂದೆ
"ಕ್ಷಮಿಸಿ ಸ್ವಾಮಿ ನಾನು ತಪ್ಪು ಮಾತನಾಡಿದೆ ಅನ್ನಿಸುತ್ತೆ. ನೀವು ಹೇಳುವುದು ನಿಜ,  ಕೆಲವೊಮ್ಮೆ ನಿಜವನ್ನು ನಂಬುವುದು ಕಷ್ಟ ಅನ್ನಿಸಿಬಿಡುತ್ತೆ.  ನಿಮ್ಮ  ಅನುಭವ ಹೇಳಿ ನಂಬುತ್ತೇನೆ " ಎಂದೆ. 
"ನೀನು ನಂಬುವೆಯೊ ಇಲ್ಲವೊ ಎನ್ನುವುದು ನನಗೆ ಸಂಬಂದಿಸಿದ ವಿಚಾರವಲ್ಲ ಮಗು, ಆದರೆ ಏಕೊ ನನ್ನ ಕತೆಯನ್ನು ನಿನ್ನ ಬಳಿ ಹೇಳಬೇಕೆಂಬ ಲಹರಿ ನನ್ನ ಮನಸಿನಲ್ಲಿ ಮೂಡಿದೆ, ಅದಕ್ಕಾಗಿ ನನ್ನ ಜೀವನದ ಅನುಭವಗಳನ್ನು ಮನಸಿನ ಮಂಥನಗಳನ್ನು ಸ್ವಲ್ಪ ವಿವರವಾಗಿಯೆ ಹೇಳಿಬಿಡುವೆ. ನೀನು ವಿರಾಮವಾಗಿ ಕುಳಿತು ಕೇಳು " ಎನ್ನುತ್ತ ತಮ್ಮ ಜೀವನದ ಕತೆ ಪ್ರಾರಂಬಿಸಿದರು. ನಾನು ತಂಪಾದ ನೆರಳಿನಲ್ಲಿ ಅವರ ಕತೆಗೆ ಕಿವಿಕೊಟ್ಟು ಕುಳಿತೆ.
 ಮುಕ್ತಾಯ ಮುಂದಿನ ಬಾಗದಲ್ಲಿ .
==============================
ಕಥೆಯ ಶೀರ್ಷಿಕೆಗೆ ಸ್ಪೂರ್ತಿ : ರಘು ಎಸ್. ಪಿ.  
 ==============================
 ಕಥೆ : ಇಲ್ಲವಾಗುತ್ತಲೆ ಎಲ್ಲವಾಗುವ   

Friday, April 13, 2012

ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ


ಯಾರೋ ಬಿಟ್ಟ ಬಾಣ ತಾಕಿ ರಕ್ತ ಚಿಮ್ಮಿದಾಗ, ಅಷ್ಟು ನೋವಾಗಿರಲಿಲ್ಲ,
ಸ್ನೇಹಿತರೇ,
ಆದರೆ,
ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ ಎಂದರಿತಾಗ ಈ ಹೃದಯ ಛಿದ್ರವಾಯಿತು!
--ಆಸುಹೆಗ್ಡೆ (ಫೇಸ್ ಬುಕ್'ನಲ್ಲಿ)
======================================

ಸರಿಯಾಗಿ ಹತ್ತನೇ ದಿನ ಕೌರವರ ಸೇನಾಧಿಪತಿ ನೆಲಕ್ಕುರುಳಿದ್ದರು. ಕುರು ಪಾಂಡವರ ಮೆಚ್ಚಿನ ತಾತ, ವಂಶಕ್ಕೆ ಹಿರಿಯ, ಭೀಷ್ಮಾಚಾರ್ಯ, ಆರ್ಜುನನು ಹೂಡಿದ ಬಾಣಕ್ಕೆ ಎದೆಯೊಡ್ಡಿ ರಕ್ತಸುರಿಸುತ್ತ ರಥದಿಂದ ಉರುಳಿ ಕೆಳಗೆ ಬಿದ್ದಾಗ, ಅಂದಿನ ಯುದ್ಧಕ್ಕೆ ವಿರಾಮದ ಘೋಷಣೆಯಾಗಿತ್ತು. ಸಂಜೆಯ ಇಳಿಬಿಸಿಲಿನಲ್ಲಿ ನೊರಜುಕಲ್ಲಿನ ನೆಲದ ಮೇಲೆ ಮಲಗಿದ್ದ ಭೀಷ್ಮರು ಕಣ್ಣು ಮುಚ್ಚಿದ್ದರು. ಸುತ್ತಲು ಒಡಾಡುತ್ತಿದ್ದವರ ಧ್ವನಿ ಅವರಿಗೆ ಸ್ವಷ್ಟವಾಗಿ ಕೇಳಿಸುತ್ತಿತ್ತು.
ಸನಿಹದಲ್ಲಿಯೇ ದುರ್ಯೋಧನನ ಧ್ವನಿ ಕೇಳಿಸಿತು
"ಬೇಗ ತನ್ನಿ , ಅವರನ್ನು ನಿಧಾನವಾಗಿ ಎತ್ತಿ ಮಲಗಿಸಿ, ಗುಡಾರಕ್ಕೆ ಕರೆದೊಯ್ಯೋಣ, ವೈದ್ಯರು ಉಪಚಾರ ನಡೆಸಲಿ, ಸರಿಹೋದಾರು".
ಈಗ ಕಣ್ಣು ಬಿಟ್ಟರು ಭೀಷ್ಮರು. ಪಕ್ಕಕ್ಕೆ ತಿರುಗಿನೋಡಿದರು. ಗುಡಾರದಲಿ ಉಪಯೋಗಿಸುವ ಹಗ್ಗದ ಮಂಚಕ್ಕೆ ಬಿದರುಬೊಂಬುಗಳಿಂದ ಕಟ್ಟಿ ತನ್ನನ್ನ ಅದರಲ್ಲಿ ಮಲಗಿಸಿ ಸೈನಿಕರ ಸಹಾಯದಿಂದ ತನ್ನನ್ನು ಗುಡಾರಕ್ಕೆ ಕರೆದೊಯ್ಯಲು ಸಿದ್ದತೆಯಾಗಿದೆ. ಪಕ್ಕದಲ್ಲಿಯೆ ದುರ್ಯೋಧನನಿದ್ದಾನೆ ತಾನು ಕಣ್ಣುಬಿಟ್ಟಿದ್ದು ನೋಡಿ, ನೆಲಕ್ಕೆ ಮೊಣಕಾಲೂರಿ ಪಕ್ಕದಲ್ಲಿ ಕುಳಿತ,
"ಈಗ ಹೇಗಿದೆ ತಾತ ಚಿಂತೆಮಾಡಬೇಡ‌, ಎಲ್ಲ ಸರಿಯಾಗುತ್ತದೆ".
ಭೀಷ್ಮರಿಗೆ ಆ ನೋವಿನಲ್ಲು ನಗು ಬಂದಿತು.
"ಮಗು, ದುರ್ಯೋಧನ, ನನ್ನ ಬಗ್ಗೆ ಚಿಂತೆ ಬೇಡ. ನನಗೆ ಇನ್ನು ಯಾವ ಸಮಸ್ಯೆಯೂ ಇಲ್ಲ. ನನ್ನನ್ನು ಇಲ್ಲಿಂದ ಕದಲಿಸಬೇಡ. ನನಗೇಕೊ ನನ್ನ ಕಡೆಯ ಕಾಲ ಬಂದಿರುವಂತೆ ಕಾಣುತ್ತಿದೆ. ಈಗ ನಾನು ಗುಡಾರದಲ್ಲಿ ಅಥವಾ ಅರಮನೆಯಲ್ಲಿ ಮಲಗಿ ಸಾಯಲು ಇಷ್ಟ ಪಡುವುದಿಲ್ಲ. ರಣರಂಗದಲ್ಲಿ ಸೈನಿಕನಂತೆ ಸಾಯಲು ಇಷ್ಟಪಡುವೆ. ನನ್ನ ಮಾತು ಕೇಳು"
ದುರ್ಯೋಧನನಿಗೆ ಗಂಟಲು ಕಟ್ಟುತ್ತಿತ್ತು, ತಾತನ ಸ್ಥಿತಿಯ ಆಘಾತದಿಂದಲೋ, ಹತ್ತು ದಿನಗಳಿಂದ ರಣದಲ್ಲಿ ಬಳಲಿರುವದರಿಂದಲೋ, ಕಣ್ಣು ಕತ್ತಲೆ ಬರುತ್ತಿತ್ತು. ಆತನಿಗೆ ಭೀಷ್ಮರ ನಿರ್ಧಾರ ಅನಿರೀಕ್ಷಿತ. ಅಂದುಕೊಂಡ, ಇವರು ಯಾವಾಗಲೂ ಹೀಗೆಯೇ. ಮತ್ತೆ ನುಡಿದ
"ತಾತ, ಇದೇಕೆ, ಮಹಾರಾಜನ ಅಜ್ಜನಾದ ನೀನು ರಣರಂಗದಲ್ಲಿ ನೆಲದಲ್ಲಿ ಮಲಗಿರಬೇಕೇಕೆ, ಇದೇನು ಅವಸ್ಥೆ, ನನಗೆ ದುಃಖವಾಗದೆ?".
"ಮಗು, ಇದರಲ್ಲಿ ದುಃಖವೇಕೆ? ಕ್ಷತ್ರೀಯನಿಗೆ ಎಂದಾದರೂ ಈ ಸ್ಥಿತಿ ಬರುವುದು ಸ್ವಾಭಾವಿಕವಲ್ಲವೇ?" ಎಂದ ಭೀಷ್ಮರ ದ್ವನಿ ಕ್ಷೀಣಿಸಿತ್ತು.
"ಆಗಲಿ ಬಿಡು , ನೀನು ಬರುವುದು ಬೇಡ, ಇಲ್ಲಿಯೆ ನಿನ್ನ ಸುತ್ತ ಗುಡಾರ ಹಾಕಿಸಿ ನಿನಗೆ ಸರಿಮಾಡುತ್ತೇನೆ" ಎಂದ ದುರ್ಯೋಧನ.
"ಮಗು, ಏನೂ ಬೇಡ , ನನಗೆ ತೊಂದರೆ ಕೊಡಬೇಡ. ನಾನು ಮಾತನಾಡಲಾರೆ. ಸ್ವಲ್ಪ ಸುಧಾರಿಸಲಿ, ನನ್ನನ್ನು ಹೀಗಿರುವ ಸ್ಥಿತಿಯಲ್ಲಿಯೆ ಬಿಡು. ಇದು ನನ್ನ ಇಚ್ಛೆ".
ಭೀಷ್ಮರು ತಮ್ಮ ಅಕ್ಕ ಪಕ್ಕ ನೋಡಿದರು. ಒಂದು ಪಕ್ಕದಲ್ಲಿ ಕೃಷ್ಣನ ಜೊತೆಗೆ ನಿಂತ ಪಾಂಡವರ ಕಾತುರದ ಮುಖಗಳು, ಮತ್ತೊಂದು ಕಡೆ ತಮ್ಮ ಈ ಸ್ಥಿತಿಯಿಂದ ಕಂಗೆಟ್ಟ ದುರ್ಯೋಧನಾದಿಗಳ ಮುಖಗಳು. ಅವರ ನಡುವೆ ಕರ್ಣನು ತಲೆತಗ್ಗಿಸಿ ನಿಂತಿದ್ದ.
ಅವರಿಗೆ ಯುದ್ಧದ ಮೊದಲಿನ ದಿನ ನೆನಪಿಗೆ ಬಂದಿತು. ದುರ್ಯೋಧನನು ತಮ್ಮನ್ನು ಸೈನ್ಯಕ್ಕೆ ಮುಖ್ಯಸ್ಥನನ್ನಾಗಿ ಇರಲು ಕೇಳಿಕೊಂಡ. ತಾನು ನಿಧಾನಕ್ಕೆ ಯೋಚಿಸಿ ಒಪ್ಪಲು ಕಾರಣವಿತ್ತು , ಯಾವುದಾದರೂ ಪರಿಸ್ಥಿತಿಯಲ್ಲಿ ಸಾದ್ಯವಾದರೆ ಯುದ್ಧವನ್ನು ತಡೆಯಲು ಸಾಧ್ಯವಾಗಬಹುದು ಎಂಬ ಆಲೋಚನೆ.
ಆದರೆ ಸೇನಾಧಿಕಾರಿಯಾಗುವುದಕ್ಕೆ ತಾನು ನೀಡಿದ ಒಪ್ಪಿಗೆಗೆ ಇದೇ ಕರ್ಣನ ಅಭಿಪ್ರಾಯವಾದರೂ ಏನಿತ್ತು? ತಾನು ಪಾಂಡವ ಪಕ್ಷಪಾತಿಯಾದ್ದರಿಂದ ಈ ಯುದ್ಧ ಗೆಲ್ಲುವ ಸಾಧ್ಯತೆ ಇಲ್ಲವೆಂದು ಹೇಳಿದ್ದ. ಅಷ್ಟು ಸಾಲದೆಂಬಂತೆ. ತಾನು ಸೇನಾಧಿಕಾರಿಯಾಗಿರುವವರೆಗೂ ಆಯುಧಹಿಡಿದು ಯುದ್ಧ ಮಾಡುವದಿಲ್ಲವೆಂದು ಪ್ರತಿಜ್ಞೆಯನ್ನೂ ಮಾಡಿದ್ದ. ಎಂತಹ ಮೂರ್ಖ? ತಾನು ಪ್ರೀತಿಸುವ ತನ್ನ ಗೆಳೆಯ, ಒಡೆಯನಿಗೆ ಇದರಿಂದ ತೊಂದರೆ ಎಂದು ಅರಿಯಲಾರದ ಮೂಢತನ. ಈಗ ಅವರ ಮನಸ್ಸು ನಿರಾಳವಾಗಿತ್ತು. ತಾನು ಯಾರ ಪಕ್ಷಪಾತಿಯೂ ಅಲ್ಲವೆಂದೂ, ಯುದ್ಧಕ್ಕೆ ನಿಂತರೆ ಎದುರಾಳಿ ಯಾರೇ ಇರಲಿ ಅವರನ್ನು ಭಂಗಿಸಿ ಅಲುಗಾಡಿಸುವನೆಂದೂ, ಎಲ್ಲರಿಗೂ ತೋರಿಸಿಯಾಗಿತ್ತು. ಅವರ ಮುಖದಲ್ಲಿ ಹೆಮ್ಮೆ ತುಂಬಿತ್ತು. ಕೃಷ್ಣ ಸಹ ಯುದ್ಧದಲ್ಲಿ ಆಯುಧ ಹಿಡಿಯುವದಿಲ್ಲ ಎಂಬ ತನ್ನ ಪ್ರತಿಜ್ಞೆ ಮರೆತು ಕೋಪದಿಂದ ತಮ್ಮ ಮೇಲೆ ತನ್ನ ಚಕ್ರಾಯುಧ ಎತ್ತಿದ್ದ, ಎನ್ನುವುದನ್ನು ಎಣಿಸಿ ಭೀಷ್ಮರಿಗೆ ನಗು ಬಂದಿತು.
ಸೂರ್ಯಮುಳುಗುವ ಸಮಯವಾಗುತ್ತಿತ್ತು . ದೂರ್ಯೋದನ ದಿಕ್ಕುಗೆಟ್ಟವನಂತೆ ನಿಂತ , ದಾರಿ ಕಾಣದೆ ಅವನೇ ಕೇಳಿದ,
"ತಾತ ಹಾಗಾದರೆ ನಾನೀಗ ಏನು ಮಾಡಲಿ? ನೀನೂ ಇಲ್ಲಿ ಹೇಗಿರುತ್ತಿ?".
"ಮಗು ನನ್ನ ಯೋಚನೆ ಬಿಡು ನೀನು ಬಿಡಾರಕ್ಕೆ ಹೋಗಿ ವಿಶ್ರಾಂತಿ ತೆಗೆದುಕೊ, ಮತ್ತೆ ಬೆಳಗ್ಗೆ ಮಾತನಾಡೋಣ ನೀನು ಹೊರಡು" ಎಂದರು.
ದುರ್ಯೋಧನನಿಗೆ ರಾತ್ರಿ ಯುದ್ಧ ಭೂಮಿಯಲ್ಲಿ ಗಾಯಾಳುವಾಗಿ ಸಾವನ್ನು ನಿರೀಕ್ಷಿಸುತ್ತ ಮಲಗಿರುವ ತಾತನನ್ನು ಬಿಟ್ಟುಹೋಗಲು ಭಯ. ಕೆಲವು ಸೈನಿಕರನ್ನು ಕರೆದು, ರಾತ್ರಿ ಇಲ್ಲಿಯೇ ತಾತನ ಸುತ್ತಲು ನಿಂತು ಕಾವಲು ಕಾಯುವಂತೆ, ಒಂದೊಮ್ಮೆ ಅವರೇನಾದರೂ ಕೇಳಿದರೆ, ತಕ್ಷಣ ತನಗೆ ಸುದ್ದಿ ಕಳಿಸುವಂತೆ ಸೂಚನೆ ಕೊಟ್ಟು , ಹೊರಡುವ ಮುಂಚೆ ಭೀಷ್ಮರ ಬಳಿ ಬಂದು ಅಪ್ಪಣೆ ಕೇಳಿದ ,
ತಲೆ ಆಡಿಸಿದ ಭೀಷ್ಮರು, ದುರ್ಯೋಧನನನ್ನು ಕುರಿತು,
"ಮಗು, ಈಗಲೂ ಒಮ್ಮೆ ಯೋಚಿಸು, ನಿಮ್ಮ ನಿರ್ಧಾರದಿಂದ ಪ್ರಾರಂಭವಾದ ಈ ಯುದ್ಧ ನನ್ನನ್ನು ಬಲಿ ತೆಗೆದುಕೊಂಡಿತು, ಮುಂದಿನ ನಡೆಗಳೇನು ಎಂದು ಗೊತ್ತಿಲ್ಲ. ಈ ಭಾರತ ಯುದ್ಧದಲ್ಲಿ ಯಾರು ಗೆಲ್ಲುವರೋ ಯಾರು ಸೋಲುವರೋ ಎನ್ನುವುದು ಮುಖ್ಯವಾಗುವದಿಲ್ಲ, ಆದರೆ ಸಾವಿರಾರು ಜನ ಸಾವು ನೋವಿನಿಂದ ನರಳುವರು. ನೀನು ಸಹನೆಯಿಂದ ಚಿಂತಿಸಿದರೆ ಈಗಲೂ ಕಾಲ ಮಿಂಚಿಲ್ಲ. ಈ ಯುದ್ಧವನ್ನು ನಿಲ್ಲಿಸಿ ಪಾಂಡವರನ್ನು ನಿನ್ನ ಸಹೋದರರಂತೆ ಕಂಡು, ಚಿಕ್ಕ ಪಾಲೊಂದನ್ನು ಕೊಟ್ಟು ಸಂತಸದಿಂದ ಇರಬಾರದೇಕೆ?" ಎನ್ನುತ್ತಾ ಅವನ ಮುಖವನ್ನು ನೋಡುತ್ತಿದ್ದರು. ಈ ಹಂತದಲ್ಲಿಯಾದರೂ, ಈ ದಾಯಾದಿ ಕಲಹ ನಿಲ್ಲಲ್ಲೆಂದು ಅವರ ಬಯಕೆ.
ದುರ್ಯೋಧನನ ಕಣ್ಣು ಮತ್ತೂ ಕೆಂಪಾಯಿತು, ಯುದ್ಧದ ಪರಿಣಾಮದಿಂದ ಅವನ ಬಟ್ಟೆಗಳು ಅಲ್ಲಲ್ಲಿ ಕೆಂಪಾಗಿತ್ತು, ಮೈಕೈಗಳಲ್ಲಿ ಅಲ್ಲಲ್ಲಿ ರಕ್ತವು ಒಸರಿ ಅವನ ಸ್ವರೂಪಕ್ಕೆ ಭೀಷಣತೆ ಬಂದಿತ್ತು.
"ಅದೊಂದು ಮಾತ್ರ ಆಗದು ತಾತ, ನೀನು ಸಂಬಂಧದಲ್ಲಿ ಅವರಿಗೂ ತಾತನಾಗಬೇಕು. ಆದರೆ ಅದನ್ನು ಮರೆತು, ನಿನ್ನ ಮೇಲೆ ಬಾಣಪ್ರಯೋಗ ಮಾಡಿ, ನಿನ್ನ ಈ ಸ್ಥಿತಿಗೆ ಕಾರಣರಾಗಿದ್ದಾರೆ ಪಾಂಡವರು, ಅವರು ಎಲ್ಲದಕ್ಕೂ ಸಿದ್ದರಾಗಿ ನಿಂತಿರುವಾಗ ನಾನು ಅವರಿಗೆ ಹೇಡಿಯಂತೆ ಶರಣು ಹೋಗಲೇ? ಏನಾಗಬೇಕಿದೆಯೊ ಆಗಲಿ, ನಾನಂತೂ ಇಟ್ಟ ಹೆಜ್ಜೆಯನ್ನು ಹಿಂದೆ ಸರಿಸಲು ಸಿದ್ದನಿಲ್ಲ"
ಎನ್ನುತ್ತ ಭೀಷ್ಮರಿಗೆ ವಂದಿಸಿ, ತನ್ನವರತ್ತ ಹೊರಡಿ ಎಂದು ಸನ್ನೆ ಮಾಡುತ್ತಾ , ದೊಡ್ಡ ದೊಡ್ದ ಹೆಜ್ಜೆಗಳನ್ನಿಡುತ್ತ ಹೊರಟು ಹೋದ. ಅವನ ಹಿಂದೆಯೇ ಕರ್ಣಾದಿಯಾಗಿ, ಆತನ ಗುಂಪೆಲ್ಲ ಹೊರಟು ಹೋಯಿತು.
ಕೆಲವು ಕ್ಷಣ ಕಳೆದಿರಬಹುದು. ಸ್ವಲ್ಪ ಕಂದಿದ ಮುಖಭಾವದಿಂದ ಧರ್ಮರಾಯ ಭೀಷ್ಮರ ಬಳಿಬಂದ
"ತಾತ, ನನಗೆ ನೋವಾಗುತ್ತಿದೆ, ಯುದ್ಧದ ಅನೀವಾರ್ಯತೆಯಿಂದ ನನ್ನ ತಮ್ಮ ಆರ್ಜುನನೇ ತಮ್ಮ ಮೇಲೆ ಬಾಣ ಬಿಟ್ಟು ಈ ಸ್ಥಿತಿಗೆ ಕಾರಣನಾಗಬೇಕಾಯಿತು, ನಮ್ಮನ್ನು ಕ್ಷಮಿಸಿ. ಈ ರಾತ್ರಿ ತಮ್ಮ ಜೊತೆ ನಾನಿರಲೇ?" ಎಂದನು.
ಭೀಷ್ಮರು "ಬೇಡ ಧರ್ಮ, ನೀನಾಗಲಿ ಬೇರೇ ಯಾರೇ ಆಗಲಿ ಇಲ್ಲಿರುವ ಅಗತ್ಯವಿಲ್ಲ. ಆರ್ಜುನನ ಬಾಣ ನನ್ನ ಅಂತ್ಯಕ್ಕೆ ಕಾರಣವಾಯಿತೆಂದು ನೀನು ನೊಂದುಕೊಳ್ಳದಿರು. ಇದೆಲ್ಲ ವಿಧಿಯಾಟ. ನಿನ್ನಲ್ಲಿ ನಾನು ಕೋರಿಕೊಳ್ಳಲೇ , ಈಗ ನೀನಾದರೂ ಮನಸ್ಸು ಮಾಡು, ಈ ಯುದ್ಧ ನಿಲ್ಲಿಸು, ಮುಂದೆ ಹೇಗಾದರೂ ದುರ್ಯೋಧನನನ್ನು ಒಲಿಸಿಕೊಳ್ಳಬಹುದು. ಈ ಯುದ್ಧವೆಂಬ ಭೂತ ದೂರವಾಗಲಿ. ನೀನು ನನ್ನ ಮಾತಿಗೆ ಬೆಲೆಕೊಡಲಾರೆಯಾ?" ಎಂದರು.
ಧರ್ಮರಾಯನ ಮುಖದಲ್ಲಿ ಇಕ್ಕಟ್ಟಿನ ಭಾವ, ಅವನು ಎದುರಿಗಿದ್ದ ಕೃಷ್ಣನ ಮುಖ ನೋಡಿದ. ಕೃಷ್ಣ ಯಾವ ಮಾತನ್ನೂ ಆಡಲಿಲ್ಲ. ಕಿರುನಗೆಯೊಂದು ಅವನ ಮುಖದಲ್ಲಿ ಸದಾ ನೆಲೆಸಿತ್ತು. ಧರ್ಮರಾಜನು ಭೀಷ್ಮರನ್ನು ಕುರಿತು ನುಡಿದ
"ತಾತ ನನಗೂ ಈ ಯುದ್ಧ ಇಷ್ಟವಿಲ್ಲ, ಆದರೆ ಏನು ಮಾಡಲಿ, ಕ್ಷತ್ರೀಯ ಧರ್ಮ ನನ್ನನ್ನು ಕಟ್ಟಿ ಹಾಕಿದೆ, ದುರ್ಯೋಧನನು ಸಣ್ಣ ಐದು ಗ್ರಾಮ ಕೊಡಲು ಒಪ್ಪಿದರು ನಾನು ಯುದ್ಧ ನಿಲ್ಲಿಸಲು ಸಿದ್ಧ, ಮಾತುಕತೆಯಲ್ಲಿ ಸಾಧ್ಯವಾಗದ್ದನ್ನು ನಾನು ಯುದ್ಧದಲ್ಲಿ ಪಡೆಯಬೇಕು ಅದೇ ಧರ್ಮವಲ್ಲವೆ?" ಎಂದ.
ಭೀಷ್ಮರಿಗೆ ಆ ನೋವಿನಲ್ಲೂ ನಗು ಬಂದಿತು. ಪಾಂಡವರ ಮನಸನ್ನು ಈ ಕೃಷ್ಣ ಸಂಪೂರ್ಣವಾಗಿ ತಾನು ನಿಯಂತ್ರಿಸುತ್ತಿದ್ದಾನೆ. ಧರ್ಮರಾಯನ ಬಾಯಲ್ಲಿ ಬರುತ್ತಿರುವ ಈ ಮಾತುಗಳು ಅದೇ ಹಳೆಯ ರಾಗದ ಪುನರಾವರ್ತನೆ. ಧರ್ಮದ ಹೆಸರಿನಲ್ಲಿ ಯುದ್ಧಕ್ಕೆ ನಿಂತಿರುವ ಇವರಿಗೆ ಯಾವ ಸಂಬಂಧಗಳೂ ಕಾಣಿಸುವುದಿಲ್ಲ. ಸ್ವಂತ ತಾತನನ್ನು ದಾರಿಯಿಂದ ನಿವಾರಿಸಲು ಸಿದ್ದರಾದ ಪಾಂಡವರ ಈ ಧರ್ಮದ ವಾದದ ಹಿಂದಿರುವುದು ಸಹ ರಾಜಾಧಿಕಾರದ ಹುಚ್ಚೇ, ಅದನ್ನು ನೀರೆರೆದು ಪೋಷಿಸುತ್ತಿರುವವನು ಈ ಕೃಷ್ಣ ಎಂದು ಮನದಟ್ಟಾಯಿತು.
ಅವರ ಮನಸಿನ ಪರದೆಯ ಮೇಲೆ, ಯಾವುದೋ ದೃಶ್ಯವೊಂದು ಬಂದು ನಿಂತಿತು. ಪಾಂಡವರು ಎಲ್ಲ ಚಿಕ್ಕ ಮಕ್ಕಳು ದೊಡ್ಡವನಾದ ದರ್ಮರಾಯ ಹತ್ತು ಹದಿನೈದು ವರ್ಷದವನಿರಬಹುದು , ಉಳಿದವರೆಲ್ಲ ಕೂಸುಗಳು, ಅರ್ಜುನ ಏಳು ಎಂಟು ವರ್ಷದ ಮಗು, ತಾಯಿ ಕುಂತಿಯ ಜೊತೆ , ತಂದೆಯನ್ನು ಕಳೆದು ಕೊಂಡು ಬಂದು ನಿಂತಿದ್ದ ಅನಾಥ ಮಕ್ಕಳು. ತನಗೆ ಅಯ್ಯೊ ಅನ್ನಿಸಿತ್ತು, ಹಾಕಲು ಬಟ್ಟೆಗಳು ಇಲ್ಲದೆ, ಸರಿಯಾದ ಉಪಚಾರಗಳಿಲ್ಲದೆ ಕಾಡಿನಲ್ಲಿ ಅಮ್ಮನ ಜೊತೆ ಬೆಳೆದ ಮಕ್ಕಳು, ಎಲ್ಲರ ವಿರೋಧದ ನಡುವೆಯೂ ಇವರನ್ನು ಹತ್ತಿರ ಸೇರಿಸಿ, ವಿದ್ಯಾಭ್ಯಾಸ ಕೊಡಿಸಿ, ರಾಜ್ಯ ಕೊಡಿಸಿ ನಿಲ್ಲಿಸಿದೆ, ಆದರೆ ತಮ್ಮ ಮೂರ್ಖತೆಯಿಂದ ದುರ್ಯೋಧನನ ಜೊತೆಗೆ ಜೂಜಿಗೆ ಇಳಿದು ರಾಜ್ಯ ಕಳೆದು ವನವಾಸ ಮಾಡಿ ಈಗ ಈ ಸ್ಥಿತಿಗೆ ಬಂದು ನಿಂತಿದ್ದಾರೆ. ಈಗ ತನ್ನ ಮಾತು ಸಹ ಇವರಿಗೆ ರುಚಿಸದು ಎಂದು ಅರ್ಥವಾಗಿ ಮೌನವಾದರು.
ಧರ್ಮರಾಯ ಹೊರಡುವ ಮುಂಚೆ
"ಪೂಜ್ಯ ತಾತ, ನನಗೆ ತಮ್ಮಿಂದ ಕೆಲವು ಧರ್ಮದ ಉಪದೇಶ ಬೇಕಾಗಿದೆ ಮತ್ತೆ ಬಂದು ನಿಮ್ಮನ್ನು ಕಾಣುತ್ತೇನೆ" ಎಂದ.
ಭೀಷ್ಮರಿಗೆ ಗಹಗಹಿಸಿ ನಗುವ ಮನಸ್ಸಾಯಿತು. ಆದರೆ ಏನನ್ನೂ ಹೇಳದೆ ತಲೆಯಾಡಿಸಿದರು. ಅವರು ಮೌನವಾಗಿ ತಲೆಯಾಡಿಸುತ್ತಿದ್ದಂತೆ ಧರ್ಮರಾಯ ಹಾಗು ಉಳಿದ ಪಾಂಡವರು ಹೊರಟರು.
ಅರ್ಜುನ ಸಹ ಹೊರಟಂತೆ, ಕೃಷ್ಣ ಅರ್ಜುನನ ಹೆಗಲ ಮೇಲೆ ಮೃದುವಾಗಿ ಕೈಒತ್ತಿದ. ನಿಲ್ಲುವಂತೆ ಸೂಚಿಸಿದ.
"ಅರ್ಜುನ ಪೂಜ್ಯರು ನೆಲದ ಮೇಲೆ ಮಲಗಿದ್ದಾರೆ, ಅವರಿಗೆ ಏನಾದರು ಅಗತ್ಯವಿದೆಯ ಕೇಳಿ ಹೋಗೋಣ" ಎಂದ.
ಭೀಷ್ಮರು ಯೋಚಿಸಿದರು, ಕೃಷ್ಣನ ದ್ವನಿ ಅತ್ಯಂತ ಮೃದು. ಅವನು ನುಡಿದರೆ, ವೇಣುವಿನ ಶಬ್ದದಂತೆ ಕೇಳುವುದು. ಮಾತಿನಲ್ಲಿ ಸಹಜವಾಗಿಯೆ ಆಜ್ಞೆ ಇರುತ್ತಿತ್ತು, ಎದುರಿಗಿರುವವರು ಪುಂಗಿಯ ನಾದಕ್ಕೆ ಹೆಡೆತೂಗುವ ಹಾವಿನಂತೆ ಅವನ ಮಾತಿಗೆ ತಲೆತೂಗುವರು. ಆದರು ಇವನು ದುರ್ಯೋಧನನನ್ನು ಏಕೆ ಒಲಿಸಲಿಲ್ಲ ಎಂದು ಅವರಿಗೆ ಅನ್ನಿಸಿತು.
ಆರ್ಜುನ ನಿಧಾನಕ್ಕೆ ಅವರ ಹತ್ತಿರ ಬಂದು ನಿಂತ, ಅವನ ನಿಲುವಿನಲ್ಲಿ ಅನಿವಾರ್ಯತೆ ಇತ್ತೇ ಹೊರತು, ತಾತನ ಈ ಸ್ಥಿತಿಗೆ ತಾನು ಕಾರಣನಾದೆನೆಂಬ ನೋವು ಕಾಣಿಸಲಿಲ್ಲ.
ಕೃಷ್ಣ ಕೇಳಿದ
"ಪೂಜ್ಯರೆ, ತಮಗೆ ಏನಾದರೂ ಬೇಕಿತ್ತೆ?".
ಭೀಷ್ಮರಿಗೆ ಆಗಿನಿಂದ ಬಾಯಾರುತ್ತಿತ್ತು, ಅವರಿಗೆ ಕುಡಿಯಲು ನೀರು ಬೇಕಿತ್ತು. ಅವರು ನಿಧಾನಕ್ಕೆ ನುಡಿದರು
"ಕೃಷ್ಣ ಬಾಯಾರಿದೆ, ಕುಡಿಯಲು ನೀರು ಬೇಕಿದೆ" ,
ಅರ್ಜುನ ಸುತ್ತಲು ನೋಡಿದ, ಎಲ್ಲಿಯಾದರು ಹೋಗಿ ನೀರು ತರಬೇಕು ಎಂದುಕೊಳ್ಳೂತ್ತಿರುವಂತೆ ಕೃಷ್ಣನು ಅರ್ಜುನನಿಗೆ ನುಡಿದ.
"ಅರ್ಜುನ ನೀನು ನಿನ್ನ ವಿದ್ಯಾಬಲದಿಂದ ನೆಲಕ್ಕೆ ಬಾಣ ಹೂಡಿ ಇಲ್ಲೆ ನೀರೇಕೆ ತರಿಸಬಾರದು"
ಅರ್ಜುನನ ಕಣ್ಣು ಮಿನಗಿತು, ಇಂತಹವನ್ನೆಲ್ಲ ಕೆಲವೊಮ್ಮೆ ಅವನು ಬಿಲ್ವಿದ್ಯೆಯ ಅಭ್ಯಾಸದ ಸಮಯದಲ್ಲಿ ಪ್ರಯತ್ನ ಪಟ್ಟಿದ್ದ. ಈಗ ನೆನಪಿಸಿಕೊಂಡು, ಹಿಂದಿನಿಂದ ಬಾಣವೊಂದನ್ನು ತೆಗೆದ, ಬಿಲ್ಲಿಗೆ ಹೂಡಿ, ದಿಕ್ಕನ್ನು ಸರಿಯಾಗಿ ಹೊಂದಿಸಿ, ಭೀಷ್ಮರ ಸನಿಹ ಕುಳಿತ, ಬಾಣಕ್ಕೆ ತಕ್ಕ ಮಂತ್ರ ದೇವತೆಯನ್ನು ಸ್ಮರಿಸಿ, ಬಗ್ಗಿ ನೆಲಕ್ಕೆ ಬಾಣವನ್ನು ಬಿಟ್ಟ. ಶಬ್ದ ಮಾಡುತ್ತ ಬಾಣವು ನೆಲದೊಳಗೆ ಕಣ್ಮರೆಯಾಯಿತು. ಅದು ಯಮುನೆ ಹರಿಯುವ ಸನಿಹದ ನೆಲ. ಕ್ಷಣಗಳಲ್ಲಿ ಬಾಣಬಿಟ್ಟ ಜಾಗದಿಂದ ನೀರು ಚಿಮ್ಮಿತ್ತು, ನೇರವಾಗಿ ಭೀಷ್ಮರ ಮುಖದ ಹತ್ತಿರ, ಆರ್ಜುನ ಬೊಗಸೆಯಲ್ಲಿ ನೀರು ಹಿಡಿದು ಅವರಿಗೆ ಕುಡಿಸಿದ. ಒಂದೆರಡು ಕ್ಷಣ ನೀರು ಹಾಗೆ ನಿಂತಿತು.
ಭೀಷ್ಮರು ಅರ್ಜುನನ ಮುಖ ಹತ್ತಿರದಿಂದ ವೀಕ್ಷಿಸಿದರು. ಅರ್ಜುನನನಲ್ಲಿ ತಾತನಿಗೆ ನೀರು ಕುಡಿಸಿದ ಯಾವ ಸಾರ್ಥಕ ಭಾವವು ಕಾಣುತ್ತಿಲ್ಲ. ಬದಲಾಗಿ ತನ್ನ ಬಿಲ್ವಿದ್ಯೆಯನ್ನು ತಾತನಿಗೆ ತೋರಿಸಿದ, ಅಹಂ ಮತ್ತು ತೃಪ್ತ ಭಾವ ಕಾಣುತ್ತಿದೆ. ಬೆಚ್ಚಿದರು ಭೀಷ್ಮರು.
"ಪೂಜ್ಯರೆ ನಮ್ಮಿಂದ ಮತ್ತೇನಾದರು ಸೇವೆಯ ಅಗತ್ಯವಿದೆಯೆ?"
ಭೀಷ್ಮ ಅರಿತರು ಕೃಷ್ಣನು ತನಗೆ ಈ ಮೂಲಕ ಏನನ್ನೊ ಹೇಳುತ್ತಿದ್ದಾನೆ. ಅವರು ಈಗ ನುಡಿದರು.
"ಕೃಷ್ಣ, ಎದೆಯಲ್ಲಿ ನೆಟ್ಟ ಬಾಣದಿಂದಾಗಿ ನೇರವಾಗಿ ಮಲಗಲು ಆಗುತ್ತಿಲ್ಲ, ಒರಗಿ ಮಲಗಲು ತಲೆಗೆ ಆಸರೆ ಏನಾದರು ಬೇಕಿತ್ತು"
ಆರ್ಜುನ ಸುತ್ತಮುತ್ತ ನೋಡಿದ ಮತ್ತೇನಾದರು ಒರಗುದಿಂಬಿನಂತದು ಸಿಗಲು ಸಾದ್ಯವೆ ಎಂದು. ಕೃಷ್ಣ ನಗುತ್ತ ನುಡಿದ
"ಆರ್ಜುನ ಇಲ್ಲಿ ಅಂತದೇನು ಸಿಗಲಾರದು, ಇಲ್ಲಿರುವದೆಲ್ಲ ಬಾಣ, ಕತ್ತಿಯಂತ ಆಯುದಗಳೆ, ಒಂದು ಕೆಲಸಮಾಡು, ಬಾಣಗಳನ್ನು ಒಟ್ಟುಗೂಡಿಸಿ, ಅವರ ಬೆನ್ನು ತಲೆಗೆ ಆದರಾವನ್ನಾಗಿಸು" .
ಅರ್ಜುನನಿಗೆ ಒಂದು ಕ್ಷಣ ಮರುಕ ಮೂಡಿತು, ಆದರೇನು ಇದು ಯುದ್ಧಭೂಮಿ ಎಂದುಕೊಳ್ಳುತ್ತ, ಸುತ್ತ ಮುತ್ತಲಿದ್ದ ಬಾಣಗಳನ್ನೆಲ್ಲ ಒಂದುಮಾಡಿ ಒರಗುದಿಂಬಿನಂತಾಗಿಸಿದ, ಅದನ್ನು ತಾತ ಬೀಷ್ಮಾಚಾರ್ಯರ ಬೆನ್ನು ತಲೆಗೆ ಆದಾರವಾಗಿ ಕೊಟ್ಟು ಅವರನ್ನು ಮಲಗಿಸಿದ. ಭೀಷ್ಮರು ಆರ್ಜುನನತ್ತ ದಿಟ್ಟಿಸಿದರು, ಆರ್ಜುನನಲ್ಲಿ ಕೃಷ್ಣ ಹೇಳಿದ ಕೆಲಸವನ್ನು ಮಾಡುವ ತತ್ಪರತೆಯಷ್ಟೆ. ತನ್ನತ್ತ ಒಂದು ಮರುಕದ ನೋಟವಿಲ್ಲ. ಇದೆಂತ ವಿಚಿತ್ರ, ನಾನು ಮಲಗಿರುವ ಈ ಸ್ಥಿತಿಗೆ ಅಯ್ಯೋ ಎನ್ನುತ್ತ ಕಣ್ಣೀರಗೆರೆಯುವರು ಒಬ್ಬರೂ ಇಲ್ಲವೆ. ತಾವು ಆರ್ಜುನನನ್ನು ಪ್ರೀತಿಯ ಮೊಮ್ಮಗನನ್ನಾಗಿ ಭಾವಿಸಿದ್ದರು, ಆದರೆ ಆರ್ಜುನನಲ್ಲಿ ತಾತನ ಈ ಸ್ಥಿತಿಗೆ ಯಾವ ಸ್ಪಂದನೆಯು ಇಲ್ಲ 'ತಾತ ನನ್ನಿಂದಾಗಿ ತಮ್ಮ ಗತಿ ಹೀಗಾಯಿತು' ಎನ್ನುವ ಒಂದು ಕಣ್ಣೀರ ಹನಿ ಇಲ್ಲ.
ಅವರಿಗೆ ಅರ್ಥವಾಗಿಹೋಗಿತ್ತು. ತಾನೀಗ ಯಾರಿಗೂ ಬೇಡವಾಗಿಬಿಟ್ಟಿರುವೆ. ನನ್ನಿಂದ ಇದ್ದ ಅಗತ್ಯವೆಲ್ಲ ಇವರಿಗೆ ತೀರಿ ಹೋಗಿದೆ. ದುರ್ಯೋಧನ ನನ್ನನ್ನು ಪಾಂಡವರಿಗೆ ಎದುರಾಗಿ ನಿಲ್ಲಿಸಿ , ಭಾವನಾತ್ಮಕವಾಗಿ ಪಾಂಡವರನ್ನು ಕಂಗೆಡಿಸಿ, ಗೆಲವು ಸಾಧಿಸಲು ಪ್ರಯತ್ನಿಸಿದ. ಆದರೆ ಈಗ ತಾನು ನೆಲಕ್ಕೆ ಬಿದ್ದ ಮೇಲೆ ಅವನಿಗೆ ತನ್ನ ಅಗತ್ಯವಿಲ್ಲ. ಸೈನಿಕರನ್ನು ಕಾವಲಿಗೆ ಬಿಟ್ಟು ಹೊರಟುಹೋದ. "ತಾತ ನಾನು ಇಲ್ಲಿ ಇರಲೇ " ಎಂದು ಕೇಳಬಹುದಿತ್ತು, ಆದರೆ ಅವನಿಗೆ ನಾಳಿನ ಯುದ್ಧದ್ದ ಚಿಂತನೆ. ಯಾರನ್ನಾದರೂ ಸೇನಾಧಿಪತಿಯನ್ನಾಗಿ ಆರಿಸುವ ಆತುರ.
ಪಾಂಡವರಿಗೆ ತಾನು ಎದುರಾಗಿ ನಿಂತಿರುವವರೆಗೂ ಗೆಲುವು ಅಸಾಧ್ಯವೆಂದು ಅರ್ಥವಾಗಿತ್ತು, ಹಾಗಾಗಿ ತನ್ನನ್ನು ನಿವಾರಿಸಿಕೊಂಡುಬಿಟ್ಟರು, ಇನ್ನು ಮುಂದಿನ ಚಿಂತನೆಯಷ್ಟೆ. ಇಬ್ಬರಿಗೂ ತಾತನಾಗಿರುವ ತಾನು ಈಗ ಇವರಿಬ್ಬರಿಗೂ ಏನೂ ಅಲ್ಲ.
ಸಂಜೆಯ ಯುದ್ಧದ ನೆನಪಾಗಿತ್ತು, ನಾನದೆಷ್ಟು ಯುದ್ಧಗಳಲ್ಲಿ ಬಾಗವಹಿಸಿಲ್ಲ, ಗೆದ್ದಿಲ್ಲ, ಕತ್ತಿಯ ಏಟು, ಬಾಣದ ಏಟು ನನಗಾವ ನೋವನ್ನು ಮಾಡದು. ಆದರೆ ಸಂಜೆ ಏಕೋ ಮನಸ್ಸು ವಿಚಲಿತವಾಗಿತ್ತು. ಎದುರಿಗೆ ಯಾರೊ ಶಿಖಂಡಿಯನ್ನು ನಿಲ್ಲಿಸಿದ್ದರು. ಅದೇನೂ ಮುಖ್ಯವಾಗಿರಲಿಲ್ಲ. ಅರ್ಜುನನಿಗೆ ಕೃಷ್ಣ ಹೇಳಿದ್ದ
"ಆರ್ಜುನ ಇದೇ ಸಮಯ ಮತ್ತೆ ಸಿಗದು, ಭೀಷ್ಮರು ವಿಚಲಿತರಾಗಿದ್ದಾರೆ, ಅವರ ಮೇಲೆ ಬಾಣ ಪ್ರಯೋಗಿಸು."
ಭೀಷ್ಮರು ಶೂನ್ಯ ಮನಸ್ಕರಾಗಿ ಅರ್ಜುನನನ್ನು ದಿಟ್ಟಿಸಿದರು, ಅರ್ಜುನನ ಕಣ್ಣಲ್ಲಿ ಇದ್ದ ಗೆಲುವಿನ ಹಸಿವು ಅವರನ್ನು ನೋಯಿಸಿತ್ತು. ಎದುರಿಗೆ ನಿಂತಿರುವ ತಾತನ ಮೇಲೆ ಅವನಿಗಾವ ಮಮಕಾರವೂ ಇರಲಿಲ್ಲ. ಹೇಗಾದರೂ ಸರಿ, ತನ್ನನ್ನು ಹೊಡೆದು ಕೆಡವಿ, ಯುದ್ಧವನ್ನು ಕೊನೆಗಾಣಿಸಬೇಕೆಂಬುದೇ ಅವನ ಕಣ್ಣಿನಲ್ಲಿ ಕಾಣಿಸಿದ ಭಾವ. ಅವರು ವಿಹ್ವಲರಾದರು.
" ಯಾರೋ ಬಿಟ್ಟ ಬಾಣ ತಾಕಿ ರಕ್ತ ಚಿಮ್ಮಿದಾಗ, ಅಷ್ಟು ನೋವಾಗಿರಲಿಲ್ಲ,
ಆದರೆ,
ಬಿಲ್ಲು ಹಿಡಿದುಕೊಂಡಿದ್ದವರು ನನ್ನವರೇ ಎಂದರಿತಾಗ ಹೃದಯ ಛಿದ್ರವಾಯಿತು!"
ಕೈಲಿದ್ದ ಬಿಲ್ಲು ಬಾಣಗಳನ್ನು ಎಸೆದರು, ಅರ್ಜುನನು ಬಿಟ್ಟಬಾಣಕ್ಕೆ ಎದೆಯೊಡ್ಡಿ ನಿಂತರು, ಅವರ ಯುದ್ಧ, ಹೋರಾಟ ಕೊನೆಯಾಗಿತ್ತು.
ಕೃಷ್ಣ ಹೀಗೇಕೆ ಮಾಡಿದೆ, ಅರ್ಜುನನ ಹೃದಯದಲ್ಲಿ ತನ್ನವರೆಂಬ ಭಾವ ಹೊಕ್ಕಾಗ ಅದನ್ನು ನಿನ್ನ ಭಗವದ್ಗೀತೆಯ ವಾಣಿಗಳಿಂದ ತೊಡೆದು ಅವನನ್ನು ಉತ್ತೇಜನಗೊಳಿಸಿ ಯುದ್ಧಕ್ಕೆ ಸಿದ್ದ ಮಾಡಿದೆ. ಆದರೆ ಅದೇ ಭಾವವನ್ನು ನನ್ನ ಹೃದಯದಲ್ಲಿ ಮೂಡಿಸಿ ನನ್ನ ಬದುಕನ್ನು ಯುದ್ಧವನ್ನು ಕೊನೆಗಾಣಿಸಿದೆ. ನಿನ್ನನ್ನು ದೈವವೆಂದು ಎಲ್ಲರು ಪೂಜಿಸುತ್ತಾರೆ, ನಿನ್ನ ಬಗ್ಗೆ ಮದುರ ಭಾವ ಹೊಂದಿರುವ ನನ್ನಲ್ಲೇಕೆ ಈ ಭೇದ ಭಾವ.
ಅವರ ಮನ ಚಿಂತಿಸುತ್ತಿತ್ತು.
ನಿಧಾನಕ್ಕೆ ಕಣ್ಣು ತೆರೆದು ಕೃಷ್ಣನ ಮುಖ ನೋಡಿದರು, ಅಲ್ಲಿ ಎಂದೂ ಬಾಡದ ಒಂದು ಮುಗುಳ್ನಗೆ, ಅವರ ಹೃದಯಕ್ಕೆ ವೇದ್ಯವಾಗಿತ್ತು. 'ನಿಜ ಕೃಷ್ಣ, ನೀನು ಸತ್ಯವನ್ನು ನನ್ನ ಕಣ್ಣೆದುದುರಿಗೇ ತೋರಿಸುತ್ತಿರುವೆ. ಆದರೆ ನಾನಿನ್ನೂ ಅರ್ಥಮಾಡಿಕೊಂಡಿಲ್ಲ. ನಾನು ನಂಬಿರುವ ಇವರಾರೂ ನನ್ನ ಬಂಧುಗಳಲ್ಲ. ನಾನಿನ್ನು ಇವರ ನಡುವೆ ಇರುವ ಅಗತ್ಯವಿಲ್ಲ. ಇವರ ಸೋಲು ಗೆಲುವಿಗೂ ನನಗೂ ಸಂಬಂಧವೇ ಇಲ್ಲ. ನನ್ನ ಈ ಲೋಕದ ಯಾತ್ರೆ ಮುಗಿಯಿತು,' ಎಂಬ ಭಾವ ಅವರನ್ನು ತುಂಬುತ್ತಾ, ಅವರು ಹೊರಗಿನ ಏನನ್ನು ನೋಡಲು ಇಚ್ಚೆ ಇಲ್ಲದವರಂತೆ ಕಣ್ಣು ಮುಚ್ಚಿಕೊಂಡರು.
"ಅರ್ಜುನ ನಾವಿನ್ನು ಹೊರಡೋಣ, ನಮ್ಮ ಕೆಲಸವಾಯಿತು"
ಕೃಷ್ಣ ಅರ್ಜುನನಿಗೆ ತನ್ನ ಮೃದು ಧ್ವನಿಯಲ್ಲಿ ಹೇಳುತ್ತಿದ್ದ. ಇಬ್ಬರೂ ಅಲ್ಲಿಂದ ನಿಧಾನವಾಗಿ ನಡೆದು ಹೊರಟು ಹೋದರು.
- ಮುಗಿಯಿತು.
ಕೃತಜ್ಞತೆ:
ಚಿತ್ರವನ್ನು ಇಂಟರ್ ನೆಟ್ ನ : supergoodmovies.com ನಲ್ಲಿಯ bhishma dance drama ದಿಂದ ಕಾಪಿ ಮಾಡಿರುವೆ
-------------------------------------------------------------------------------------------
ಹಿನ್ನುಡಿ : ಫೇಸ್ ಬುಕ್ ನಲ್ಲಿ ಆಸುಮನದ ಕವಿತೆ ಓದಿ ಮರೆತರು ನಡುನಡುವೆ ಆ ವಾಕ್ಯಗಳು ನೆನಪಿಗೆ ಬರುತ್ತಲೆ ಇದ್ದಿತು. ಏಕೊ ಭೀಷ್ಮರ ಸಾವಿನ ಪ್ರಸಂಗವು ಅದರೊಂದಿಗೆ ನೆನಪಿಗೆ ಬರುತ್ತಿತ್ತು. ಸಂಪೂರ್ಣ ಸಿಂಹಾಸನಕ್ಕೆ ಅವರೆ ನಿಜವಾದ ಅಧಿಕಾರಿಯಾಗಿದ್ದರು ಸಹ ತಂದೆಗಾಗಿ ಕೊಟ್ಟ ಮಾತಿನಂತೆ , ಎಂತಹ ಸಂದರ್ಭದಲ್ಲಿ ಸಹ ಸಿಂಹಾಸನವೇರದೆ, ಕಡೆಯಲ್ಲಿ ಸುತ್ತಲು ಜನರಿದ್ದರು ತನ್ನವರು ಎಂದು ಯಾರು ಇರದೆ, ತಾನು ಸಾಕಿ , ವಿದ್ಯೆ ಕೊಡಿಸಿ ಬೆಳೆಸಿದ ತನ್ನ ಮೊಮ್ಮಕ್ಕಳ ಯುದ್ಧೋನ್ಮಾದದಲ್ಲಿ ತನ್ನ ಮೊಮ್ಮಗನಿಂದಲೆ ಹತನಾದ ಭೀಷ್ಮರ ಕತೆ, ಆಸುರವರ ವಾಕ್ಯದೊಂದಿಗೆ ತಾಳೆಯಾಗುತ್ತಿತ್ತು. ಹಾಗಾಗಿ ಈ ಕತೆ. ತಮ್ಮ ಕವಿತೆ ಮೂಲಕ ಕತೆಗೆ ಸ್ಪೂರ್ತಿಯಾದ ಹಾಗು ಕತೆಯಲ್ಲಿನ ಅಲ್ಪ/ಮಹಾಪ್ರಾಣ ಹಾಗು ತಪ್ಪುಗಳನ್ನು ತಿದ್ದಿಕೊಟ್ಟ ಆಸುರವರಿಗೆ ವಂದನೆಗಳು
-ಪಾರ್ಥಸಾರಥಿ

Sunday, April 8, 2012

ರುಚಿ: ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ)


ರುಚಿ: ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ)

ರುಚಿ:  ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ)
ಕೋಡುಬಳೆ ಮಾಡುವ ವಿಧಾನ (ಗಂಡಸರಿಗೆ ಮಾತ್ರ)
ಪ್ರೇರಣೆ: ಗಣೇಶರ ಇಡ್ಲಿಮಂಚೂರಿ
ಬೇಕಾಗುವ ವಸ್ತುಗಳು: ಅಕ್ಕಿಹಿಟ್ಟು, ಸ್ವಲ್ಪ ಚಿರೋಟಿ ರವೆ, ಸಾದ್ಯವಾದಲ್ಲಿ ಸ್ವಲ್ಪ ತುಪ್ಪ, ತೆಂಗಿನ ತುರಿ, ಅಚ್ಚಕಾರದ ಪುಡಿ
, ಇಂಗು, ಉಪ್ಪು, ಓಮ್ ಕಾಳುಗಳು, ಸ್ವಲ್ಪ ಜೀರಿಗೆ, ಮೆಣಸು, ಕರೆಯಲು ಎಣ್ಣೆ ಸಿದ್ದಪಡಿಸಿಟ್ಟುಕೊಳ್ಳಿ
ಮಾಡಬಹುದಾದ ಸಮಯ: ಮನೆಯಲ್ಲಿ ಹೆಂಡತಿ, ಹಾಗು ಮಕ್ಕಳು(ಗಳು) ಇಲ್ಲದ ಸಮಯ - ಕಡಿಮೆ ಅಂದರೆ ಎರಡು ತಾಸು ಅವರುಗಳು ಬರದ ಸಮಯ ಆರಿಸಿಕೊಳ್ಳುವುದು ಉತ್ತಮ.
ತಯಾರಿಸುವ ವಿದಾನ : ಮೊದಲಿಗೆ ಮನೆಯಲ್ಲಿರುವ ಮೊಬೈಲ್ ಸ್ವಿಚ್ ಆಫ್ ಮಾಡಿ, ನಂತರ ಲ್ಯಾಂಡ್ ಲೈನ್ ಡಿಸ್ಕನೆಕ್ಟ್ ಮಾಡಿ ಸಿದ್ದರಾಗಿ.
ಒಂದು (ತಲೆ ಒಡೆದು) ಲೋಟದಷ್ಟು ಅಕ್ಕಿಹಿಟ್ಟನ್ನು ದಪ್ಪ ತಳದ ಬಾಂಡಲೆಯಲ್ಲಿ ಒಲೆಯ ಮೇಲಿಟ್ಟು ಹದವಾಗಿ ಬಿಸಿಮಾಡಿ ಒಂದು ಬೌಲ್ ಗೆ ಹಾಕಿಕೊಳ್ಳಿ, ಹಾಗೆ ನಾಲ್ಕು ದೊಡ್ಡ ಚಮಚದಷ್ಟು ಚಿರೋಟಿ ರವೆಯನ್ನು ತುಪ್ಪದಲ್ಲಿ ಹುರಿದು ಅಕ್ಕಿ ಹಿಟ್ಟಿನ ಜೊತೆ ಹಾಕಿ.
ತುರಿದ ಕಾಯತುರಿಯನ್ನು ಅದೆ ಬಾಂಡಲೆಯಲ್ಲಿ ಹಾಕಿ ಸ್ವಲ್ಪ ಕೆಂಪು ಬರುವವರೆಗು ಹುರಿಯಿರಿ, ಅದನ್ನು ಅಕ್ಕಿ ಹಿಟ್ಟಿನ ಬೌಲ್ ಒಳಗೆ ಹಾಕಿ. ಈಗ ಒಂದು ಅಥವ ಒಂದುವರೆ ಚಮಚದಷ್ಟು ಅಚ್ಚಕಾರದ‌ ಪುಡಿಯನ್ನು , ಅರ್ದದಿಂದ ಒಂದು ಚಮಚದಷ್ಟು ಪುಡಿ ಉಪ್ಪನ್ನು ಆ ಹಿಟ್ಟಿಗೆ ಬೆರೆಸಿ , ಸ್ಟೀಲ್ ಚಮಚದಲ್ಲಿ ಮಿಕ್ಸ್ ಮಾಡಿ.
ಓಮ್ ಕಾಳುಗಳನ್ನು, ಸ್ವಲ್ಪ ಜೀರಿಗೆ , ಹಾಗು ಪುಡಿಮಾಡಿದ ಕಾಳುಮೆಣಸು ಪುಡಿಯನ್ನು ಚಿಟಿಕೆಯಷ್ಟು ಸೇರಿಸಿ. ನಾಲಕ್ಕು ಚಮಚದಷ್ಟು ಎಣ್ಣೆಯನ್ನು ಒಲೆಯ ಮೇಲಿಟ್ಟು ಬಿಸಿಮಾಡಿ ಅದಕ್ಕೆ ಇಂಗಿನ ಪುಡಿಯನ್ನು ಸೇರಿಸಿ, ಅದನ್ನು ಅಕ್ಕಿಹಿಟ್ಟಿನ ಮಿಶ್ರಣದ ಮೇಲೆ ಹಾಕಿ, ನಂತರ ಪುನಃ ಸ್ಟೀಲ್ ಚಮಚದಿಂದ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಅಕ್ಕಿ ಹಿಟ್ಟಿನ ಮಿಶ್ರಣ ಸ್ವಲ್ಪ ಸಹಜ ಶಾಖಕ್ಕೆ ಬರುವವರೆಗೂ ಕಾದು ನಂತರ ನೀರಿನಲ್ಲಿ ಹದವಾಗಿ ಕಲೆಸಿ ,[ ರೊಟ್ಟಿಗೆ ಕಲಸುವ ಹಿಟ್ಟಿನಂತೆ.}
ನೆನಪಿಡಿ : ಮಿಶ್ರಣ ಬಿಸಿ ಇರುವಾಗಲೆ ನೀರು ಹಾಕಿ ಕಲಸಿದರೆ ಕೋಡುಬಳೆ ನುರುಗಾಗುವದಿಲ್ಲ (crispy) , ಕೆಲವರು ಹೇಳುವಂತೆ ಚಮಚದಷ್ಟು ಮೈದಾ ಹಾಕಿದರು ಸಹ ಆರಿದ ನಂತರ ಕೋಡುಬಳೆ ಮೆತ್ತಗಾಗುವದರಿಂದ ಅದನ್ನು ಹಾಕಬೇಡಿ.
ಈಗ ಸ್ಟೀಲ್ ತಟ್ಟೆಯೊಂದನ್ನು ತೆಗೆದುಕೊಂಡು ಅದನ್ನು ಮೇಲುಕೆಳಗಾಗಿಸಿ ನೆಲದ ಮೇಲಿಟ್ಟು, ಸಿದ್ದವಾದ ಕೋಡುಬಳೆ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ತೆಗೆದುಕೊಂಡು, ತಟ್ಟೆಯ ಮೇಲೆ ಹಾಕಿ , ಕೈಯಿಂದ ಒತ್ತಿ, ನಂತರ ಸುರುಳಿಯಾಕಾರದಲ್ಲಿ ಸುತ್ತಿ ಇಟ್ಟುಕೊಳ್ಳಿ, ಅದೇ ರೀತಿ ಎಲ್ಲ ಹಿಟ್ಟನ್ನು ಕೋಡುಬಳೆಯನ್ನಾಗಿ ಒತ್ತಿಟ್ಟುಕೊಳ್ಳಿ.
ಈಗ ಒಲೆಯ ಮೇಲೆ ದಪ್ಪ ತಳದ ಬಾಂಡಲೆ ಇಟ್ಟು, ಅದರಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾದನಂತರ , ನೀವು ಸಿದ್ದ ಮಾಡಿಟ್ಟುಕೊಂಡಿರುವ ಕೋಡುಬಳೆ ಸುರಳಿಗಳನ್ನು ಎಣ್ಣೆಯಲ್ಲಿ ಬಿಟ್ಟು, ಕೆಂಪಾಗಿ ಹದ ಬರುವವರೆಗೂ ಬೇಯಿಸಿ. ನಂತರ ಹೊರಗೆ ತೆಗೆಯಿರಿ.
ಈಗ ಸ್ಟೌ ಆರಿಸಿ ಎಣ್ಣೆ ಆರಿದ ನಂತರ ಒಂದು ಮುಚ್ಚಲವಿರುವ ಪಾತ್ರೆ ಅಥವ ಬಾಟಲಿಗೆ ಎಣ್ಣೆಯನ್ನು ಹಾಕಿಡಿ, ನಂತರ ಅಡಿಗೆ ಮನೆಯಲ್ಲಿ ನೀವು ಮಾಡಿರುವ ಕೊಳಕನ್ನೆಲ್ಲ ತೆಗೆದು ಶುಭ್ರ ಮಾಡಿ.
ನಂತರ
ಒಂದು ಲೋಟ ಕಾಫಿ ಮಾಡಿಕೊಳ್ಳಿ.
ಕೋಡುಬಳೆಯನ್ನು ( ಪ್ಲೇಟ್ ಎಲ್ಲ ಬೇಡ ಚೆನ್ನಾಗಿರಲ್ಲ) ಒಂದು ಕೋಲಿನಂತ ವಸ್ತು ಅಥವ ಮಜ್ಜಿಗೆ ಕಡೆಯುವ ಕೋಲಿಗೆ ಎಂಟು ಹತ್ತು ಕೋಡುಬಳೆಯನ್ನು ಸಿಕ್ಕಿಸಿ, ಹಾಲಿಗೆ ಬಂದು ಟಿ.ವಿ ಆನ್ ಮಾಡಿ, ಸೋಪ ಮೇಲೆ ಕೂತು ಕೋಡುಬಳೆ ಮೆಲ್ಲುತ್ತ ಕಾಫಿ ಕುಡಿಯಿರಿ.
========================================================
ಕಡೆಯ ಸೂಚನೆ : ಒಂದು ವೇಳೆ ನೀವು ಮಾಡಿದ ಕೋಡುಬಳೆ ತುಂಬಾ ಕೆಟ್ಟದಾಗಿದ್ದರೆ ಅಥವ ಮದ್ಯದಲ್ಲಿ ಹದ ಕೆಟ್ಟು ಕೋಡುಬಳೆ ಮಾಡಲು ಬರದಿದ್ದರೆ, ಎಣ್ಣೆ, ಹಿಟ್ಟು ಮುಂತಾದ ವಸ್ತುಗಳನ್ನೆಲ್ಲ ಕಣ್ಣಿಗೆ ಕಾಣದಂತೆ ಆಚೆ ಹಾಕಿ, ಕೋಡುಬಳೆಯನ್ನು ನಿರ್ಲಿಪ್ತರಾಗಿ ಆಚೆ ಎಸೆದು. ಅಡಿಗೆಮನೆಯನ್ನು ಶುದ್ದಗೊಳಿಸಿ ನೀವು ಮಾಡಿದ ಪ್ರಯತ್ನ ಯಾರ ಕಣ್ಣಿಗೂ ಬೀಳದಂತೆ ಎಚ್ಚರವಹಿಸಿ. ನಂತರ ಹೊರಗೆ ಬಂದು ಕಳ್ಳಬೆಕ್ಕಿನಂತೆ ಟಿ.ವಿ. ನೋಡುತ್ತ ಕುಳಿತಿರಿ
ಟಪ್.. ಟಪ್ ಬಾಗಿಲ ತಟ್ಟುವ ಶಬ್ದ ....... ಹೋಗಿ ನೋಡಿ ನಿಮ್ಮವರು ಬಂದ ಹಾಗಿದೆ.

Wednesday, April 4, 2012

ಕಥೆ : ವೃತ್ತಿಗೌರವ

ವೃತ್ತಿಗೌರವ 
ಬಾಚಣಿಗೆಯನ್ನು ಕೈಯಲ್ಲಿ ಹಿಡಿದಿದ್ದ ಕತ್ತರಿಯಿಂದ 'ಟಪ್' ಎಂದು ಬಡೆದು ಮೂಲೆಗೆ ಹೋಗಿ 'ಊಫ್' ಎಂದು ಊದಿದ. ಕಟಿಂಗ್ ಮಾಡುವಾಗ ಮಾದುವಿನ ಅಭ್ಯಾಸದು. ಮಾದವನ್ ಅವನ ಹೆಸರು ಎಲ್ಲರು ಮಾದು ಎಂದೆ ಕರೆಯುತ್ತಿದ್ದರು. ಪಾಪರೆಡ್ಡಿ ಪಾಳ್ಯದಲ್ಲಿ ಅವನು 'ಮಾದು ಹೇರ್ ಕಟಿಂಗ್ ಅಂಡ್ ಸಲೂನ್' ಪ್ರಾರಂಬಿಸಿ ಹತ್ತು ಹನ್ನೆರಡು ವರ್ಷಗಳೆ ಕಳೆದಿದ್ದವು. ಮೊದಲಿಗೆ ಸಾದರಣ  ಜಾಗ, ಹತ್ತಿರ ರಿಂಗ್ ರೋಡ್ ಹಾದು ಹೋದಂತೆ ಜನದಟ್ಟಣೆಯ ಪ್ರದೇಶವಾಯಿತು. ಎದುರಿಗೆ 'ಮಂಜು ಕೆಫೆ' ಪ್ರಾರಂಬವಾದ ನಂತರ ಅವನಿಗು ವ್ಯಾಪಾರ ಏರುಮುಖವಾಯಿತು.

   ಕುರ್ಚಿಯಲ್ಲಿ ಕುಳಿತವನ ತಲೆಯನ್ನೊಮ್ಮೆ ತೃಪ್ತಿಯಿಂದ ನೋಡಿದ ಮಾದು  'ಸರಿಯಾಯ್ತ ಸಾರ್? ಇನ್ನು ಸ್ವಲ್ಪ ಶಾರ್ಟ್ ಮಾಡಲ?" ಎಂದ,  ಅವನು ಕನ್ನಡಿಯಲ್ಲಿಯೆ ಇವನನ್ನು ನೋಡುತ್ತ 'ಬೇಡ ಸರಿಯಾಗಿದೆ' ಎಂದ.ಅವನ ತಲೆ ಬಾಚತೊಡಗಿದ ಮಾದು, ಇವನನ್ನು ಕಳಿಸಿದರೆ ಎದುರಿಗೆ ಹೋಗಿ ಕಾಫಿ ಕುಡಿದುಬರಬಹುದು ಅಂತ ಅವನ ಯೋಚನೆ.ಬಾನುವಾರ ಹೊರತುಪಡಿಸಿ ಉಳಿದ ದಿನ ಬೆಳಗ್ಗೆ ಹತ್ತರ ನಂತರ ಜನ ಕಡಿಮೆ ಈದಿನ ಗುರುವಾರ ಅಂದುಕೊಳ್ಳುವಾಗಲೆ ಅಂಗಡಿ ಎದುರು ದಡದಡ ಶಬ್ದ ಮಾಡುತ್ತ ಬಂದ ಬುಲೆಟ್ ಬೈಕ್ ನಿಂತಿತು. ಅದರ ಸವಾರ ಮಾದುವಿನ ಅಂಗಡಿ ಒಳಗೆ ಬರತೊಡಗಿದ.ಆಜಾನುಬಾನು ವ್ಯಕ್ತಿತ್ವ, ತಲೆಯಿತ್ತಿ ನೋಡಬೇಕಾದ ಎತ್ತರ,ಮುಖ ಸದಾ ಗಂಭೀರ.ಅವನನ್ನು ನೋಡುವಾಗಲೆ ಮಾದುವಿನ ತುಟಿ ಅಪ್ರಯತ್ನವಾಗಿ ನುಡಿಯಿತು 'ಅಣ್ಣ' ಎಂದು.ಮಾದು ಬೇಗ ಕುಳಿತಿದ್ದ ಗಿರಾಕಿಯನ್ನು ಎಬ್ಬಿಸಿ, ಕುರ್ಚಿ ಹಾಗು ಎದುರಿನ ಜಾಗ ಸ್ವಚ್ಚಮಾಡಲು ತೊಡಗಿದ.ಕುರ್ಚಿಯಿಂದ ಎದ್ದ ವ್ಯಕ್ತಿ ಹೊರಗೆ ಹೋದ. ಒಳಗೆ ಬಂದ ಆಗುಂತಕ ವ್ಯಕ್ತಿಯನ್ನು ವಿನಯವಾಗಿ 'ಬನ್ನಿ ಅಣ್ಣ ಬನ್ನಿ' ಅಂತ ಸ್ವಾಗತಿಸಿದ ಮಾದು.

   ಒಳಬಂದ ಆಗುಂತಕ ಸುತ್ತಲು ಒಮ್ಮೆ ನೋಡಿ ತಲೆಯಾಡಿಸುತ್ತ ಮಾದು ತೋರಿದ ಕುರ್ಚಿಯಲ್ಲಿ ಕುಳಿತು ಎದುರಿನ ದೊಡ್ಡಕನ್ನಡಿಯಲ್ಲಿ ತನ್ನ ಮುಖನೋಡಿಕೊಂಡ.ನಿದಾನಕ್ಕೆ ಶರ್ಟಿನ ಮೇಲಿನ ಗುಂಡಿಗಳನ್ನು ತೆಗೆದು,ಶುಬ್ರವಾಗಿದ್ದ ದೊಡ್ಡ ಬಿಳಿಯಬಟ್ಟೆಯನ್ನು ಕುತ್ತಿಗೆಯ ಸುತ್ತಲು ಬರುವಂತೆ ಮಾಡಿ ಅಣ್ಣನಿಗೆ ಹೊದ್ದಿಸಿದ್ದ ಮಾದು, ಕೈಯಲ್ಲಿ ಕತ್ತರಿ ಬಾಚಣಿಗೆ ಹಿಡಿದು 'ಅಣ್ಣ ಶಾರ್ಟ್ ಮಾಡಲ? ಮೀಡಿಯಂ ಇರಲ?" ಅಂದ. ಅವನು ಮಾದುವಿನ ಮುಖ ನೋಡುತ್ತ "ಅದೇನು ಪ್ರತಿಸಲ ಕೇಳ್ತಿಯ, ಮಾಮೂಲಿನಂತೆ ನಿನ್ನ ಕೆಲಸ ಮಾಡು" ಎಂದ. ಅವನ ದ್ವನಿ ಮಾದುವಿಗೆ ಬೆಚ್ಚಿಬೀಳುವಂತೆ ಆಯಿತು.ಮಾದು ತನ್ನ ಕೆಲಸ ಪ್ರಾರಂಬಿಸಿದಂತೆ, ಆವ್ಯಕ್ತಿ ತಲೆಯನ್ನು ಕುರ್ಚಿಯ ಹಿಂಬಾಗಕ್ಕೆ ಒರಗಿಸಿ ಕಣ್ಣುಮುಚ್ಚಿ ಕುಳಿತ.

   ಅಣ್ಣ ಎನ್ನುವ ಆ ವ್ಯಕ್ತಿ ಸಾಮಾನ್ಯನಲ್ಲ. ನಗರದಲ್ಲಿನ ಆಯಿಲ್ ಮಾಫಿಯವನ್ನು ಸಂಪೂರ್ಣವಾಗಿ ತನ್ನ ವಶದಲ್ಲಿ ಹಿಡಿದಿದ್ದ ಸೋಮಶೇಖರ ರೆಡ್ಡಿ.ಅವನಿಗೆ ಹಲವು ಅನ್ವರ್ಥನಾಮಗಳು ಆಯಿಲ್ ಕಿಂಗ್,ಬಂಕ್ ಪಿನ್,ಇತ್ಯಾದಿ. ಅವನ ಜನರೆಲ್ಲ ಅವನನ್ನು 'ಅಣ್ಣ' ಎಂದೆ ಕರೆಯುತ್ತಿದ್ದರು. ಅವನಿಗೆ ಈರೀತಿ ಹೊರಗೆ ಓಡಾಡುತ್ತ ತನ್ನ ಕೆಲಸ ಮಾಡಿಕೊಳ್ಳುವದರಲಿ ಏನೊ ಥ್ರಿಲ್.ಅವನ ಹಿಂದೆ ಬಿದ್ದಿದ್ದ ಪೋಲಿಸ್ ಪಡೆಯಬಗ್ಗೆ ಅವನಿಗೆ ಚಿಂತೆ ಇರಲಿಲ್ಲ. ಪೋಲಿಸರ ಚಲನವಲನದ ಬಗ್ಗೆ ಸಾಕಷ್ಟು ಮುಂದಾಗಿಯೆ ಅವನಿಗೆ ಸುದ್ದಿ ಮುಟ್ಟುತ್ತಿತ್ತು. ಅವನಿಗೆ ಸಾಕಷ್ಟು ಜೀವಭಯವಿದ್ದು, ಮತ್ತೆರಡು ಗುಂಪುಗಳು ಇವನನ್ನು ಮುಗಿಸಿ ಆಯಿಲ್ ಮಾಫಿಯವನ್ನು ವಶಕ್ಕೆ ತೆಗೆದುಕೊಳ್ಳವ ಪ್ರಯತ್ನದಲ್ಲಿದ್ದರು.ಈಚೆಗೆ ಅವನಿಗೆ ಬಂದಿರುವ ಸೂಚನೆಯಂತೆ ವಿರೋದಿ ಗುಂಪುಗಳೆರಡು ಒಂದಾಗಿವೆ ಇವನನ್ನು 'ಡೀಲ್' ಮಾಡಲು.ಹಾಗಾಗಿ ಸದಾ ರಕ್ಷಣೆ ಇಟ್ಟುಕೊಂಡೆ ಅವನು ಓಡಾಡಬೇಕಿತ್ತು.ಈಗಲು ಮಾದು ಕತ್ತೆತ್ತಿ ನೋಡಿದರೆ ಕಾಣುತಿತ್ತು, ಎದುರಿನ 'ಮಂಜು ಕೆಫೆ' ಯಲ್ಲಿ ಮೂರು ಬೈಕ್ ಗಳಲ್ಲಿ ಬಂದ ಆರು ಜನ ದಡೂತಿ ವ್ಯಕ್ತಿಗಳು ಕಾಫಿ ಕುಡಿದು ಸಿಗರೇಟ್ ಸೇದುತ್ತ ನಿಂತಿದ್ದರು.ಅವರು ಸಾಮಾನ್ಯರಲ್ಲ ಅಣ್ಣನ ರಕ್ಷಣೆಗೆ ಬಂದ ಅಂಗರಕ್ಷಕರು. ಅವರು ಸುತ್ತಲು ತಮ್ಮ ದೃಷ್ಟಿ ಹರಸುತ್ತ ಕಾಯುತ್ತಿದ್ದರು. ಗಮನಿಸಿದರೆ ಅವರ ಪ್ಯಾಂಟ್ ಜೇಬಿನಲ್ಲಿ ಕುಳಿತಿರುವ ದೂರಕ್ಕು ಶೂಟ್ ಮಾಡಬಹುದಾದ ಪಿಸ್ತೂಲ್ ಗಳು ಅಡಗಿರುವುದು ಕಾಣುತ್ತಿದ್ದವು.ಬೈಕ್ ಗಳಲ್ಲಿ ಯಾವ ಕ್ಷಣಕ್ಕು ಸಿದ್ದವಾದ ಲಾಂಗ್ ಹಾಗು ಚೈನ್ ಗಳು.

   ಇಷ್ಟಾಗಿ 'ಅಣ್ಣ' ಎನ್ನುವ ಆ ವ್ಯಕ್ತಿ  ಮೈಮರೆತು ಕುಳಿತಿರಲಿಲ್ಲ, ನೋಡಲು ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದ್ದ ಅವನು ಸನ್ನದನಾಗಿಯೆ ಇದ್ದ. ಯಾರನ್ನು ನಂಬದ ಅವನು ಈ ಮಾದನನ್ನು ಹೇಗೆ ನಂಬಿಯಾನು.ಮಾದು ಹೊದೆಸಿದ ಹೊದಿಗೆಯ ಅಡಿಯಲ್ಲು ಅವನ ಕೈ ಪಿಸ್ತೂಲ್ ಮೇಲೆಯೆ ಇದ್ದು, ಯಾವ ಕ್ಷಣಕ್ಕು ಬೇಕಾದಲ್ಲಿ 'ಬುಲೆಟ್' ಚಿಮ್ಮಲು ಸಿದ್ದವಾಗಿತ್ತು. ಮಾದುವಿನ ಕೈಗಳು ಎಂದಿನಂತಿರದೆ ಇಂದು ಅಣ್ಣನ ತಲೆಯ ಮೇಲೆಲ್ಲ ಓಡಾಡುವಾಗ ನವಿರಾಗಿ ನಡಗುತ್ತಿದ್ದವು. ಅದಕ್ಕೆ ಕಾರಣ ಹಿಂದಿನ ದಿನ ರಾತ್ರಿ ನಡೆದ ಘಟನೆ ಮಾದುವಿನ ಮನದಲ್ಲಿ ತೇಲಿಹೋಗುತ್ತಿತ್ತು............

   ಮಾದು ರೂಮಿನಲ್ಲಿ ಒಬ್ಬನೆ ಇರುವುದು, ಬೆಳಗಿನ ದುಡಿಮೆಯ ಶ್ರಮ ಮರೆಯಲು ಸಂಜೆ ಸ್ವಲ್ಪ ಕುಡಿಯುತ್ತಿದ್ದ. ಊಟ ನಿದಾನವಾಗಿ ಮಾಡಿದರಾಯಿತೆಂದು ಹಾಗೆ ಕಾಲು ಚಾಚಿದ್ದ. ಹೊರಗೆ ಯಾರೊ ಬಾಗಿಲು ತಟ್ಟುತ್ತಿದ್ದಾರೆ. ಬೇಸರದಿಂದಲೆ ಎದ್ದು ಬಾಗಿಲು ತೆರೆದ ಎದುರಿಗೆ ಸೀನ ನಿಂತಿದ್ದ, ತನ್ನ ಅಂಗಡಿಯ ಖಾಯಂ ಗಿರಾಕಿ, ಆದರೆ ಮನೆಗೆ ಏಕೆ ಬಂದಿದ್ದಾನೆ ಅನ್ನಿಸುವಾಗಲೆ ಅವನು ಹೇಳಿದ "ಮಾದು ನಿನ್ನ ಜೊತೆ ಸ್ವಲ್ಪ ಮಾತಿತ್ತು, ಹೊರಗೆ ಬರ್ತೀಯ?" ಅದಕ್ಕೆ ಮಾದುವೆಂದೆ 'ಇಲ್ಲೆ ಹೇಳಬಹುದಲ್ಲ ನನ್ನದಿನ್ನು ಊಟವಿಲ್ಲ" 

  ಅದಕ್ಕೆ ಸೀನ  "ಮಾದು ಇಲ್ಲಿ ಸರಿ ಹೋಗಲ್ಲ ಸ್ವಲ್ಪ ಹೊರಗೆ ಬಾ " ಎಂದವನೆ ಹೊರಟ, ವಿದಿಯಿಲ್ಲದೆ ಮಾದು ಬಾಗಿಲಿಗೆ ಬೀಗ ತಗುಲಿಸಿ ಹಿಂದೆ ಹೊರಟ. ರಸ್ತೆಯ ಕಡೆಯಲ್ಲಿ ಕಾರು ನಿಂತಿತ್ತು, ಸೀನ ಅದನ್ನು ತೋರಿ ಹತ್ತು ಎಂದ, ಮಾದು ಮುಖ ಗಂಟಿಕ್ಕಿದ, ಇದೆಂತಹ ಪಿರಿಪಿರಿ ಇವನದು ಎಂದು. ಅದನ್ನು ಅರಿತವನಂತೆ ಸೀನ "ಬರಿ ಹತ್ತು ನಿಮಿಷವಷ್ಟೆ ಜಾಸ್ತಿ ಆಗಲ್ಲ" ಎಂದ. ಹಿಂದಿನ ಸೀಟಿನಲ್ಲಿ ಮಾದು ಹಾಗು ಸೀನ ಕುಳಿತಂತೆ ಕಾರು ಹೊರಟಿತು, ಆಗ ಮಾದು ಗಮನಿಸಿದ ಮುಂದಿನ ಸೀಟಿನಲ್ಲಿ ಡ್ರೈವರ್ ಅಲ್ಲದೆ ಪಕ್ಕದಲ್ಲಿ ಮತ್ತೊಬ್ಬ ಅಪರಿಚಿತ ದಡೂತಿ ವ್ಯಕ್ತಿಯಿದ್ದ. ಕಾರು ಚಲಿಸಿದಂತೆ ಕೇಳಿದ ಮಾದು "ನನ್ನ ಏಕೆ ಕರೆತಂದೆ ಹೇಳು?"

    ಅದಕ್ಕೆ ಸೀನ "ಮಾದು ಅಷ್ಟೊಂದು ಆತುರವ, ಸರಿ ಹೇಳ್ತಿನಿ, ನಾನೀಗ  ಭಯ್ಯ, ಬಷೀರ್ ಭಯ್ಯ ಕಡೆಯಿಂದ ಬರ್ತಿದ್ದೀನಿ.ನಿನಗೆ ಅಂತ ಒಂದು ಡೀಲ್ ಇದೆ' ಅಂದ. ಮಾದು ಕೆರಳಿದ " ಎಂತ ಮಾತದು ಸರಿಯಾಗಿ ಹೇಳು, ಭಯ್ಯ ಅಂದರೆ ಯಾರವನು? ಡೀಲ್ ಅಂದರೆ ಏನು?". ಕಾರಿನಲ್ಲಿ ಮುಂದೆ ಕುಳಿತಿದ್ದ ವ್ಯಕ್ತಿ ಕ್ರೂರವಾಗಿ ಹಿಂದೆ ನೋಡಿದ. ಸೀನ ಮಾದುವಿನ ಹೆಗಲ ಮೇಲೆ ಕೈಯಿಟ್ಟ " ಮಾದು ಹಾಗೆಲ್ಲ ಮಾತಾಡಬೇಡ, ಡೇಂಜರ್, ನಿನಗೆ ತಿಳಿಯದ್ದೇನು, ಭಯ್ಯ ಅಂದರೆ ಬಷೀರ್ ಭಯ್ಯ ಅಂಡರ್ ಗ್ರೌಂಡ್ ಗೆ ಗೊತ್ತಿರುವ ಮಾಫಿಯ ಕಿಂಗ್, ಅವನ ಪರವಾಗಿ ನಿನ್ನ ಹತ್ತಿರ ಬರುತ್ತಿದ್ದೀನಿ" 

  ಮಾದುವಿನ ಹೃದಯ ಬಡಿತವೇರಿತು ಅವನು ತುಸು ಗೊಂದಲಗೊಂಡು ಅಂದ " ನನ್ನ ಹತ್ರ ಎಂತ ಡೀಲ್, ನನಗೂ ಅವನಿಗು ಎಂತ ಸಂಭಂದವೆ ಇಲ್ಲ?"  ಅದಕ್ಕೆ ಸೀನನೆಂದ "ಹೌದು ನಿನಗೆ ಸಂಭಂದವಿಲ್ಲ ಅಂತಲೆ ನಿನ್ನ ಹತ್ತಿರ ಬರುತ್ತಿರುವುದು. ನಾಳೆ ಒಬ್ಬ ವ್ಯಕ್ತೀನ ಮುಗಿಸಬೇಕು".  ಮಾದು ಬೆಚ್ಚಿಬಿದ್ದು ಅಂದ "ಸೀನ ನೀನು ನನ್ನನ್ನೇನು ಮಾಡಿದ್ದೀಯ? ನಾನು ಕೊಲೆಗಾರ ಅಲ್ಲ, ಸುಫಾರಿ ಕೊಡ್ತೀಯಾ? ನನಗಿದೆಲ್ಲ ಆಗಲ್ಲ, ನನಗೆ ಕಟಿಂಗ್ ಶೇವಿಂಗ್ ಗೆ ಕತ್ತಿ ಹಿಡಿದು ಗೊತ್ತು ಹೊರೆತು, ಕುತ್ತಿಗೆ ಕತ್ತರಿಸಲು ಅಲ್ಲ" 

    ಸೀನ ನಗುತ್ತಿದ್ದ , "ಯಾಕೆ ಮಾದು ನಾಟಕ? ನನಗೆ ತಿಳಿಯದು ಅಂತಲ, ನೀನು ನಿನ್ನ ಹೆಂಡತಿಯ ಕುತ್ತಿಗೆ ಕತ್ತರಿಸಿದವನೆ ಅಲ್ಲವೆ? ಅದಕ್ಕೆ ನಿನಗೆ ಜೈಲು ಆಗಿದೆ, ನನಗೆಲ್ಲ ತಿಳಿದಿದೆ.ಸುಮ್ಮನೆ ನನ್ನ ಮಾತು ಒಪ್ಪಿದರೆ ನಿನಗೆ ಒಳ್ಳೆಯದು, ಇಲ್ಲ ಅಂದರೆ ಅದರ ಪರಿಣಾಮ ಬೇರೆ" ಎಂದ. ಮಾದುವಿಗೆ ಅರ್ಥವಾಯಿತು ಅಂಗಡಿಗೆ ತನ್ನ ಗೆಳೆಯನಂತೆ ಬರುತ್ತಿದ್ದವನು ಈಗ ಕುತ್ತಿಗೆ ಕತ್ತರಿಸಲು ಸಿದ್ದನಾಗೆ ಬಂದಿದ್ದಾನೆ, ಅವನ ದ್ವನಿಯಲ್ಲಿಯ ಬೆದರಿಕೆ ಕಂಡು ಸ್ಥಬ್ದನಾದ. ತನ್ನ ವಿಷಯ ಇವನಿಗೆ ಹೇಗೆ ತಿಳಿಯಿತು ಅನ್ನಿಸಿ  " ಥೂ ಎಂತ ಬದುಕು! " ಎಂದುಕೊಂಡ.

  ಮಾದುವಿನ ಸ್ವಂತ ಸ್ಥಳ ಕೊಯಮತ್ತೂರು. ಅವನ ಹೆಸರು ಮಾದವನ್, ಕೇರಳದವನು, ಹೆಂಡತಿ ಜೊತೆ ಸಂಭಂದ ಹದಗೆಟ್ಟು, ಅವಳ ದುರ್ನಡತೆಗೆ ರೋಸಿ ಕಡೆಗೆ ಪರಿಸ್ಥಿಥಿಯ ಒತ್ತಡಕ್ಕೆ ಸಿಲುಕಿದಾಗ ಮಾದು ಅವನ ಕೈಯಲ್ಲಿದ್ದ ಕತ್ತಿಯಿಂದ ಅವಳ ಕುತ್ತಿಗೆ ಕತ್ತರಿಸಿ, ತಾನೆ ಪೋಲಿಸರಿಗೆ ಶರಣಾಗಿದ್ದ. ನಂತರ ಎಂಟುವರ್ಷಗಳ ಜೈಲು ಶಿಕ್ಷೆಯನ್ನು ಮುಗಿಸಿ, ಅಲ್ಲಿರಲು ಮನಸಾಗದೆ ಬೆಂಗಳೂರು ಸೇರಿದ. ತನಗೆ ಗೊತ್ತಿದ್ದ ವೃತ್ತಿ ತಾನು ಗೌರವವಾಗಿ ಕಾಣುತ್ತಿದ್ದ ಕುಲಕಸುಬು ಕ್ಷೌರಿಕನ ಕೆಲಸ, ಹಾಗಾಗಿ ಬೆಂಗಳೂರಿನ ಪಾಪರೆಡ್ಡಿ ಪಾಳ್ಯದಲ್ಲಿ ಕಟಿಂಗ್ ಶಾಪ್ ತೆಗೆದು ನೆಲೆಸಿದ್ದ. ಅಂಗಡಿಯ ಹಿಂಬಾಗದಲ್ಲಿಯೆ ರೂಮಿನಲ್ಲಿ ವಾಸ ಒಂಟಿಜೀವನ. ಈಗ ಈ ಅತಂಕ.

   ಸುಮ್ಮನೆ ಕುಳಿತ ಮಾದುವನ್ನು ಸೀನ ಭುಜ ಹಿಡಿದು ಅಲುಗಿಸಿದ "ಏನು ಹೇಳಲಿಲ್ಲ ಮಾದು" ಎಂದ. ಈಗವನ ದ್ವನಿ ಇಳಿದಿತ್ತು "ನನಗೆ ಏನು ಹೇಳಲು ತಿಳಿಯದು, ನಾನೇನು ಬೇಕಂತಲೆ ಮಾಡಿದ ಕೊಲೆಯಲ್ಲ, ನನ್ನ ಗ್ರಹಚಾರ ಈಗೆಲ್ಲ ಮುಗಿಯಿತಲ್ಲ " ಎಂದ. ಅದಕ್ಕೆ ಸೀನ "ನೋಡು ಮಾದು ಈಗ ಆ ಮಾತೆಲ್ಲ ಬೇಡ, ನೀನು ಒಪ್ಪಿಕೊ ಈಗ ಅಡ್ವಾನ್ಸ್ ಅಂತ ತಗೋ " ಎಂದು, ಐವತ್ತು ಸಾವಿರ ರೂಪಾಯಿಗಳನ್ನು ಅವನ ಕೈಯಲ್ಲಿ ಇಟ್ಟ. ಮಾದು ಏನು ಮಾತಾಡಲಿಲ್ಲ ಈಗ ಏನು ಮಾತಾಡಿದರು ಕಷ್ಟವೆಂದು ಅವನಿಗೆ ಅರಿವಾಗಿತ್ತು. ತಾನು ಈ ಕೆಲಸ ಆಗುವದಿಲ್ಲವೆಂದರೆ ಯಾವ ಕರುಣೆಯು ಇಲ್ಲದ ಈಗಲೆ ಕತ್ತರಿಸಿ ಹಾಕಿ ಹೋಗುತ್ತಾರೆ!  ಮಾಫಿಯ ಜಗತ್ತೆ ಹಾಗೆ. 

   ಸುಮ್ಮನೆ ಕುಳಿತಿದ್ದ ಮಾದುವಿಗೆ ಸೀನನೆಂದ "ಈಗ ನೀನು ಮಾಡಬೇಕಾದ ಕೆಲಸ ಕೇಳಿಸಿಕೊ. ನಾಳೆ ಗುರುವಾರ ನಿನಗೂ ಗೊತ್ತಿದೆ, 'ಆಣ್ಣ' ನಿನ್ನ ಅಂಗಡಿಗೆ ಬರುತ್ತಾನೆ, ಅವನು ಶೇವಿಂಗಿಗೆ ಕುಳಿತಾಗ ಅವನ ಕೈಯಲ್ಲಿ ಏನು ಇರಲ್ಲ ನಿನ್ನ ಕೈಯಲ್ಲಿ ಕತ್ತಿ ಇರುತ್ತೆ, ನೀನು ಅವನ ಕುತ್ತಿಗೆಯನ್ನು ಸೀಳಿ ಹಾಕಬೇಕು, ನಿನಗೇನು ಮೋಸವಿಲ್ಲ ಇನ್ನು ಎರಡು ಲಕ್ಷ ಸಿಗುತ್ತೆ" ಅಂದ. ಮಾದು ಕುಳಿತಲ್ಲೆ ನಡುಗಿದ, 'ಅಣ್ಣ' ಎನ್ನುವಾಗಲೆ ಅವನಿಗೆ ತಿಳಿಯಿತು, ಇದು ಮಾಫಿಯಾ ಯುದ್ದ, ತಾನು ಇವರ ನಡುವೆ ಆಯುಧವಾಗುತ್ತಿದ್ದೀನಿ. ನಂತರ ಪೋಲಿಸರು ತನ್ನನ್ನು ಹಿಡಿಯದಿದ್ದರು, 'ಅಣ್ಣ'ನಕಡೆಯವರು ತನ್ನನ್ನು ಉಳಿಸರು, ಕೋಳಿಯಂತೆ ತನ್ನ ಕುತ್ತಿಗೆ ಮುರಿದುಬಿಡುತ್ತಾರೆ. ಭಯ ಅವನ ಕಣ್ಣನ್ನು ತುಂಬಿತು.

   ಸೀನ ಹೇಳಿದ "ನೀನೇನು ಹೆದರಬೇಕಿಲ್ಲ, ಒಂದೆ ಎಳೆತ ಅಷ್ಟೆ ಕೊರಳನ್ನು ಕತ್ತರಿ ಈಚೆ ಓಡಿಬಂದು ಬಿಡು, ನಾನು ಕಾರು ತಂದು ನಿಲ್ಲಿಸುತ್ತೇನೆ, ನಿನ್ನನ್ನು ಸೀದಾ ಬಸ್ ನಿಲ್ದಾಣಕ್ಕೆ ಕರೆದೊಯ್ಯುತ್ತೇನೆ, ನೀನು ಊರಿಗೆ ಹೋಗಿಬಿಡು, ಯಾರಿಗಾದರು ತಿಳಿಯುವ ಮುಂಚೆ ನಿನ್ನ ಊರು ಸೇರಿಬಿಡುತ್ತಿ. ನೀನು ಯಾರು ಅಂತಲು ಇಲ್ಲಿ ಯಾರಿಗು ತಿಳಿಯದು" ಅಂದ. ಮಾದುವನ್ನು ಅವನ ಮನೆಯ ಹತ್ತಿರ ಇಳಿಸುವ ಮುಂಚೆ ಮತ್ತೆ ಹೇಳಿದ "ನೀನೇನಾದರು ಕೆಲಸ ಕೆಡಸಿದಲ್ಲಿ, ಡಬ್ಬಲ್ ಕ್ರಾಸ್ ಮಾಡಿದಲ್ಲಿ ನಾಳೆಯೆ ನಿನ್ನ ಕಡೆಯ ದಿನ ನೆನಪಿರಲಿ"..........

  ಅವನ ಮನಸಲ್ಲಿ ಹಿಂದಿನ ನೆನಪು ಹಾದು ಹೋಗುತ್ತಿರುವಂತೆ ಅಣ್ಣನನ್ನು ಗಮನಿಸಿದ. ಅವನು ಹಿಂದೆ ಒರಗಿ ಕಣ್ಣು ಮುಚ್ಚಿದ್ದ. ಕಟಿಂಗ್ ಮುಗಿಸಿದ ಮಾದು " ಅಣ್ಣ ಸರಿಯಾಯ್ತ ನೋಡಿ,ಶೇವಿಂಗ್ ಮಾಡಲ?" ಎಂದ.ಕನ್ನಡಿಯಲ್ಲಿ ತನ್ನ ತಲೆಯನ್ನು ನೋಡಿದ ಅಣ್ಣ ತೃಪ್ತಿಯಿಂದ ತಲೆಯಾಡಿಸಿ ಮಾದುವಿನತ್ತ ಒಂದು ಚೂಪು ನೋಟ ಬೀರಿದ "ಶೇವಿಂಗ್ ಮಾಡ್ತೀಯಾ? ಮಾಡಿಬಿಡು" ಅಂದ. ಮಾದು ಅಣ್ಣನ ಮೇಲೆ ಬಿದ್ದಿದ್ದ ಕೂದಲನ್ನೆಲ್ಲ ತೆಗೆದು ಸ್ವಚ್ಚಗೊಳಿಸಿ ತಲೆಯನ್ನೊಮ್ಮೆ ಬಾಚಿ ಸರಿ ಮಾಡಿ ಬಿಳಿಯ ಬಟ್ಟೆ ತೆಗೆದು, ಶೇವಿಂಗೆಗೆ ಬೇರೆ ಬಟ್ಟೆ ಹೊದಿಸಿದ. ಕ್ರೀಮ್ ತೆಗೆದು ಕೆನ್ನೆಯ ಮೇಲೆ ಬಳಿದು, ಬ್ರಶನ್ನು ಬಿಸಿನೀರಿನಲ್ಲಿ ಅದ್ದಿ, ಮುಖ ಕೆನ್ನೆ ಹಾಗು ಗಲ್ಲದ ಮೇಲೆಲ್ಲ ನೊರೆ ಬರುವಂತೆ ಚೆನ್ನಾಗಿ ಆಡಿಸಿದ. ಅಣ್ಣ ತಲೆ ಹಿಂಬಾಗದಲ್ಲಿ ಕುರ್ಚಿಯ ಒರಗುಕೋಲಿಗೆ ಮುಖ ಆನಿಸಿ, ಮಾದುವಿನ ಮುಖ ನೋಡುತ್ತ ಕಣ್ಣು ಮುಚ್ಚಿದ.

   ಚಾಕುವಿನ ಬ್ಲೇಡ್ ಬದಲಾಯಿಸಿದ ಮಾದು, ಎಡಕೈಯಿಂದ ಅಣ್ಣನ ಕೆನ್ನೆಯನ್ನು ಸ್ವಲ್ಪ ಒತ್ತಿ ಬಲದ ಕೈಯಿಂದ ಶೇವಿಂಗ್ ಪ್ರಾರಂಬಿಸಿದ.ಸಾವಿರಾರು ಯೋಚನೆಗಳು ಅವನ ಮನಸನ್ನು ಒಟ್ಟಿಗೆ ಹಣ್ಣು ಮಾಡುತ್ತಿದ್ದವು. ಹೊರಗೆ ಶಾಂತನಂತೆ ತೋರುತ್ತಿದ್ದರು,ಮನಸು ಗೊಂದಲದ ಗೂಡಾಗಿತ್ತು. ಕೆನ್ನೆಯನ್ನು ಮುಗಿಸಿ ಈಗ ಅಣ್ಣನ ಗಂಟಲಿನ ಹತ್ತಿರ ಬ್ಲೇಡ್ ಆಡಿಸುತ್ತಿದ್ದ ಮಾದು, ತಲೆ ಹಿಂದಕ್ಕೆ ಮಾಡಿದ್ದರಿಂದ ಗಂಟಲಿನ ನಾಳಗಳು, ನರಗಳು ಎದ್ದು ಕಾಣುತ್ತಿದ್ದವು. ಅವನು ಹೇಳಿದಂತೆ ಕೇಳಿ ಸ್ವಲ್ಪ ಒತ್ತಿದ್ದರೆ ಸಾಕು ಕೆಲಸ ಮುಗಿಯುತ್ತದೆ, ನಾನು ವರ್ಷಗಳಲ್ಲಿ ದುಡಿಯುವ ಹಣವು ತನ್ನ ಕೈಸೇರುತ್ತದೆ. ಆದರೆ ಯಾವುದೊ ವಿವೇಕವೊಂದು ಅವನ ಮನಸನ್ನು ತುಂಬುತ್ತಿತ್ತು. ಅರಿಯದ ಭಾವವೊಂದು ಎಚ್ಚಿತ್ತು, ಅವನ ಮನಸಿನಲ್ಲಿ ಎಂತದೊ ಶಾಂತಿ ನೆಲಸುತ್ತಿತ್ತು. ತನ್ನ ಕರ್ತವ್ಯವೇನೆಂದು ತಕ್ಷಣ ನಿರ್ದರಿಸಿದ ಮಾದು. ಪರಿಣಾಮ ಏನೆ ಆಗಲಿ ತಾನು ಈ ಹೀನ ಕೆಲಸ ಮಾಡಬಾರದು. ನಿದಾನವಾಗಿ ಶೇವಿಂಗ್ ಮುಗಿಸಿ ಮುಖಕ್ಕೆ ಡೆಟಾಲ್ ಹಚ್ಚುತ್ತಿರುವಾಗ ಮಾದುವಿನ ಮುಖದಲ್ಲಿ ಎಂತದೊ ಶಾಂತಿ, ಒಂದು ಪ್ರಭೆ ತುಂಬಿಕೊಂಡಿತು. ಬಟ್ಟೆ ತೆಗೆದು ಶರ್ಟಿನ ಗುಂಡಿಗಳನ್ನು ಹಾಕುತ್ತ, ತನ್ನನ್ನೆ ನೋಡುತ್ತಿದ್ದ ಅಣ್ಣನಿಗೆ "ಅಣ್ಣ ಆಯ್ತು" ಅಂದ. 

   ನಿದಾನಕ್ಕೆ ಎದ್ದ ಅಣ್ಣ ಕನ್ನಡಿ ನೋಡಿ ಬಲಕೈಯಲ್ಲಿ ತನ್ನ ತಲೆಯ ಕೂದಲನ್ನು ಒತ್ತುತ್ತು ಹೊರಗೆ ಹೊರಟಂತೆ ಮಾದು ಅವನ ಹಿಂದೆ ಹೋದ. ಜೇಬಿನಿಂದ ನೂರರ ನೋಟನ್ನು ಅವನ ಕೈಯಲ್ಲಿರಿಸಿದ ಅಣ್ಣ ನಿದಾನವಾಗಿ ನಗುತ್ತ "ಮಾದು ಈ ಅಣ್ಣನ ಕುತ್ತಿಗೆಯ ನರ ಕತ್ತರಿಸಲು ಸುಫಾರಿ ತೆಗೆದುಕೊಂಡವನು ನೀನು, ಏಕೆ ಮಾಡಲಿಲ್ಲ ? " ಎಂದ. 

   ಭಯ ಅನ್ನುವುದು ಮಾದುವಿನ ಬೆನ್ನ ಹುರಿಯಿಂದ ಪ್ರಾರಂಬವಾಗಿ ದೇಹವನ್ನೆಲ್ಲ ವ್ಯಾಪಿಸಿತು. ಎಂಥ ಮನುಷ್ಯ ಇವನು, ತನ್ನನ್ನು ಕೊಲ್ಲಲ್ಲು ಸುಫಾರಿ ಕೊಡಲ್ಪಟ್ಟಿದೆ ಎಂದು ತಿಳಿದು ಸಹ ನನ್ನ ಎದುರಿಗೆ ಕೊರಳನ್ನು ಒಡ್ಡಿ ಕುಳಿತ ಇವನ ದೈರ್ಯವಾದರು ಎಂತದು?, ನಿನ್ನೆ ರಾತ್ರಿ ಕಾರಿನಲ್ಲಿ ಗುಟ್ಟಾಗಿ ನಡೆದ ಘಟನೆ ಇವನಿಗೆ ತಿಳಿದಿದ್ದಾರು ಹೇಗೆ? ಎಂದು ಮಂಕಾಗಿ ನಿಂತ. "ಹೇಳೂ ಮಾದು ನನ್ನನ್ನೇಕೆ ಸಾಯಿಸಲಿಲ್ಲ" ಕುತೂಹಲದಿಂದ ಕೇಳಿದ ಅಣ್ಣ. ನಿದಾನವಾಗಿ ಉಸಿರು ಎಳೆದುಕೊಂಡ ಮಾದು "ಹೇಳ್ತೀನಿ ಅಣ್ಣ ಅದಕ್ಕೆ ಕಾರಣ ವೃತ್ತಿ ಗೌರವ, ಅಣ್ಣ ,ವೃತ್ತಿ ಗೌರವ" ಎಂದ. ಅವನು ಆಶ್ಚರ್ಯದಿಂದ "ಅದೇನು" ಎಂದ.

   "ಹೌದು ಅಣ್ಣ ನನ್ನ ಮನಸಿನ ಯೋಚನೆ ಹೇಳಿಬಿಡ್ತೀನಿ,ನಾನು ಯಾವುದೋ ಅವೇಶದಲ್ಲಿ ನನ್ನ ಹೆಂಡತಿಯನ್ನು ಕೊಂದಿದ್ದೆ,ನಾನೇನು ಸುಫಾರಿ ಕೊಲೆಗಾರನಲ್ಲ. ಆದರೆ ನಿಮ್ಮನ್ನು ಕೊಲ್ಲದಿರಲು ಅದಕ್ಕಿಂತ ಮುಖ್ಯಕಾರಣವಿದೆ, ನಾನು ವೃತ್ತಿಯಲ್ಲಿ ಕ್ಷೌರಿಕ, ಈ ಕೆಲಸಕ್ಕೆ ಎಷ್ಟು ಸಾವಿರ ವರ್ಷಗಳ ಇತಿಹಾಸವಿದೆಯೊ ನನಗೆ ತಿಳಿಯದು, ಸಾವಿರಾರು ವರ್ಷಗಳಿಂದ ರಾಜಮಹಾರಾಜರಾಗಲಿ ಎಂತ ವೀರನೆ ಆಗಲಿ, ನಿರಾಯುಧನಾಗಿ ತನ್ನ ಕುತ್ತಿಗೆಯನ್ನು ತನ್ನ ಕ್ಷೌರಿಕನಿಗೆ ಒಪ್ಪಿಸಿ ನೆಮ್ಮದಿಯಾಗಿ ಕುಳಿತುಕೊಳ್ತಾನೆ ಅದು ಅವನ ಕೈಯಲ್ಲಿ ಕತ್ತಿ ಇರುವಾಗ. ಈ ಸಮಾಜಕ್ಕೆ ಅವನ ಮೇಲೆ ಎಷ್ಟು ನಂಬಿಕೆ!. ಈಗ ಹೇಳಿ ನಾನು ನಿಮ್ಮ ಕೊರಳನ್ನು ಸೀಳಿಬಿಟ್ಟರೆ, ಈ ಸುದ್ದಿ ಹೊರಗೆಲ್ಲ ಹರಡಿದರೆ, ನಾಳಿನಿಂದ ಕ್ಷೌರಿಕನನ್ನು ಈ ಸಮಾಜದಲ್ಲಿ ಯಾರು ನಂಬರು. ನಮ್ಮ ಎದುರು ಕುಳಿತುಕೊಳ್ಳಲು ಎಲ್ಲರಿಗು ಆತಂಕ. ನನ್ನಿಂದ ನಮ್ಮ ಕ್ಷೌರಿಕ ಸಮಾಜಕ್ಕೆ ಎಂತ ದ್ರೋಹವಾಗುತ್ತದೆ ಅಣ್ಣ.ನಾನು ದೈವವೆಂದು ನಂಬಿದ, ನನ್ನ ಕುಲವೃತ್ತಿಗೆ ಎಂದಿಗೂ ದ್ರೋಹಮಾಡಬಾರದೆಂದು ನಿರ್ದರಿಸಿದೆ." ಎಂದ.

   ಅಣ್ಣ ನಗುತ್ತ "ಅದು ಸರಿ ಈಗ ನಿನ್ನ ತಲೆಯ ಗತಿ ಅದನ್ನು ಆ ಭಷೀರ್ ಕಡೆಯ ಸೀನ ಹಾರಿಸಿದರೆ?" ಎಂದ. ಮಾದ "ಅಣ್ಣ ಆಗ ಅದು ದೇವರ ಇಚ್ಚೆ ಅಂದುಕೊಳ್ತೀನಿ" ಎಂದ. ಅಣ್ಣ ಅವನ ಕಡೆ ನೋಡುತ್ತ ನಗುತ್ತಲೆ ಹೋಗಿ ಬೈಕ್ ಸ್ಟಾರ್ಟ್ ಮಾಡಿದ. ದೂರದಿಂದ ಕುಂಟ ರಾಮ ಇವನ ಅಂಗಡಿಯತ್ತಲೆ ಓಡಿಬರುತ್ತಿದ್ದ. ಬಂದವನೆ " ಮಾದ ತಿಳೀತ ಪಕ್ಕದ ರಸ್ತೇಲಿ ಮರ್ಡರ್ ನಡೆದು ಹೋಯ್ತು, ನಿನ್ನ ಖಾಯಂ ಗಿರಾಕಿ ಗೊತ್ತಲ್ಲ ಸೀನ ಅವನು ಜೊತೆಗೆ ಯಾರು ಅವನ ಸ್ನೇಹಿತನಂತೆ", ಅಂದವನು ದ್ವನಿ ತಗ್ಗಿಸಿ  "ನಿನಗೆ ಗೊತ್ತ? ಜನ ಹೇಳ್ತಿದ್ದಾರೆ ಅಣ್ಣನ ಕಡೆಯವರಂತೆ ಅವರಿಬ್ಬರನ್ನು ಮುಗಿಸಿದ್ದು" ಎಂದ.ಬಹಳ ಜನ ಯಾರು ಅಣ್ಣನನ್ನು ನೋಡಿಲ್ಲ ,ಕುಂಟರಾಮನು ಸಹ!. 

   ಅಣ್ಣನ ಬೈಕ್ ಹೊರಟಂತೆ ತನ್ನ ಕಡೆ ಕಣ್ಣು ಹಾರಿಸಿದಂತಾಯ್ತು ಮಾದುಗೆ ಅಥವ ಅವನ ಭ್ರಮೆಯೊ!. ಎದುರಿನ ಹೋಟೆಲಿನಿಂದ ಮೂರು ಬೈಕ್ ಗಳು ಒಟ್ಟಿಗೆ ಹೊರಟವು ಅಣ್ಣನ ಬೈಕಿನ ಹಿಂದೆ.