Wednesday, February 27, 2013

ದೆವ್ವದ ಕಥೆ: ಹೆಂಡತಿಯನ್ನು ಹೊಡೆಯಬೇಡ !!!

ಮನುವಿನ ಮನೆ ಬಾಗಿಲು ತಟ್ಟಿದಾಗ ತೆಗೆದುದ್ದು ಅವನ ಶ್ರೀಮತಿ, ಸುಮಾ. ನನ್ನನ್ನು ಕಂಡು "ಒಳಗೆ ಬನ್ನಿ" ಎಂದು ನಗು ಮುಖ ಮಾಡಿದರು. ಹಾಲಿನಲ್ಲಿ ಸೋಫ ಮೇಲೆ ಅಜ್ಜಿ ಕುಳಿತಿದ್ದರು, ನನ್ನನ್ನು ಕಂಡು "ಬಾರಪ್ಪ ಕುಳಿತಿಕೊ" ಅಂತ ಸ್ವಾಗತ ಮಾಡಿದರು. ನಾನು "ಹೇಗಿದ್ದೀರಾ ಅಜ್ಜಿ" ಎಂದೆ. "ನನ್ನದೇನಪ್ಪ ಎಲ್ಲ ಮುಗಿಯಿತು, ಇರುವಷ್ಟು ದಿನ ಇದ್ದುಬಿಡುವುದು ಮೊಮ್ಮಗನಿಗೆ ಬಾರವಾಗಿ"  ಎಂದರು. "ಹಾಗೆಲ್ಲ ಏಕೆ ಅಂದುಕೊಳ್ಳುವಿರಿ, ಇರುವುದು ಹಾಯಾಗಿ ಇರುವದಪ್ಪ " ಎಂದೇನೊ ಹೇಳುತ್ತಿದ್ದೆ, ಅಷ್ಟರಲ್ಲಿ, ರೂಮಿನಲ್ಲಿ ಮಲಗಿದ್ದ ಮನು ಎದ್ದು ಈಚೆ ಬಂದು ನನ್ನನ್ನು ಕಂಡು "ಏನು ಬುರುಡೆ ಬಿಡುವ ದಾಸಯ್ಯನವರು ಬಂದು ಬಿಟ್ಟಿದ್ದಾರೆ" ಎಂದ.
 "ಮನೆಗೆ ಬಂದವರ ಜೊತೆ ಮಾತನಾಡುವ ರೀತಿ ತಿಳಿದಿಲ್ಲ ಎಂತದು ಅದೆಲ್ಲ" ಅಂತ ಪಾಪ ಅಜ್ಜಿ ಬೇಸರ ಮಾಡಿದರು. ಅವನು ನಗುತ್ತ
"ಕುಳಿತಿರು ಒಳಗೆ ಹೋಗಿ ಮುಖ ತೊಳೆದು ಬರುತ್ತೇನೆ ಅಜ್ಜಿ ಕೈಲಿ ನಿನ್ನ "ಬುರುಡೆ" ಕಥೆ ಹೇಳ್ತಿರು " ಎಂದು ಹೊರಟ. ಅಜ್ಜಿ "ಎಂತದಪ್ಪ ಅದು ಬುರುಡೆ ಕಥೆ" ಎಂದರು ಕುತೂಹಲದಿಂದ, ನಾನು ಸ್ವಲ್ಪ ಉತ್ಸಾಹದಿಂದಲೆ , ಕಡೂರಿನ ಅಣ್ಣಗೇರೀಗೆ ಹೋದ ಅನುಭವವನ್ನೆಲ್ಲ ವರ್ಣಿಸಿದೆ.
 ಅವರು "ಬಿಡಪ್ಪ ಕಥೆ ಚೆನ್ನಾಗಿಯೆ ಬರೆದಿದ್ದಿ" ಎಂದರು. ನನಗೆ ಕೋಪ ಬಂದಿತು, ಅಜ್ಜಿ ಅದು ಬರೆದ ಕತೆಯಲ್ಲಿ ನಿಜ ಅನುಭವ ಅನ್ನುವದರೊಳಗೆ, ಒಳಹೋಗಿದ್ದ ಮನು ಮುಖತೊಳೆದು, ಶರ್ಟ್ ಹಾಕಿ, ಕೈಯಲ್ಲಿ ಸ್ವೀಟ್ ನ ಪ್ಯಾಕೇಟ್ ಹಿಡಿದು ಬಂದ
" ನೋಡು ಸ್ವೀಟ್ ಇದೆ ತಿಂತೀಯ, ದಸರಾ ಹಬ್ಬಕ್ಕೆ ಆಫೀಸ್ ನಲ್ಲಿ ಕೊಟ್ಟಿದ್ದು, ಮನೆಯಲ್ಲಿ ಯಾರಿಗೆ ಕೊಟ್ಟರು ಬೇಡ ಅಂತಾರೆ ನೋಡು" ಅಂದ. ನನಗೆ ಕೋಪ ಬಂದಿತು,
"ಮನೇಲಿ ಯಾರು ಬೇಡ ಅನ್ನುವದನ್ನು ನಾನು ತಿನ್ನಲು ನನ್ನ ಹೊಟ್ಟೆ ಏನು ಕಸದಡಬ್ಬಿ ಅಲ್ಲ" ಎಂದೆ. ಅವನು
"ಒಹೋ ರಾಯರಿಗೆ ಕೋಪ ಬಂದಿತೇನೊ, ಅಲ್ಲಿ ಯಾವುದೊ ದೆವ್ವ ಕೊಟ್ಟ ಪಾಯಸ ತಿಂದು ಕತ್ತೆ ತರ ಮಲಗ್ತೀಯ, ಇಲ್ಲಿ ನಾನು ಕೊಟ್ಟಾಗ ಮಾತ್ರ ಕೋಪ ತೋರಿಸ್ತೀಯ " ಅಂತ ಜೋರಾಗಿ ನಗುತ್ತಿದ್ದ,
 ಅಜ್ಜಿ "ಮನು ಅದೆಂತದು ಪಾಪ ಅವನು ಮನೆಗೆ ಬಂದಾಗಲೆಲ್ಲ ಹಾಗೆ ಕಾಡ್ತಿ , ನಿನಗೆ ಹೆದರಿ ಅವನು ಮನೆಗೆ ಬರುವುದೆ ಬಿಡ್ತಾನೆ ಅಷ್ಟೆ" ಎಂದರು. ಅದಕ್ಕೆ ಮನು ನಗುತ್ತ
" ಎಲ್ಲಜ್ಜಿ ದೆವ್ವಕ್ಕೆ ಹೆದರದವನು ನನಗೆ ಹೆದರ್ತಾನ?" ಎಂದ. ಎಂದಿಗು ಬಗೆಹರಿಯದ ನಮ್ಮಿಬ್ಬರ ಜಗಳ ಬಿಡಿಸಲಾರದೆ ಅಜ್ಜಿ ಸುಮ್ಮನಾದರು. ಅಷ್ಟರಲ್ಲಿ ಸುಮ ಕಾಫಿತಂದರು. ಒಳಗೆ ಮಲಗಿದ್ದ ಮಕ್ಕಳಿಬ್ಬರು ಸನತ್ ಹಾಗು ಸಾಕೇತ್ ಎದ್ದು ಬಂದರು ನನ್ನನ್ನು ಕಂಡು,
"ದೆವ್ವದ .. ಅಂಕಲ್ ಬಂದಿದ್ದಾರೆ " ಎನ್ನುತ್ತಾ ಓಡಿ ಬಂದರು. ನನ್ನ ಪಕ್ಕ ಕುಳಿತು,
"ಅಜ್ಜಿ , ಅಂಕಲ್ ಬಂದಿದ್ದಾರೆ ಏನಾದರು ದೆವ್ವದ ಕತೆ ಹೇಳಿ" ಎನ್ನುತ್ತ ರಾಗ ಪ್ರಾರಂಬಿಸಿದರು.
ಅಜ್ಜಿ " ನಾನೆಂತದೊ ಹೇಳುವುದು ಅಂಕಲ್ಲೆ ಬುರುಡೆ ಕತೆ ಹೇಳ್ತಾರೆ ಕೇಳಿ" ಎಂದರು, ಅದಕ್ಕೆ ಮಕ್ಕಳು "ಅಯ್ಯೊ ಬುರುಡೆ ಕತೆನಾ! ಆಗಲೆ ಅಪ್ಪ ಹೇಳಿದ್ದಾರೆ, ಎಲ್ಲಾದರು ಬುರುಡೆ ಕತೆ ಹೇಳುತ್ತಾ, ನೀವು ಬೇರೆ ಕತೆ ಹೇಳಿ ಅಜ್ಜಿ " ಎನ್ನುತ್ತಾ ಕೇಳಿದವು.
  "ಮಕ್ಕಳೆ ಹಾಗೆಲ್ಲ ಅನ್ನಲಾಗದು ಕೆಲವೊಮ್ಮೆ ಸತ್ತು ಹೋದವರೆ ಆ ರೀತಿಯೆಲ್ಲ ಎದುರಿಗೆ ಬರುವುದು ಉಂಟು, ನೆಲದಲ್ಲಿ ಬುರುಡೆ ಸಿಗುವುದು ಉಂಟು" ಅಂದರು. ನನಗೆ ಅರ್ಥವಾಗಿತ್ತು ಅಜ್ಜಿ ಯಾವುದೊ ಕತೆಗೆ ಪೀಠಿಕೆ ಹಾಕ್ತಾ ಇದ್ದಾರೆ, ಅಂತ ನಾನು ಕಿವಿಗಳನ್ನು ಸರಿಪಡಿಸಿಕೊಂಡು ಕುಳಿತೆ.
------------------------------------------------------------------------------------------------------------------------
   ನಾನು ತುಮಕೂರಿನಲ್ಲಿ ಗಂಡನ ಜೊತೆ ಇದ್ದೆ ಅಂತ ಹೇಳಿದ್ದೆನಲ್ಲ ಆ ಕಾಲದಲ್ಲಿ ಇವರ ಜೊತೆ ಒಬ್ಬ ಕೆಲಸ ಮಾಡುತ್ತಿದ್ದವ ಸುದರ್ಶನ ಎಂದು ಹೆಸರು. ಅವನ ಹೆಂಡತಿ ರಾಜಲಕ್ಷ್ಮಿ ನನಗೆ ಒಳ್ಳೆ ಗೆಳತಿಯಾಗಿದ್ದಳು, ಆದರೆ ಸುದರ್ಶನ ಮಾತ್ರ ನಮ್ಮ ಯಜಮಾನರಂತಲ್ಲ, ಮನೆಯಲ್ಲಿ ಸದಾ ಹೆಂಡತಿ ಜೊತೆ ಗಲಾಟೆ, ಕೆಲವೊಮ್ಮೆ ಕೋಪ ಬಂದಾಗ ಹೆಂಡತಿಗೆ ಹಿಡಿದು ಬಾರಿಸಿಬಿಡುತ್ತಿದ್ದ, ಅಷ್ಟೆ ಅಕ್ಕರೆಯು ಇತ್ತು ಅಂತ ಇಟ್ಗೊ, ಹಾಗಿರಬೇಕಾದರೆ ಅವನಿಗೆ  ಮನೆ  ಕೊಳ್ಳಬೇಕು ಅಂತ  ಮನಸಿಗೆ ಬಂದಿತು. ಸರಿಯೆ ಊರಲ್ಲಿರುವ ಮಾರಟಕ್ಕಿರುವ ಮನೆ , ಖಾಲಿ ಸೈಟ್ ಗಳನ್ನೆಲ್ಲ ಜಾಲಡತೊಡಗಿದ. ಹೆಂಡತಿಯ ಸಲಹೆ ಕೇಳುವ ಸಹನೆ ಅವನಿಗಿರಲೂ ಇಲ್ಲ,

  ಸರಿ ಯಾರೊ ಹೇಳಿದರು ಎಂದು ಸೋಮೇಶ್ವರ ಭಡಾವಣೆಯ ಹಳೆ ಮನೆಯೊಂದನ್ನು ನೋಡಲು ಹೋದ. ಅಸಲಿಗೆ ಅದು ಮನೆಯೆ ಅಲ್ಲ , ಯಾವುದೊ ಕಾಲದಲ್ಲಿ ಬಿದ್ದುಹೋಗಿರುವ ಮುರುಕು ಗೋಡೆಗಳಷ್ಟೆ ಉಳಿದಿರುವ ಹಳೆಯ ಮನೆ.
ಸುದರ್ಶನ ಕೇಳಿದ ಮದ್ಯವರ್ತಿಯನ್ನು "ಇದೇನು ಮನೆ ಅಂದಿರಿ ಹೀಗಿದೆ?" .
ಅವನು ತನ್ನ ವ್ಯಾಪಾರಿ ವಾಕ್ಚಾತುರ್ಯದಿಂದ ಹೇಳಿದ " ನಿಮಗೆ ಖಾಲಿ ಜಾಗಕಷ್ಟೆ ಸಾರ್ ದರ ಹೇಳಿರುವುದು, ಎಲ್ಲವನ್ನು ಕ್ಲೀನ್ ಮಾಡಿಸಬೇಕು ಅಂತ, ಹೇಳಿ ನಿಮಗೆ ಕಡಿಮೆ ಮಾಡಿಸಿಕೊಡ್ತೀನಿ, ಈ ಮನೆಯ ಯಜಮಾನರು ಎಲ್ಲೊ ಮುಂಬಯಿಯಲ್ಲಿ ಇದ್ದಾರಂತೆ, ಅವರಿಗೆನು ಇದರ ಮೇಲೆ ಆಸಕ್ತಿಯಿಲ್ಲ, ನಾವು ಹೇಳಿದ ದರಕ್ಕೆ ಕೊಡುತ್ತಾರೆ, ಯಾವುದೊ ಕಾಲದಲ್ಲಿ ಅವರ ಅಪ್ಪ ಅಮ್ಮ ಈ ಮನೆಯಲ್ಲಿ ಇದ್ದರಂತೆ ಈಗ ಅವರು ಇಲ್ಲ, ನೀವು ನಿಮ್ಮದಾಗಿಸಿಕೊಂಡು ಬಿಡಿ , ಈ ರೀತಿಯ ಅವಕಾಶಗಳು ಸಿಗೋದು ಕಡಿಮೆ" ಎಂದ
     ಸುದರ್ಶನ ಲೆಕ್ಕ ಹಾಕಿದ, ಸೈಟಿನ ರೇಟು, ಮನೆ ಕಟ್ಟಿಸಲು ತಗಲುವ ವೆಚ್ಚ ಎಲ್ಲ ಲೆಕ್ಕ ಹಾಕಿದರೆ ತಾನು ಅಂದುಕೊಂಡಿದಕ್ಕಿಂತ ತುಂಬಾ ಕಡಿಮೆಗೆ ಕೆಲಸವಾಗುತ್ತದೆ. ಹೇಗೊ ವ್ಯವಹಾರವೆಲ್ಲ ಕುದುರಿ, ರಿಜೆಸ್ಟರ್ ಆಗಿ, ಗುದ್ದಲಿ ಪೂಜೆಯು ಮುಗಿಯಿತು. ಸುದರ್ಶನ ಹಾಗು ಅವನ ಹೆಂಡತಿ ರಾಜಲಕ್ಷ್ಮಿಗೆ ಮಹದಾನಂದ. ಆದರೆ ಆ ಸಂತೋಷ ತುಂಬ ಕಾಲ ಉಳಿಯಲಿಲ್ಲ.
   ಗುದ್ದಲಿಪೂಜೆಯ ಮರುದಿನ ಬೆಳಗ್ಗೆ ಪೂಜೆ ನಡೆಸಿದ ಜಾಗದಲ್ಲಿ ತಳಪಾಯಕ್ಕಾಗಿ ಅಗೆಯಲು ಪ್ರಾರಂಬಿಸಿದರು, ಹತ್ತು ಹದಿನೈದು ನಿಮಿಷವಾಗಿರಬಹುದೇನೊ, ನೆಲದಿಂದ ಮೂರು ಅಡಿ ಕೆಳಗೆ, ಹಾರೆಗೆ ಮನುಷ್ಯನ ತಲೆಬುರುಡೆಯೊಂದು ಸಿಕ್ಕಿತು. ಕೆಲಸದವ ಗಾಭರಿಯಿಂದ ಕೂಗಿಕೊಂಡ ಎಲ್ಲರು ಸೇರಿದರು. ಹಾಗೆ ಮಣ್ಣು ಬಿಡಿಸುತ್ತ ಹೋದ ಹಾಗೆ ಪೂರ್ಣ ಅಸ್ಥಿಪಂಜರ ಗೋಚರಿಸಿತು. .
     ಕುತ್ತಿಗೆಯಲ್ಲಿನ ಕರಿಮಣಿಯ ತಾಳಿಸರ, ಕಾಲುಬೆರಳಲ್ಲಿನ ಬೆಳ್ಳಿಯುಂಗರಗಳು ಎಲ್ಲವನ್ನು ನೋಡುವಾಗ ಸ್ವಷ್ಟವಾಗಿ ತಿಳಿಯುತ್ತಿತ್ತು ಅದೊಂದು ಹೆಣ್ಣಿನ ಅಸ್ಥಿಪಂಜರ ಅಂತ. ಕೆಲಸದವರು ಹೆದರಿ ಕೆಲಸ ನಿಲ್ಲಿಸಿಬಿಟ್ಟರು. ಸುದರ್ಶನನಿಗೆ ಏನು ತೋಚದಾಯಿತು.
      ಸಂಜೆ ಆಗುತ್ತಿತ್ತು, ಆರುಗಂಟೆ ಇರಬಹುದೇನೊ, ಒಬ್ಬನೆ ಮತ್ತೆ ಬಂದ ಅದೆ ಜಾಗಕ್ಕೆ, ಅಗೆದಿದ್ದ ಜಾಗ ಬಗ್ಗಿ ನೋಡಿದ. ಅಲ್ಲೆಲ್ಲ ಓಡಾಡಿ ಪಾಯಕ್ಕೆ ಅಂತ ಹಾಕಿದ್ದ ಕಲ್ಲೊಂದರ ಮೇಲೆ ಕುಳಿತು ಯೋಚನೆ ಮಾಡುತ್ತಿದ್ದ. ಏಕೆ ಹೀಗಾಯ್ತು? . ರಸ್ತೆಯ ಕಡೆಯಿಂದ ಯಾರೊ ವಯಸ್ಸಾದ ವ್ಯಕ್ತಿಯೊಬ್ಬ ಒಳಬಂದರು.
"ನೀವೆನಾ ಹೊಸದಾಗಿ ಈ ಜಾಗ ಕೊಂಡವರು ?" ಎಂದರು,
"ನಾನೆ , ಸುದರ್ಶನ ಎಂದು, ತಮ್ಮ ಪರಿಚಯವಾಗಲಿಲ್ಲ" ಎಂದ
"ನಾನು ಶೇಖರಮೂರ್ತಿ, ಇಲ್ಲಿಯೆ ತುಂಬಾ ವರ್ಷದಿಂದ ಇದ್ದೇನೆ, ಬೆಳಗ್ಗೆ ಕೆಲಸ ಪ್ರಾರಂಬಿಸಿದವರು ಏಕೊ ನಿಲ್ಲಿಸಿಬಿಟ್ಟಿರಿ ಏನು ಸಮಸ್ಯೆ" ಎಂದರು ಆತ.
"ಮತ್ತೇನಿಲ್ಲ ಅಗೆಯಲು ಪ್ರಾರಂಬಮಾಡಿದಂತೆ ಒಂದು ಅಸ್ಥಿಪಂಜರ ಸಿಕ್ಕಿತು, ಏನೊ ಹೆದರಿಕೆ, ಎಲ್ಲ ಕೆಲಸದವರು ಕೆಲಸ ನಿಲ್ಲಿಸಿಬಿಟ್ಟರು, ಈ ಮನೆಯಲ್ಲಿ ಮೊದಲು ಯಾರಿದ್ದರೊ ನನಗೆ ತಿಳಿಯದು, ನೀವು ಇಲ್ಲಿ ಹಳಬರೆನ್ನುತ್ತೀರಿ, ನಿಮಗೆ ಈ ಮನೆಯಲ್ಲಿದ್ದವರ ಪರಿಚಯವೇನಾದರು ಇತ್ತೆ, ಇಲ್ಲಿ ಅಸ್ಥಿಪಂಜರವಿರಲು ಕಾರಣವೇನಿರಬಹುದು ನಿಮಗೆ ಗೊತ್ತ?" ಎಂದೆಲ್ಲ ಪ್ರಶ್ನಿಸಿದ.
ಅದಕ್ಕೆ ಬಂದಿದ್ದ ವಯಸ್ಕ ಶೇಖರಮೂರ್ತಿ  ಸ್ವಲ್ಪ ಕಾಲ ಮೌನವಾಗಿ ಕುಳಿತ್ತಿದ್ದು ನಂತರ ಹೇಳಿದ
"ನೋಡಿ ನಾನು ನಿಮಗೆ ಹೇಳಬೇಕೊ ಅಥವ ಹೇಳಬಾರದೊ ತಿಳಿಯುತ್ತಿಲ್ಲ, ಸುತ್ತ ಮುತ್ತ ಜನ ಏನೆನೊ ಮಾತಾನಾಡಿಕೊಳ್ಳುತ್ತಾರೆ, ನನಗೆ ತಿಳಿದಿದ್ದನ್ನು ನಿಮಗೆ ತಿಳಿಸುತ್ತೇನೆ" ಎಂದು ಆ ಜಾಗಕ್ಕೆ ಸಂಬಂದಪಟ್ಟ ಕಥೆ ಹೇಳಿದರು.
    ಕೆಲವು ವರ್ಷಗಳ ಹಿಂದೆ ಈ ಮನೆಯಲ್ಲಿ ವಯಸ್ಸಾದ ದಂಪತಿಗಳು ವಾಸವಿದ್ದರು, ಅವರು ಹೆಸರು ನನ್ನದೆ ಶೇಖರ ಮೂರ್ತಿ ಎಂದು, ಆತನ ಪತ್ನಿ ಲಲಿತಮ್ಮ. ಅವರಿಗೆ ಒಬ್ಬನೆ ಮಗ ಮುಂಬಯಿಯಲ್ಲಿ ನೆಲೆಸಿದ್ದ, ಅವನಿಗೆ ಇಲ್ಲಿ ಹಿಂದಿರುಗಿ ಬಂದು ಅಪ್ಪ ಅಮ್ಮನ ಜೊತೆಯಿರಲು ಇಷ್ಟವಿಲ್ಲ, ಅಲ್ಲಿಯೆ ದೊಡ್ಡಕೆಲಸ. ಲಲಿತಮ್ಮನಿಗೆ ನಾವು ಮುಂಬಯಿಗೆ ಹೋಗಿ ಮಗನ ಜೊತೆ ಇದ್ದುಬಿಡಬೇಕು ಅಂತ ಆಸೆ. ಆದರೆ ಆತನಿಗೆ ಅದೇಕೊ ಇಷ್ಟವಿಲ್ಲ ಸ್ವಂತ ಮನೆಬಿಟ್ಟು ಎಲ್ಲಿಗೊ ಹೋಗಿ ಮಗನ ಕೈಕೆಳಗೆ ಇರುವದಕ್ಕಿಂತ ಇಲ್ಲಿ ಸ್ವಂತಂತ್ರವಾಗಿ ಇರುವುದೆ ಹಿತ ಎಂದು ಆತನ ವಾದ. ಆಗಾಗ್ಯೆ ಗಂಡ ಹೆಂಡತಿ ನಡುವೆ ಅದು ಚಕಮಕಿಗೆ ಕಾರಣವಾಗುತ್ತಿತ್ತು.

   ಆಕೆ ಮೂರು ಆರು ತಿಂಗಳಿಗೊಮ್ಮೆ  ಮಗನ ಮನೆಗೆ ಹೋಗ್ತೀನಿ ಎಂದು ಹೋಗಿ ಮುಂಬಯಿಯಲ್ಲಿದ್ದು ವಾರದೊಳಗೆ ಸೊಸೆಯ ಜೊತೆ ಹೊಂದಿಕೆಯಾಗದೆ ಹಿಂದೆ ಬರುತ್ತಿದ್ದಳು. ಹೀಗೆ ಒಮ್ಮೆ ಒಂದು ಅನಾಹುತವಾಗಿಹೋಯಿತು, ಏನೊ ಕಾರಣಕ್ಕೊ ಗಂಡ ಹೆಂಡತಿ ನಡುವೆ ಜಗಳ ಪ್ರಾರಂಬವಾಯಿತು. ಮದುವೆಯಾಗಿ ಅಷ್ಟು ವರ್ಷಕಳೆದಿದ್ದರು ಆಗುತ್ತಿದ್ದ ಅವರ ಜಗಳ ಎಲ್ಲರಲ್ಲು ಬೇಸರ ಮೂಡಿಸಿದ್ದು ಅಕ್ಕಪಕ್ಕದ ಜನಗಳು ತಲೆಕೆಡಸಿಕೊಳ್ಳುತ್ತಿರಲಿಲ್ಲ. ಕೋಪಗೊಂಡ ಗಂಡ ಅದೇನೊ ಹೆಂಡತಿಗೆ ಕೈಲಿದ್ದ ಕೋಲಿನಿಂದ ಬಾರಿಸಿದ, ತಪ್ಪಿಸಿಕೊಳ್ಳಲು ಓಡಿದ ಆಕೆ ಜಾರಿ ಅಡುಗೆಮನೆಯಲ್ಲಿದ ಕಲ್ಲಿನ ಕಟ್ಟೆಗೆ ತಲೆ ಒಡೆದು ಕೆಳಗೆ ಬಿದ್ದರು. ಒಂದು ಕ್ಷಣ ಅವನಿಗೆ ಏನಾಯಿತೆಂದೆ ಅರ್ಥವಾಗಲಿಲ್ಲ. ಪರೀಕ್ಷೆ ಮಾಡಿ ನೋಡಿದಲ್ಲಿ ಆಕೆ ಸತ್ತು ಹೋಗಿದ್ದರು.  ಆಗಲೆ ರಾತ್ರಿಯಾಗಿತ್ತು. ಏನು ತೋಚದೆ ಸುಮ್ಮನೆ ಕುಳಿತ.

  ರಾತ್ರಿಯೆಲ್ಲ ಯೋಚಿಸುತ್ತಿರುವಾಗ ಏನೊ ಹೊಳೆಯಿತು, ಅಡುಗೆಮನೆಯ ನೆಲದಲ್ಲಿ ಯಾವುದೊ ಕಾಲದ ತೊಟ್ಟಿಯಿತ್ತು. ಅದನ್ನು ಉಪಯೋಗ ಮಾಡದೆ ಸುಮ್ಮನೆ ಹಲಗೆ ಮುಚ್ಚಿ ಬಿಡಲಾಗಿತ್ತು. ಕಂಗಾಲಾಗಿದ್ದ ಮುದುಕ ಪಾಪ ಒಬ್ಬನೆ ಹೇಗೊ ಅವನ ಹೆಂಡತಿಯ ಶವವನ್ನು ಅದರಲ್ಲಿ ಮಲಗಿಸಿದ. ಮನೆಯ ಹೊರಗೆ ಕಾಂಪೋಡಿನ ಗಿಡಗಳ ನಡುವಿನಿಂದ ಕೆತ್ತಿ ಕೆತ್ತಿ ಮಣ್ಣನ್ನು ತಂದು ತೊಟ್ಟಿಯಲ್ಲಿ ತುಂಬಿಸಿದ. ನಂತರ ನೆಲವನ್ನು ಸರಿಮಾಡಿ ಮೆತ್ತಿ. ನೆಲವನ್ನು ಸಗಣಿಯಿಂದ ಸಾರಿಸಿದ.  ಮರುದಿನ ಹೊರಗೆ ಹೋಗಿ ಸ್ವಲ್ಪ ಸಿಮೆಂಟ್ ಮರಳು ಬ್ಯಾಗಿನಲ್ಲಿ ತಂದು ಗಾರೆಮಾಡಿ ಅದನ್ನು ತೊಟ್ಟಿಯ ಜಾಗದಲ್ಲಿ ಮೆತ್ತಿ ಅಲ್ಲಿ ತೊಟ್ಟಿ ಇತ್ತು ಅಂತ ಗುರುತು ಸಿಗದ ಹಾಗಾಗಿ ಹೋಯಿತು. ಇಷ್ಟಾಗುವಾಗ  ಎರಡು ಮೂರು ದಿನ ಕಳೆಯಿತು.  ವಾರ ಕಳೆದ ನಂತರ ಯಾರೊ ಕೇಳಿದರು ನಿಮ್ಮ ಪತ್ನಿ ಎಲ್ಲಿ ಪುನಃ ಮುಂಬಯಿಗೆ ಹೋದರ ಎಂದು. ಅವನಿಗೆ ಸರಾಗವೆನಿಸಿ "ಹೌದು" ಎಂದು ಬಿಟ್ಟ.  ಹದಿನೈದು ದಿನ ಕಳೆದ ನಂತರ ಮಗನಿಗೆ ಒಂದು ಪತ್ರಬರೆದ. ಇಲ್ಲಿ ಒಬ್ಬನೆ ಕಷ್ಟವಾಗುತ್ತಿದೆ ನಿಮ್ಮ ಅಮ್ಮನನ್ನು ಬೇಗ ಹಿಂದೆ ಕಳಿಸು ಅಂತ. ಮಾರುತ್ತರ ಬಂತು ಮಗನಿಂದ ಅಮ್ಮ ಅಲ್ಲಿ ಬಂದಿಲ್ಲ ಅಂತ. ಅಸಲಿಗೆ ಅವಳು ಹೋಗಿದ್ದರೆ ತಾನೆ. ನಂತರ ಸುದ್ದಿಯೆಲ್ಲ ಹಬ್ಬಿತ್ತು, ಮುಂಬಯಿಗೆ ಅಂತ ಹೋದ ಮುದುಕಿ ಎಲ್ಲಿಯೊ ತಪ್ಪಿಸಿಕೊಂಡಳು ಅಂತ ಎಲ್ಲ ಹುಡುಕಿ ಸುಮ್ಮನಾದರು. ಮಗನು ಸುದ್ದಿಪತ್ರಿಕೆಗೆಲ್ಲ ಅಮ್ಮನ ಚಿತ್ರ ಕೊಟ್ಟು ಸಿಕ್ಕರೆ ಯಾರಾದರು ತಿಳಿಸಬೇಕೆಂದು ಕೋರಿದ. ಎಲ್ಲ ನಿಷ್ಪಲ.

  ಮುದುಕನ ಆತಂಕವೇನೊ ಕಳೆಯಿತು ಆದರೆ ಅವನ ಒಳಗಿನ ಮನಸ್ಸು ಅವನನ್ನು ಸುಮ್ಮನಿರಲು ಬಿಡಲಿಲ್ಲ. ದಿನ ರಾತ್ರಿಯಾದರೆ, ಅಡುಗೆಮನೆಗೆ ಹೋಗಿ ಅವನ ಹೆಂಡತಿ ಸಮಾದಿ ಎದುರು ಕುಳಿತು ಬಿಡುವನು. ಊಟವಿಲ್ಲ ನಿದ್ರೆಯಿಲ್ಲ  ಮೇಲಾಗಿ ಒಂಟಿ ಜೀವನ. ಅವನ ಹೃದಯದಲ್ಲಿ ಏನು ಹಿಂಸೆಯಾಗುತ್ತಿತ್ತು ಯಾರು ಅರಿಯರು. ಹೀಗೆ ಆರು ಎಂಟು ತಿಂಗಳು ಕಳೆಯಿತೇನೊ,   ಹಿಂಸೆ ತಾಳಲಾರದೆ.  ಮುದುಕ ಅದೆ ಅಡುಗೆ ಮನೆಯ ತೊಲೆಗೆ ನೇಣು ಹಾಕಿಕೊಂಡು ಪ್ರಾಣಬಿಟ್ಟ. ಅದು ಅಕ್ಕ ಪಕ್ಕದ ಮನೆಯವರಿಗೆ ತಿಳಿಯುವಾಗ ಐದು ದಿನ ಕಳೆದಿತ್ತು. ಪೋಲಿಸರು ಬಂದರು. ನೇತಾಡುತ್ತಿದ್ದ ಹೆಣ ಇಳಿಸಿ , ಮುಂಬಯಿಯಲ್ಲಿದ್ದ ಮಗನಿಗೆ ಸುದ್ದಿ ಕಳಿಸಿ ಅವನು ಬಂದು ಎಲ್ಲ ಮುಗಿಯಿತು.  ಸಣ್ಣ ಗಲಾಟೆಯಲ್ಲಿ ಪ್ರಾರಂಬವಾದ ಅವರಿಬ್ಬರ ಜಗಳ ಇಬ್ಬರ ಜೀವವನ್ನೆ ತೆಗೆದುಕೊಂಡಿತ್ತು.

  ಕತೆ ಮುಗಿಸಿದ ಶೇಖರಯ್ಯ ಸುಮ್ಮನೆ ಕುಳಿತ, ಕೇಳಿದ ಸುದರ್ಶನನು ಅಷ್ಟೆ. ಪಾಪ! ಎಂತ ಅಂತ್ಯ ಎಂಬ ವಿಷಾದದಿಂದ ಕುಳಿತಿದ್ದವನು, ಪುನಃ ಗುಂಡಿಯ ಬಳಿ ಹೋದ. ಅವರಲ್ಲಿ ಕೇಳಿದ
"ನಾನೀಗ ಏನು ಮಾಡಲಿ, ಇಲ್ಲಿ ಮನೆ ಕಟ್ಟಿದಲ್ಲಿ ನನಗೆ ತೊಂದರೆಯಾಗದೆ ಹೆಂಡತಿ ಮಕ್ಕಳು ಇರುವವನು" ಎಂದ.
ಅದಕ್ಕಾತ " ಎಂತ ತೊಂದರೆಯಪ್ಪ ಇಲ್ಲಿ ನಡೆದಿದ್ದಕ್ಕು ನಿನಗು ಯಾವ ಸಂಬಂಧವು ಇಲ್ಲ, ಒಂದು ಕೆಲಸ ಮಾಡು, ಪಾಪ ಆ ಮುದುಕಿಗೆ ಸರಿಯಾದ ಸಂಸ್ಕಾರಗಳಾಗಿಲ್ಲ, ನೀನು ಈ ಎಲುಬಿನ ಗೂಡನ್ನು ಬಟ್ಟೆಯಲ್ಲಿ ತೆಗೆದುಕೊಂಡು ಹೋಗಿ ಕಾವೇರಿಯೊ ಯಾವುದಾದರು ತೀರ್ಥಕ್ಕೆ ಬಿಟ್ಟುಬಿಡು, ನಂತರ   ದಂಪತಿಗಳ ಶಾಂತಿಗಾಗಿ ಯಾರನ್ನಾದರು ಶಾಸ್ತ್ರಿಗಳನ್ನು ಕೇಳಿ ಒಂದಿಷ್ಟು ತಿಥಿಯನ್ನು ಏನಾದರು ಶಾಂತಿಯನ್ನೊ ಮಾಡು. ಅವರಿಬ್ಬರಿಗೆ ನೆಮ್ಮದಿ ಸಿಗುತ್ತದೆ, ನೀನು ಅಷ್ಟೆ ಇದನ್ನು ಎಚ್ಚರಿಕೆ ಎಂದು ಭಾವಿಸು ಮನೆ ಕಟ್ಟಿದ ನಂತರ ಯಾವುದೆ ಕಾರಣಕ್ಕು ನಿನ್ನ ಹೆಂಡತಿಯನ್ನು ನಿಂದಿಸುವುದು, ಹೊಡೆಯುವುದು ಏನು ಮಾಡಬೇಡ , ಅದರಿಂದ ನಿನಗೆ ಒಳ್ಳೆಯದಾಗಲ್ಲ ಎಂದು ತಿಳಿ " ಎಂದರು.
    ಅವನು ಆಗಲಿ ಎನ್ನುತ್ತ ಕೆಳಗೆ ನೋಡುತ್ತಿದ್ದವನಿಗೆ ಒಂದು ಸಂದೇಹ ಬಂದಿತು, " ಸರಿಯೆ ಅವರು ಪತ್ನಿಯನ್ನು ನೆಲದಲ್ಲಿ ಹುಗಿದಿದ್ದು, ಯಾರಿಗು ಗೊತ್ತಿಲ್ಲ ಹಾಗಿರಬೇಕಾದಲ್ಲಿ ನಿಮಗೆ ಹೇಗೆ ತಿಳಿಯಿತು" ಎಂದು ಕೇಳುತ್ತ ಹಿಂದೆ ನೋಡಿದ. ಆದರೆ ಅವನ ಜೊತೆ ಕುಳಿತು ಮಾತನಾಡುತ್ತಿದ್ದ ವ್ಯಕ್ತಿ ಎಲ್ಲಿಯು ಕಾಣಲಿಲ್ಲ. ಚಕಿತನಾದ "ಇಷ್ಟು ಬೇಗ ಹೇಗೆ ಎದ್ದು ಹೋಗಲು ಸಾದ್ಯ ಅದು ಮಾತನಾಡುತ್ತಲೆ". ಎಂದು ಬೇಗ ರಸ್ತೆಗೆ ಬಂದು ಆಕಡೆ ಈಕಡೆ ಪರಿಶೀಲಿಸಿದ. ಎಲ್ಲಿಯು ಯಾರ ಸುಳಿವು ಇಲ್ಲ. ಅವನ ಹಿಂದಿನಿಂದ ಕರಿಯ ಬೆಕ್ಕೊಂದು ನಿಶ್ಯಬ್ದವಾಗಿ ಹೊರಹೋದಾಗ ಅವನು ಬೆಚ್ಚಿ ಬಿದ್ದ.
  ಮರುದಿನ ಬೆಳಗ್ಗೆ ಸುದರ್ಶನ ಸೈಟಿನ ಹತ್ತಿರವಿದ್ದಾಗ , ಜಟಕಾದಲ್ಲಿ  ಹುಸೇನ ಬಂದಿದ್ದ, ಹಳೆಯ ಮನೆಯಲ್ಲಿದ್ದ ರಾಶಿ ರಾಶಿ ಕಬ್ಬಿಣ ಹಾಗು ಹಳೆಯ ವಸ್ತುಗಳನ್ನು ಮೂಲೆಯಲ್ಲಿ ರಾಶಿ ಹಾಕಿದ್ದು ಅದನ್ನು ಅವನಿಗೆ ತೆಗೆದುಕೊಂಡು ಹೋಗಲು ಸುದರ್ಶನ ಹೇಳಿದ್ದ. ಅವನು ಹಳೆಯದನ್ನೆಲ್ಲ ಅವನ ಜಟಕಾಗೆ ತುಂಬುತ್ತಿರುವಾಗ ಒಂದು ಫೋಟೋ ಕಾಣಿಸಿತು, ಸುದರ್ಶನ ಅದನ್ನು ಕೈಯಲ್ಲಿ ಹಿಡಿದು ನೋಡುತ್ತಿರುವಾಗ, ಅದೊಂದು ಗಂಡ ಹೆಂಡತಿಯ ಹಳೆ ಫೋಟೊ ಅದರಲ್ಲಿರುವ ಗಂಡಸಿನ ಮುಖ ನೋಡುವಾಗ ನಿನ್ನೆ ಸಂಜೆ ಬಂದು ಕತೆ ಹೇಳಿದ ವ್ಯಕ್ತಿಯೆ ಅನ್ನಿಸಿತು. ಇವನ ಕೈಯಲ್ಲಿರುವ ಫೋಟೊ ನೋಡಿ ಹುಸೇನ ಹೇಳಿದ
"ಇದಾ ಸಾಮಿ, ಈ ಮನೇಲಿದ್ದರಲ್ಲ ಶೇಖರಪ್ಪ ಅನ್ನೋರು ಅವರು ಅವರ ಸಂಸಾರದ್ದು, ಪಾಪ ಆ ಯಮ್ಮ ಎಲ್ಲೊ ಮುಂಬಯಿ ಹೋಗ್ತೀನಿ ಅಂತ ಹೇಳಿ ಹೋದಳು ತಪ್ಪಿಸಿಕೊಂಡು ಕಾಣದಂಗಾದ್ಳು, ಈ ಯಪ್ಪ ಒಬ್ಬನೆ ಏನಾಯ್ತೊ ಆರು ಏಳು ತಿಂಗಳಲ್ಲೆ ನೇಣ್ಗೆ ಹಾಕ್ಕೊಂಡು ಸತ್ತು ದೇವರ ಪಾದ ಸೇರ್ದ, ಪಾಪ ಅವನ್ದು ಜಾಗ ಈಗ ನೀವು ಕಟ್ಟಿಸ್ತ ಇದ್ದೀರಿ" ಎಂದ
  ಸುದರ್ಶನನಿಗೆ ಗಾಭರಿಯಾಯ್ತು, "ಸರಿಯಾಗಿ ನೋಡಯ್ಯ ಹುಸೇನ, ನಾನು ನಿನ್ನೆ ಸಂಜೆ ಈ ವ್ಯಕ್ತಿ ಜೊತೆ ಇಲ್ಲೆ ಮಾತಾಡಿದ್ದೇನೆ" ಅಂದ
ಅದಕ್ಕೆ ಹುಸೇನ " ನೀವೆಂತದು ಮಜಾ ಮಾಡ್ತೀರ ಸಾಮಿ, ನನಗೆ ಅವ ಚೆನ್ನಾಗಿ ಗೊತ್ತು, ದೋಸ್ತು, ಅವ ಹೋಗಿ ಯಾವ ಕಾಲ ಆಯ್ತು ನೀವು ಅದೆಂಗೆ ಅವನ್ದು ಜೊತೆ ಆಡ್ತೀರಿ ಮಾತಾ, ಇನ್ನಾರ್ನೊ ನೋಡಿ ನೀವು ಬೆಸ್ತು ಬಿದ್ದೀದ್ದೀರಿ ಬಿಡಿ" ಅಂದ.
  ಸುದರ್ಶನ ಅವನ ಜೊತೆ ಮಾತು ಮುಂದುವರಿಸದೆ ಸುಮ್ಮನಾದ.
---------------------------------------------------------------------     

ಅಜ್ಜಿ ಕತೆ ಮುಗಿಸಿದಾಗ , ನನಗೆ ಎಂತದೊ ಆಶ್ಚರ್ಯ. ಮತ್ತೆ ಕೇಳಿದೆ "ಅಲ್ಲ ಅಜ್ಜಿ ಆಮೇಲೆ ಅವರು ಮನೆ ಕಟ್ಟಿದ್ರ ಇಲ್ವ"
"ಕಟ್ಟದೆ ಏನು, ನಾನು ಅಮನೆ ಗೃಹಪ್ರವೇಶಕ್ಕು ಹೋಗಿ ಊಟ ಮಾಡಿ ಬಂದೆ, ಎಂತ ತೊಂದರೆಯು ಇಲ್ಲ, ಅವನ ಹೆಂಡತಿ ರಾಜಲಕ್ಷ್ಮಿ ಸಹ ಅಮೇಲೆ ಸಿಗುತ್ತಿದ್ದಳು, ಅವಳು ಸಂತೋಷವಾಗಿದ್ದಳು, ಅದೇಕೊ ಆ ಮನೆ ಕಟ್ಟಿದ ಮೇಲೆ ಸುದರ್ಶನ ತನ್ನ ಒರಟು ತನ ಬಿಟ್ಟು ಹೆಂಡತಿ ಹತ್ತಿರ ತುಂಬ ಮೃದುವಾಗಿ ನಡೆದು ಕೊಳ್ತಿದ್ದ, ಅವಳ ಮಾತಿಗೆ ಬೆಲೆ ಕೊಡ್ತಿದ್ದ , ಹಾಗಾಗಿ ಅವಳಿಗೆ , ಈ ಮನೆಗೆ ಬಂದ ನಂತರ ಎಲ್ಲ ಸರಿ ಹೋಯ್ತು ಅಂತ ಖುಷಿ"
ನಾನು ಸುಮ್ಮನೆ ಕುಳಿತಿದ್ದೆ. ಮನುವಿನ ಮಕ್ಕಳು ಸನತ್ ಸಾಕೇತ ಅಜ್ಜಿ ಮುಖ ನೋಡ್ತಾ ಇದ್ದವರು,
"ಹೋಗಜ್ಜಿ ಕತೆ ಚೆನ್ನಾಗೆ ಇಲ್ಲ,  ಇದಕ್ಕಿಂತ ಬುರುಡೆ ಕತೇನೆ ಚೆನ್ನಾಗಿದೆ ಅದನ್ನೆ ಹೇಳು " ಅಂತ ಗಲಾಟೆ ಮಾಡಿದರು.
ಅಜ್ಜಿ ಕೋಪ ಮಾಡಿ "ಹೋಗ್ರೊ ಕತೆನು ಇಲ್ಲ ಎಂತದು ಇಲ್ಲ, ಪರೀಕ್ಷೆ ಹತ್ತಿರ ಬಂತು ಓದಿಕೊಳ್ಳಿ" ಅಂತ ಬೈದು ಓಡಿಸಿದರು.
ನಾನು ಸರಿ ಟೈಮ್ ಆಯಿತು ಅಂತ ಎದ್ದು ಹೊರಟೆ. ಸಂಪದದ ವಿನಯ್ ಹೇಳಿದ ಮಾತು ನೆನಪಿಗೆ ಬಂತು,
"ಅಜ್ಜಿ ಸಂಪದದಲ್ಲಿ ನಿಮ್ಮ ಅಭಿಮಾನಿ ವಿನಯ್ ಅಂತ ನಿಮಗೆ "ಹಾಯ್" ಎನ್ನಲು ತಿಳಿಸಿದ್ದಾರೆ " ಎಂದೆ.
ಅಜ್ಜಿಗೆ ಅದೇನು ಅರ್ಥವಾಯಿತೊ "ಅದೆಂತದು ಹಾಯ್ , ಹಾಯಲು ನಾನೇನು ಹಸುವ ನನಗೆ ಕೊಂಬಿದೆಯ?" ಅಂದರು. ಮಕ್ಕಳು ಸುಮ ಮನು ಎಲ್ಲ ನಗುತ್ತಿದ್ದರು. ನಾನು ನಗುತ್ತ ನಮ್ಮ ಮನೆಗೆ ಹೊರಟೆ.

No comments:

Post a Comment

enter your comments please