Saturday, July 2, 2016

ಮನು ಮನುಸ್ಮೃತಿ ಇತ್ಯಾದಿ...

ಮನು ಮನುಸ್ಮೃತಿ ಇತ್ಯಾದಿ....



ನಾನು ಆಗಾಗ ಅಲ್ಲಲ್ಲಿ ಪತ್ರಿಕೆ ಓದುವಾಗ, ಮತ್ತೆಲ್ಲೊ ಪೇಸ್ ಬುಕ್ಕಿನಲ್ಲಿ ಓದುವಾಗ ' ಮನು ' ಎಂಬಾತನ ಬಗ್ಗೆ  ಅಥವ ಮನುಸ್ಮೃತಿಯ ಬಗ್ಗೆ , ಮನುಶಾಸ್ತ್ರದ ಬಗ್ಗೆ ಉಲ್ಲೇಖಗಳನ್ನು ಓದುತ್ತಿದ್ದೆ. ತೀರ ಈಚೆಗೂ ಪತ್ರಿಕೆಯಲ್ಲಿ ಮಂತ್ರಿಗಳೊಬ್ಬರು ಅಪ್ಪಣೆ ಕೊಡಿಸಿದ್ದರು , ಮನುಧರ್ಮ ಆದಾರಿತ ಈ ವೃತ್ತಿಗಳು ತೊಲಗ ಬೇಕು ಎಂದು.
ನನಗೆ ತೀರ ಕುತೂಹಲ ಅನ್ನಿಸುತ್ತಿತ್ತು, ಯಾರಿರಬಹುದು ಈ ಮನು ?
ಮನು ಅನ್ನುವಾಗಲೆಲ್ಲ, ನನ್ನ ಮನಸಿನಲ್ಲಿ ಸುಳಿಯುತ್ತ ಇದ್ದದ್ದು ಯಾರೋ ಒಬ್ಬ ಹಣೆಗೆಲ್ಲ ವಿಭೂತಿ ಬಳಿದುಕೊಂಡು, ಹಿಂದೆ ಜುಟ್ಟನ್ನು ಬಿಟ್ಟು , ಕುಳಿತ ಚಾಣಕ್ಯನಂತಹ ರೂಪವೆ ಕಣ್ಣೆದುರು ಇತ್ತು
ಮತ್ತು ಒಂದು ಸಂಶಯ ಕಾಡುತ್ತಿತ್ತು,
ಅಲ್ಲ ಯಾರೋ ಒಬ್ಬ ಮನು ಎನ್ನುವನು ಕುಳಿತು ಎಂತದೋ ಒಂದು ಪುಸ್ತಕ ಬರೆದುಬಿಟ್ಟರೆ ಎಲ್ಲರೂ ಅದನ್ನು ಏಕೆ ಅನುಸರಿಸುತ್ತಾರೆ ? .  ಅಲ್ಲದೆ ಭಾರತದ ಹಿಂಧೂದರ್ಮದ ಪರಂಪರೆಯೆ ಬೇರೆ ಯಜ್ಞವಲ್ಕ     ಎಂಬ ಬಾಲಕನೊಬ್ಬ ತನ್ನ ತಂದೆಯನ್ನು ಯಾಗದಲ್ಲಿ  ತನ್ನ ಅನುಮಾನ ಪರಿಹಾರಕ್ಕಾಗಿ ಎದುರಿಸಿ ನಿಂತವನು .  ಅಂತಹ ನೆಲದಲ್ಲಿ ಯಾರೋ ಒಬ್ಬ ಒಂದು ಪುಸ್ತಕ ಬರೆದಿಟ್ಟರೆ ಅದನ್ನು ಯಾಕಾದರು ಯಾರು ಅನುಸರಿಸುತ್ತಾರೆ.
ಮತ್ತೊಂದು ವಿಡಂಭನೆಯಿದೆ,  ವರ್ಣಾಶ್ರಮದಲ್ಲಿ ದುಡಿಯುವ ವರ್ಗ ಅಕ್ಷರಜ್ನಾನವಿಲ್ಲದವರಾಗಿದ್ದರು , ಹಾಗಿರುವಾಗ ಸಂಸ್ಕೃತದಲ್ಲಿ ಯಾರೋ ಒಬ್ಬ ಬರೆದಿಟ್ಟುದ್ದು ಅವರಿಗೆ ಹೇಗೆ ಅರಿವಿಗೆ ಬರಲು, ಅದನ್ನು ಅನುಸರಿಸಲು ಸಾದ್ಯ? .  ಅದನ್ನು ಬೇರೆ ರೀತಿ ಚಿಂತಿಸಬಹುದು. ಸಾಮಾನ್ಯವಾಗಿ ಬರೆಯುವರು ಆಗ ಆಚರಣೆಯಲ್ಲಿ ಇದ್ದುದ್ದನ್ನು ಒಬ್ಬ ಬರೆದಿಟ್ಟಿರಲು ಸಾದ್ಯ.
ಅಥವ ಮನು ಎಂಬ ರಾಜ ಯಾರಾದರು ಇದ್ದಲ್ಲಿ ಅವನು ಧರ್ಮ ಶಾಸ್ತ್ರವನ್ನು ಬರೆಸಿಟ್ಟರುವ ಸಾದ್ಯತೆ ಇದೆ .
ಮತ್ತೆ ಹುಡುಕಿದಾಗ ಮನು ಎಂಬ ಹೆಸರು ಬ್ರಹ್ಮನ ಮಗನೆಂದು ಪ್ರತಿ ನಾಲಕ್ಕು  ಯುಗಕ್ಕು ಮನ್ವಂತರವೆಂಬ ಹೆಸರು , ಒಟ್ಟು ಹದಿನಾಲಕ್ಕು ಮನ್ವಂತರಗಳು.

ಇನ್ನು ಮನುವಿಗೂ ಮನುಸ್ಮೃತಿಗೂ ಸಂಬಂಧ ಹುಡುಕುತ್ತ ಹೋದರೆ ಸಂಗತಿಗಳು ಗೋಚರಿಸಿದವು. ಮನು ಎನ್ನುವ ಒಬ್ಬ ವ್ಯಕ್ತಿ ಇದ್ದನೋ ಇಲ್ಲವೋ ಸ್ವಷ್ಟವೇ ಇಲ್ಲ. ಅದನ್ನು ಮೊದಲಿಗೆ ಮಾನವಧರ್ಮ ಶಾಸ್ತ್ರವೆಂದು ಕರೆಯುತ್ತ ಇದ್ದಿದ್ದು, ಆಮೇಲೆ ಮನುಸ್ಮೃತಿ ಎಂದಾಯಿತು .  ಆ ಮನು ಯಾರೋ ಏನೋ ಅವನ ಬಗ್ಗೆ ಇರುವ ವಿವರ ಸತ್ಯವೋ ಇಲ್ಲವೋ ಎಲ್ಲಿಯೂ ಸ್ವಷ್ಟವಿಲ್ಲ

ಸರಿ ಈಗ ಮನುಸ್ಮೃತಿಯ ಬಗ್ಗೆ ಒಂದಿಷ್ಟು ತಿಳಿಯೋಣ .......

ಮನುಸ್ಮೃತಿ  ಸರಿಸುಮಾರು ೧೭೯೪ ರಲ್ಲಿ ಸಂಸ್ಕೃತದಿಂದ ಅಂಗ್ಲಕ್ಕೆ ಅನುವಾದಿಸಲ್ಪಟ್ಟಿತು. ಈ ಅನುವಾದದ ಹೊಣೆಯನ್ನು ಹೊತ್ತವರು ಸರ್ ವಿಲಿಯಂ ಜೋನ್ಸ್ ಎಂಬಾತ .  ಆಗಿನ್ನು ಬ್ರಿಟೀಷರು ಭಾರತದಲ್ಲಿ ತಳ ಊರಿದ್ದರು.  ಭಾರತದಲ್ಲಿ ಹಿಂಧೂ ಧರ್ಮೀಯರಿಗೋಸ್ಕರ ರೂಪಿಸುತ್ತಿದ್ದ ಕಾನೂನಿನ ರೂಪರೇಖೆ ನಿರ್ಧರಿಸಲು ಭಾರತದ ಪುರಾತನ ಗ್ರಂಥವಾದ ಮನುಸೃತಿಯನ್ನು ಅನುವಾದಮಾಡಲಾಗಿತ್ತು.

ಮನುಸೃತಿಯ ಮೂಲ ಅಕರ ಯಾವುದೆಂದು ಯಾರಿಗೂ ಸ್ವಷ್ಟವಾಗಿರಲಿಲ್ಲ, ಸುಮಾರು ಐವತ್ತಕ್ಕೂ ಹೆಚ್ಚು ಹಸ್ತಪ್ರತಿಗಳು ದೊರೆತ್ತಿದ್ದವು. ಆಗ ದೊರೆತ ಪ್ರತಿಗಳನ್ನು ಒಂದಾದ ಕಲ್ಕತ್ತದ ಕುಲುಕಭಟ್ಟ ವ್ಯಾಖ್ಯಾನ ಹಸ್ತಪ್ರತಿ ಹೆಚ್ಚು ಅಧಿಕೃತ ಎಂದು ಭಾವಿಸಿ ಅದನ್ನು ಅನುವಾದಮಾಡಲಾಗಿತ್ತು.  ಆದರೆ ಈಚಿನ ದಿನಗಳಲ್ಲಿ ದೊರೆತ ಸುಮಾರು ಐವತ್ತಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಪರಿಶೀಲಿಸುವಾಗ , ಕಲ್ಕತ್ತ  ಅನುವಾದವನ್ನು ಸಹ ಅಧಿಕೃತ ಎಂದು ಒಪ್ಪಲಾಗುತ್ತಿಲ್ಲ. ಅಲ್ಲದೆ ಬೇರೆ ಬೇರೆ ಬರಹಗಳು ವಿಭಿನ್ನವಾಗಿ ತೋರುವ ಕಾರಣ, ಯಾವುದು ಅಧಿಕೃತ ಎನ್ನುವ ನಿರ್ಣಯ ಕಷ್ಟವೇ. ಅಲ್ಲದೆ  ಇವೆಲ್ಲ ಒಬ್ಬನದೆ ಕೃತಿಯೆಂದು ಒಪ್ಪುವುದು ಕಷ್ಟ. ಕಾಲ ಕ್ರಮೇಣ ಬೇರೆ ಬೇರೆ ಜನರು ಅದರಲ್ಲಿ ತಮ್ಮ ಅಭಿಪ್ರಾಯಗಳನ್ನು ಸೇರಿಸಿರುವ ಸಾದ್ಯತೆಯನ್ನು ಒಪ್ಪಲಾಗಿದೆ .  ಇವೆಲ್ಲ ಕ್ರಿ.ಪೂ. 2 ಮತ್ತು ಕ್ರಿ.ಶ 3 ನೇ ಶತಮಾನಗಳಲ್ಲಿ ರಚಿನೆಯಾಗಿರಬಹುದೆಂದು ಅಭಿಪ್ರಾಯವಿದೆ
ತಮಾಷಿ ಎಂದರೆ ಈ ಐವತ್ತಕ್ಕೂ ಮಿಕ್ಕಿದ ಯಾವುದೆ ಸಂಸ್ಕೃತ ಹಸ್ತಪ್ರತಿ, ಅಥವ ತಾಳೆಗರಿಗಳಲ್ಲಿ ಮನುವಿನ ಹೆಸರೇ ಪ್ರಸ್ಥಾಪವಾಗಿಲ್ಲ. ಮನುಸೃತಿ ಎನ್ನುವ ಹೆಸರು , ಮನು ಎನ್ನುವನ ಹೆಸರು ತೀರ ಈಚೆಗಷ್ಟೆ ಬಳಸಲಾಗಿದೆ !!!   ಆ ಕೃತಿಗಳಲ್ಲೆಲ್ಲ ಅದನ್ನು ಮಾನವ  ಧರ್ಮಶಾಸ್ತ್ರ ಎನ್ನುವ ಹೆಸರಿನಿಂದ ಗುರುತಿಸಲಾಗಿದೆ
ಇವುಗಳ ಕಾಲಮಾನವು ಬ್ರಿಟೀಶರು ಅನುವಾದ ಮಾಡುವಾಗ ಕ್ರಿ.ಪೂ. ೧೨೫೦ ರಿಂದ ೧೦೦೦ ಇರಬಹುದೆಂದು ಲೆಕ್ಕಹಾಕಿದ್ದು, ಅದರೆ ಅವುಗಳು ಲಿಪಿಯ ಆದಾರದಲ್ಲಿ ನಂತರ ಅವನ್ನು ಕ್ರಿ.ಪೂ. ೨  ಕ್ರಿ.ಶ ೩  ರ ನಡುವೆ ಇರಬಹುದೆಂದು ಗುರುತಿಸಲಾಯಿತು.
ಈ ಅನುವಾದಗಳನ್ನು ಹನ್ನೆರಡು ಅಧ್ಯಾಯಗಳಲ್ಲಿ ವಿಂಗಡಿಸಲಾಗಿದ್ದರು, ಮೂಲ ಕೃತಿಯಲ್ಲಿ ಈ ರೀತಿ ಯಾವುದೆ ವಿಂಗಡನೆ ಇರದೆ , ಸಾಮಾನ್ಯವಾಗಿ ನಾಲಕ್ಕು ವಿಭಾಗಗಳನ್ನು ಮೇಲು ನೋಟಕ್ಕೆ ಗುರಿತಿಸಬಹುದಾಗಿತ್ತು.
೧. ವಿಶ್ವ ನಿರ್ಮಾಣ   ೨. ಧರ್ಮಗಳ ಮೂಲ (ಉಗಮ)  ೩. ಚಾತರ್ವಣಗಳ ವಿವರಣೆ  ೪. ಕರ್ಮ ಮರುಜನ್ಮ ಹಾಗು ಮೋಕ್ಷ ಇತ್ಯಾದಿ

ವಿಶ್ವನಿರ್ಮಾಣದಲ್ಲಿ . ಬ್ರಹ್ಮಾಂಡದ ಜನನ , ಕಾಲ , ಆಕಾಶ ಇತ್ಯಾದಿಗಳ ವಿವರಣೆ
ಧರ್ಮಗಳ ಉಗಮದಲ್ಲಿ : ವೇದಗಳ ಮೂಲದಲ್ಲಿ ಧರ್ಮಗಳ ಉಗಮ ಅಲ್ಲದೆ , ಮನುಷ್ಯನ ಆಚರಣ ಪದ್ದತಿಗಳು , ಹಾಗು ಆತ್ಮಸಾಕ್ಷಿಯ ಬಗ್ಗೆ ವರ್ಣನೆ
ಚಾತುರ್ವಣಗಳ ಕರ್ಮ ದಲ್ಲಿ :
ಮೊದಲನೆ ವಿಭಾಗದಲ್ಲಿ
ಧರ್ಮವಿದಿಯಲ್ಲಿ ಭ್ರಾಹ್ಮಣರು ಪಾಲಿಸಬೇಕಾದ ವಿದಿಗಳು, ಧರ್ಮಗಳನ್ನು ವಿವರಿಸಲಾಗಿದ್ದು , ಅತ್ಯಂತ ದೊಡ್ಡ ವಿಭಾಗ ಇದಾಗಿರುತ್ತದೆ.  ಮನುಸೃತಿಯ ಈ ವಿಭಾಗ ಭ್ರಾಹ್ಮಣರ ಕರ್ತವ್ಯಗಳನ್ನು ತಪ್ಪಿದಾಗ ವಿದಿಸಬೇಕಾದ ಶಿಕ್ಷೆ ಪಶ್ಚತಾಪಗಳನ್ನು ವಿವರಿಸಲಾಗಿದೆ
ಎರಡನೆ ವಿಭಾಗದಲ್ಲಿ
ರಾಜನಾದವನ ಕರ್ತವ್ಯ, ಕಂದಾಯ ವಿದಿಸುವ ನಿಯಮ ರೀತಿಗಳು ,  ಪ್ರಜಾಪಾಲನೆ , ಯುದ್ದ ನಿಯಮ ಹೀಗೆ ಆಳ್ವಿಕೆಗೆ ಸಂಭಂದಿಸಿದ ವಿಧಿವಿದಾನಗಳಿವೆ
ಮೂರನೆ ವಿಭಾಗ :
ಅತಿ ಚಿಕ್ಕದಾಗಿದ್ದು,  ವೈಶ್ಯರಿಗಾಗಿ ಎಂಟು ವಿಧಿಗಳನ್ನು , ಶೂದ್ರರಿಗಾಗಿ ಎರಡು ನಿಯಮಗಳನ್ನು ವಿಧಿಸಲಾಗಿದೆ
ಇದಲ್ಲದೆ ಸಾಮಾನ್ಯವಾಗಿ ಅಪರಾದಗಳಿಗೆ ವಿಧಿಸಬಹುದಾದ ದಂಡನೆಗಳು , ಶಿಕ್ಷೆ ಇತ್ಯಾದಿಗಳ ವಿವರಗಳಿವೆ . ದಂಡ , ಬಹಿಷ್ಕಾರಾದಿ ವಿವರಗಳು , ಯುದ್ದ ಬರಗಾಲದಂತ ಅಪತ್ಸಮಯದ ಕಾನೂನುಗಳು ಇವುಗಳನ್ನು ವಿವರಿಸಲಾಗಿದೆ
ಈ ಕೃತಿಗಳು ಬಹುತೇಕ ಬ್ರಾಹ್ಮಣರ ಆಚರಣೆ ಹಾಗು ಕ್ಷತ್ರೀಯರ ಅಧಿಕಾರಗಳ ಬಗ್ಗೆ ಹೆಚ್ಚು ಹೆಚ್ಚು ವಿವರಣಗಳನ್ನು ಒಳಗೊಂಡಿದ್ದು, ವೈಶ್ಯ ಹಾಗು ಶೂದ್ರ ಸಮುದಾಯದ ಬಗ್ಗೆ ಅತಿ ಕಡಿಮೆ ವಿವರಗಳನ್ನು ಒಳಗೊಂಡಿದೆ . ಎಲ್ಲ  ಹಸ್ತಪ್ರತಿಗಳು ಬಹುತೇಕ ಮನುಷ್ಯನ ಆಚರಣೆಗಳ ಬಗ್ಗೆ ವಿವರಣೆಗಳನ್ನು , ಗೈಡ್ ಲೈನ್ಸ್ ನು ಒಳಗೊಂಡಿದೆ, ಉದಾಹರಣೆ: ಸನ್ಯಾಸಿ ಆದವನು ಒಂದಡೆ ನೆಲಸಬಾರದು,  ಪ್ರತಿನಿತ್ಯದ ಅಹಾರವನ್ನು ಅವನು ಬಿಕ್ಷೆಯ ಮೂಲಕವೇ ಸಂಪಾದಿಸಬೇಕು ಅನ್ನುವುದು.
ಹಾಗೆಯೆ ಮಾಂಸಹಾರದ ತಿನ್ನುವದರಿಂದ ವ್ಯಕ್ತಿಯ ಹಾಗು ಇತರೆ ಪ್ರಾಣಿಗಳ ಮೇಲೆ ಆಗಬಹುದಾದ ಪರಿಣಾಮ ವಿವರಿಸುತ್ತದೆ ಆದರೆ ಅದನ್ನು ಖಂಡಿಸದೆ ,  ಮಾಂಸ ಭಕ್ಷಣೆ , ಕುಡಿಯುವುದು , ಸ್ತ್ರೀ ಸಂಪರ್ಕ   ಇವುಗಳನ್ನೆಲ್ಲ ನೈಸರ್ಗಿಕ ಕ್ರಿಯೆಗಳು ತಪ್ಪುಗಳಲ್ಲ  ಎಂದು ಸಹ ಹೇಳಲಾಗಿದೆ

ವಿದವಾ ಸ್ತ್ರೀಯರು ಹೇಗೆ ಇರಬೇಕೆಂಬ ವಿದಿಗಳು, ಅಲ್ಲದೆ ಸ್ತ್ರೀಯರ ಬಗ್ಗೆ ವಿವರಿಸುತ್ತ ಅವಳು ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ , ನಂತರದಲ್ಲಿ ಗಂಡನ ಆಶ್ರಯದಲ್ಲಿ,  ಇಳಿವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ ಇರುವಳೆಂದು ತಿಳಿಸುತ್ತ, ಸ್ರೀಯರನ್ನು ಗೌರವಿಸಬೇಕೆಂದು ಪೂಜಿಸಬೇಕೆಂದು ವಿದಿಸಲಾಗಿದೆ ಸ್ತ್ರೀಯು ಸ್ವತಂತ್ರಳಾಗಿ ಇರಲು ಅರ್ಹಳಲ್ಲ, ಶಕ್ತಳಲ್ಲ ಎನ್ನುತ್ತದೆ ಮತ್ತೊಂದು ವಿದಿ.

ಮನುಸೃತಿ ( ಮಾನವಧರ್ಮ ಶಾಸ್ತ್ರ) ದ ಬಗ್ಗೆ  ವ್ಯಾಖ್ಯಾನಗಳಿವೆ, ಅವುಗಳಲ್ಲಿ ಮುಖವೆನಿಸುವುದು ಭರೂಚಿ, ಮೇಧಾತಿಥಿ,ಗೋವಿಂದರಾಜ, ಕುಲ್ಲುಕ, ನಾರಾಯಣ ನಂದನ ಇತರರು. ಇಷ್ಟೊಂದು ವ್ಯಾಖ್ಯಾನಗಳಲ್ಲಿ ಪರಿಶೀಲಿಸುವಾಗ  ಒಂದಕ್ಕೊಂದು ಹೋಲಿಕೆಯಿಲ್ಲದೆ ಯಾವುದು ನಿಜವಾದ   ವಿವರ ಎನ್ನುವ ಗೊಂದಲಗಳ ನಡುವೆಯು ಬ್ರಿಟೀಷರ ಸರ್ಕಾರ ಕಲ್ಕತ್ತ ಕುಲ್ಲುಕಭಟ್ಟರ ವ್ಯಾಖ್ಯಾನವನ್ನು ಅಧಿಕೃತ ಎಂದು ನಿರ್ಧರಿಸಿ ಅದನ್ನು ಕಾನೂನು ರೂಪಿಸಲು ಬಳಸಿತು.
ಮುಸ್ಲಿಮರಿಗಾಗಿ ಶರಿಯತ್ ಕಾನೂನು ಹಾಗು ಮುಸ್ಲೀಮರನ್ನು ಹೊರತು ಪಡಿಸಿ ಉಳಿದವರಿಗೆ ಹಿಂಧೂ ಜೈನ ಇತ್ಯಾದಿಗಳಿಗೆ ಮನುಸ್ಮೃತಿಯ ಅದಾರದ ಕಾನೂನನ್ನು ಬಳಸಲು ಬ್ರೀಟಿಷ್  ನಿರ್ಧರಿಸಿತು.
೧೯೭೨ ರಲ್ಲಿ ವಾರ್ನ್ ಹೇಸ್ಟಿಂಗ್ ಎನ್ನುವನು ಈ ರೀತಿ ಅಪ್ಪಣೆ ಕೊಡಿಸಿದ
That in all suits regarding inheritance, marriage, caste and other religious usages or institutions, the law of the Koran with respect to Mahometans [Muslims], and those of the Shaster with respect to Gentoos [Hindus] shall be invariably be adhered to.

— Warren Hastings, August 15, 1772[83]

ಈ ಮನುಸ್ಮೃತಿಯ ಬಗ್ಗೆ ಭಾರತದಲ್ಲಿ ಅಪಾರ ವಿರೋದ ವಿವಾದಗಳಿರುವಾಗಲೆ ಭಾರತದ ಹೊರಗೆ  ಬರ್ಮಾ ಥೈಲಾಂಡ್ ಕಾಂಬೋಡಿಯಾ ಜಾವಬಾಲಿ (ಇಂಡೋನೇಶಿಯ) ದಲ್ಲಿ ಈ ಮನುಸ್ಮೃತಿಯ ಕಾನೂನನ್ನು ಆದರದಿಂದ ಸ್ವಾಗತಿಸಿದರು , ಈ ಕಾನೂನುಗಳು ಪುರಾತನವಾಗಿದ್ದು ಸಹಜ ಎಂದು ಅವರು ಆ ಕಾಲಕ್ಕೆ ವರ್ಣಿಸಿದರು.

ಮನುಸ್ಮೃತಿ ಎಂದು ಹೆಸರಿಸಿದ ಮಾನವಧರ್ಮ ಶಾಸ್ತ್ರವಲ್ಲದೆ ಅಷ್ಟೇ ಪುರಾತನವಾದ ಯಜ್ಞವಲ್ಕ ಸ್ಮೃತಿ , ನಾರದ ಸ್ಮೃತಿ , ಪರಾಶರಮುನಿಯ ಸ್ಮೃತಿಗಳು ಆ ಕಾಲದ ತಜ್ಞ ರನ್ನು ಗಮನಸೆಳೆದಿದ್ದವು.

ಹತ್ತೊಂಬತ್ತು ಇಪ್ಪತ್ತನೆ ಶತಮಾನದಲ್ಲಿ ಬ್ರಿಟೀಶರ ಈ ಮನುಸ್ಮೃತಿ ಸಾಕಷ್ಟು ವಿವಾದ ಎದುರಿಸಿತು.  ಡಿಸೆಂಬರ್ ೨೫ ೧೯೨೭ ರಲ್ಲಿ ಬಾಬ ಅಂಬೇಡ್ಕರ್ ರವರು , ಮನುಸ್ಮೃತಿಯು ಜಾತಿಯತೆಯನ್ನು ಪ್ರತಿಪಾದಿಸುವದೆಂದು ವಿರೋದಿಸಿ, ಮನುಸ್ಮೃತಿಯನ್ನು ಸಾರ್ವಜನಿಕವಾಗು ಸುಟ್ಟರು.  ಮಹಾತ್ಮಗಾಂದಿಯವರು ಪುಸ್ತಕ ದಹನವನ್ನು ಒಪ್ಪದೆ ವಿರೋದಿಸಿದರು. ಗಾಂದೀಜಿಯವರ ಪ್ರಕಾರ ಜಾತಿಯತೆಯೂ ಭಾರತದ ಏಳಿಗೆಗೆ ಮಾರಕವೆಂದು ತಿಳಿಸಿದರು, ಆದರೆ ಅಂತಹ ಜಾತಿಯಬೇಧಕ್ಕು ಮನುಸ್ಮೃತಿ ಎಂಬ ಪುಸ್ತಕಕ್ಕೂ ಯಾವುದೆ ಸಂಬಂಧ ಇಲ್ಲವೆಂದು ತಿಳಿಸಿದರು. ಆ ಪುಸ್ತಕದಲ್ಲಿ ಎಲ್ಲರ ಕರ್ತವ ವಿವರಿಸಲಾಗಿದೆ ಹೊರತು ಅಲ್ಲಿ ಮೇಲು ಕೀಳು ಎಂದು ಬೇದಭಾವ ಮಾಡಲಾಗಿಲ್ಲ ಎಂದು ವಾದಿಸಿದರು.  ಬ್ರಿಟೀಷರಿಂದ ಅನುವಾದಗೊಂಡ ಈ ಪುಸ್ತಕ ಹಲವು ಅಸಂಗತಗಳನ್ನು ಒಳಗೊಂಡಿದ್ದರು ಸಹ ಅವುಗಳನ್ನೆಲ್ಲ ತಿರಸ್ಕರಿಸಿ ಅದರಲ್ಲಿ ಇರುವ ಒಳ್ಳೆಯ ಅಂಶಗಳಾದ  ಸತ್ಯ ಹಾಗು ಅಹಿಂಸೆಯ ಬಗೆಗಿನ ಅಂಶಗಳನ್ನು ಒಪ್ಪಿಕೊಳ್ಳಬಹುದೆಂದು ತಿಳಿಸಿದರು.

ಬ್ರಿಟೀಷರು ಮನುಸ್ಮೃತಿಯನ್ನು ಕಾನೂನಿನ ಪುಸ್ತಕವೆಂದು ತಪ್ಪಾಗಿ ಭಾವಿಸಿದ್ದರು, ಆದರೆ ಅದು ಕೇವಲ ಭಾರತೀಯರ ದಾರ್ಮಿಕ ಗ್ರಂಥವೆಂದೆ, ಅದು ಮುಸ್ಲಿಮರ ಶರೀಯತ್ ನಂತೆ ಕಾನೂನಿನ ವಿಧಿಗಳು ಅಲ್ಲವೆಂಬ ವಾದವೂ ಇದೆ
------------------------------------------------------------
ಇವೆಲ್ಲ ಮನು ಹಾಗು ಮನುಸ್ಮೃತಿಯ ಬಗೆಗಿನ ವಿವರಗಳು.  ಬಹುಶಃ ಇಂದು ಮನು ಹಾಗು ಮನುಸ್ಮೃತಿಯ ಬಗ್ಗೆ ಸಂದರ್ಭಾನುಸಾರವಾಗಿ ಉಲ್ಲೇಖಿಸುವ ಬಹಳ ಮಂದಿ ಮನು ಯಾರು ಮನುಸ್ಮೃತಿಯೇನು ಎನ್ನುವ ಬಗ್ಗೆ  ಮತ್ತಷ್ಟು ವಿವರ ಸಂಗ್ರಹಿಸಿದರೆ ಒಳಿತು. ಅಂತಹ ಪುಸ್ತಕಗಳು ಈಗೆಲ್ಲ ಸಿಗುವುದು ಓದುವುದು ಅಪರೂಪವೆ


https://en.wikipedia.org/wiki/Manu_Smriti
https://en.wikipedia.org/wiki/Manu_(Hinduism)

3 comments:

  1. ನೀವೆಳಿದ ಮಾತಿನಲ್ಲಿ ಸತ್ಯವಿದೆ, ಮನುಸ್ಮೃತಿಯ ಬಗ್ಗೆ ನಾನು ಕೂಡಾ ತಪ್ಪಾಗಿ ತಿಳಿದಿದ್ದೆ.! ಆದರೆ ನೀವು ಕೊಟ್ಟ ಈ ವಿವರಣೆ ಓದಿದ ಮೇಲೆ ಮನು ಅಥವಾ ಮನುಸ್ಮೃತಿ ಎಂಬುದು ಒಂದು ಮಾನವಶಾಸ್ತ್ರ, ಇದರಲ್ಲಿ ಮಾನವರು ಹೇಗೆ ಹೊಂದಾಣಿಕೆಯಿಂಧ ಬದುಕಬೇಕೆಂದು ಮಾತ್ರ ಉಲ್ಲೇಖವಾಗಿದೆ ಅದನ್ನು ಹೊರೆತುಪಡಿಸಿ ಯಾವುದೇ ರೀತಿಯ ಅಸ್ಪ್ರ್ಶುಶ್ಯತೆ, ಜಾತೀಯತೆ ಹುಟ್ಟುಹಾಕಿಲ್ಲ...@

    ReplyDelete
  2. ಆ ಪುಸ್ತಕ ಅಪ್ರಸ್ತುತ ಹಿಂದುತ್ವಕ್ಕೆ ಅದರ ಅಗತ್ಯವಿಲ್ಲ ....

    ReplyDelete
  3. ಪ್ರಸ್ತುತ ಪ್ರತಿಯೊಬ್ಬರೂ ತಮಗೆ ಅಭಿರುಚಿ ಇರುವ ವೃತ್ತಿಗಳನ್ನು ಹಾರಿಸಿಕೊಂಡು ಬದುಕುವುದನ್ನು ರೂಢಿಸಿಕೊಂಡಿದ್ದಾರೆ ಈ ದಿನ ಯಾವುದೇ ಜಾತಿಯ ವ್ಯಕ್ತಿಯು ರಾಜಕಾರಣದಲ್ಲಿ ಭಾಗವಹಿಸಬಹುದು ಯಾವುದೇ ಜಾತಿಯ ವ್ಯಕ್ತಿಯು ಸಂಸ್ಕೃತ ಪಟನೆ ಮಾಡಿ ಪೂಜಾ ಹವನಗಳಲ್ಲಿ ಭಾಗವಹಿಸಬಹುದು ಇಂದು ಯಾವುದೇ ಜಾತಿಯ ವ್ಯಕ್ತಿಯು ತನ್ನ ಬುದ್ಧಿ ಬಲದ ಸಹಾಯದಿಂದ ವ್ಯಾಪಾರವನ್ನು ಮಾಡಬಹುದು ಯಾವುದೇ ಜಾತಿಯ ವ್ಯಕ್ತಿಯು ತನ್ನ ಖುಷಿಯಿಂದ ಸರ್ಕಾರಿ ಕಚೇರಿಗಳಲ್ಲಿ ಗುಮಾಸ್ತನ ಕೆಲಸ ಮಾಡಿಕೊಂಡು ತನ್ನ ಮೇಲೆ ಅಧಿಕಾರಿಯು ಯಾವುದೇ ಜಾತಿ ಆಗಿದ್ದರು ಆತನಿಗೆ ಸಹಾಯಕನಾಗಿ ಕೆಲಸ ನಿರ್ವಹಿಸಬಹುದು
    ಇಂತಹ ಪ್ರಸ್ತುತ ಸಮಾಜಕ್ಕೆ ಭಾರತೀಯ ಸಂವಿಧಾನ ಅಂತಹ ಶ್ರೇಷ್ಠ ಗ್ರಂಥವೇ ಸೂಕ್ತ ಕಾರಣ ಭಾರತೀಯ ಸಂವಿಧಾನವು ಭಾರತೀಯ ಪ್ರಜೆಗೆ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಕಾನೂನಾತ್ಮಕವಾಗಿ ಪ್ರತಿಯೊಬ್ಬರಿಗೂ ಸರ್ವ ಸ್ವತಂತ್ರವನ್ನು ನೀಡಿರುತ್ತದೆ
    ಉತ್ತರ ಕೊರಿಯಾದಂತಹ ರಾಷ್ಟ್ರಗಳು ಇಂದಿಗೂ ಸರ್ವಾಧಿಕಾರದ ಆಚರಣೆಯಿಂದ ಅಲ್ಲಿಯ ಜನತೆಯ ಸ್ವಾತಂತ್ರ್ಯವನ್ನು ಕಸಿದುಕೊಂಡಿವೆ ಇದನ್ನು ಗಮನಿಸುವ ಪ್ರತಿಯೊಬ್ಬರು ಭಾರತೀಯ ಬೃಹತ್ ಸಂವಿಧಾನವನ್ನು ಗೌರವಿಸುವುದೇ ಸೂಕ್ತ

    ReplyDelete

enter your comments please